ಪಂಚ ಪರಿವರ್ತನೆಗಳಿಂದ ಸದೃಢ ಸಮಾಜ ನಿರ್ಮಿಸಬೇಕು

| Published : Nov 04 2024, 12:21 AM IST

ಸಾರಾಂಶ

ಪಂಚ ಪರಿವರ್ತನೆಗಳ ಮೂಲಕ ಸಮಾಜವನ್ನು ಸದೃಢಗೊಳಿಸುವ ಸಂಕಲ್ಪವನ್ನು ಮಾಡಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಶಾರೀರಿಕ ಪ್ರಮುಖ ಸತೀಶ್ ಹರಿಹರದಲ್ಲಿ ಹೇಳಿದ್ದಾರೆ.

- ಆರ್‌ಎಸ್‍ಎಸ್‍ ವಾರ್ಷಿಕ ಪಥಸಂಚಲನ ಸಭಾ ಕಾರ್ಯಕ್ರಮದಲ್ಲಿ ಸತೀಶ್‌ - - - ಕನ್ನಡಪ್ರಭ ವಾರ್ತೆ ಹರಿಹರ ಪಂಚ ಪರಿವರ್ತನೆಗಳ ಮೂಲಕ ಸಮಾಜವನ್ನು ಸದೃಢಗೊಳಿಸುವ ಸಂಕಲ್ಪವನ್ನು ಮಾಡಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಶಾರೀರಿಕ ಪ್ರಮುಖ ಸತೀಶ್ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಆರ್‌ಎಸ್‍ಎಸ್‍ ವಾರ್ಷಿಕ ಪಥಸಂಚಲನ ನಿಮಿತ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್‌ಎಸ್‍ಎಸ್ ಸ್ಥಾಪನೆಯಾಗಿ ಶತಮಾನ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಕುಟುಂಬ ನಿರ್ಮಾಣ, ಸಾಮರಸ್ಯ, ಪರಿಸರ, ಸ್ವದೇಶಿ ಭಾವ, ನಾಗರೀಕ ಶಿಷ್ಟಾಚಾರಗಳೆಂಬ ಪಂಚ ಪರಿವರ್ತನೆ ಮೂಲಕ ಪ್ರತಿಯೊಬ್ಬರೂ ಉತ್ತಮ ಸಮಾಜಕ್ಕಾಗಿ ಶ್ರಮಿಸಬೇಕಿದೆ ಎಂದರು.

ಜಗತ್ತಿಗೆ ವ್ಯಕ್ತಿತ್ವ ನಿರ್ಮಾಣ ಶಕ್ತಿಯ ಕಲ್ಪನೆ ನೀಡಿದ ಖ್ಯಾತಿ ಆರ್‌ಎಸ್‍ಎಸ್‍ಗೆ ಸಲ್ಲುತ್ತದೆ. ಜಗತ್ತಿನಲ್ಲಿ ಅಶಾಂತಿ, ಹಿಂಸೆಯ ವಾತಾವರಣ ನಿರ್ಮಾಣವಾದರೆ ಶಾಂತಿ ಮೂಡಿಸಲು ಪ್ರಪಂಚವೇ ಭಾರತದತ್ತ ನೋಡುವ ಪರಿಸ್ಥಿತಿ ಬಂದೊದಗಿದೆ. ಈ ಸಂಘಟನೆಯನ್ನು ಸಂಕುಚಿತ ಭಾವನೆಯಿಂದ ನೋಡುವವರು ಇಂದು ದೇಶದ್ರೋಹಿಗಳು ಎನ್ನಿಸಿಕೊಂಡಿದ್ದಾರೆ ಎಂದರು.

ಉದ್ಯಮಿ ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಹ್ಯ ಮತ್ತು ಆಂತರಿಕ ದುಷ್ಟಶಕ್ತಿಗಳು ಭಾರತವನ್ನು ಕುಗ್ಗಿಸಲು ಪ್ರಯತ್ನ ಮಾಡುತ್ತಿವೆ. ಆ ದುಷ್ಟಶಕ್ತಿಗಳನ್ನು ಮೆಟ್ಟಿ ನಿಲ್ಲುವ ಅಗತ್ಯವಿದೆ. ದಲಿತರು, ಶೋಷಿತರನ್ನು ಒಟ್ಟಿಗೆ ಕರೆದೊಯ್ಯುವ ಅಗತ್ಯವಿದೆ, ರಾಷ್ಟ್ರ ಮೊದಲು ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕಿದೆ ಎಂದರು.

ಸಭೆಗೂ ಮುನ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನಗರದ ವಿದ್ಯಾನಗರದ ದೂಡಾ ಪಾರ್ಕ್‌ನಿಂದ ಮಧ್ಯಾಹ್ನ ಪ್ರಾರಂಭವಾದ ಪಥ ಸಂಚಲನದಲ್ಲಿ ಗಣವೇಷಧಾರಿ ಸ್ವಯಂ ಸೇವಕರು ಆಕರ್ಷಕ ಬ್ಯಾಂಡ್ ವಾದನಕ್ಕೆ ತಕ್ಕಂತೆ ವಿವಿಧ ಮಾರ್ಗಗಳಲ್ಲಿ ಸಾಗಿ. ಗಾಂಧಿ ಮೈದಾನ ತಲುಪಿ ಸಮಾರಂಭದಲ್ಲಿ ಪಾಲ್ಗೊಂಡರು.

ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ನಗರಸಭಾ ಸದಸ್ಯರಾದ ಆಟೋ ಹನುಮಂತಪ್ಪ, ಎ.ಬಿ.ಎಂ. ವಿಜಯಕುಮಾರ್, ಬಿಜೆಪಿ ನಗರ ಅಧ್ಯಕ್ಷ ಅಜಿತ್ ಸಾವಂತ್, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ಮುಖಂಡರಾದ ಡಾ.ಆರ್.ಆರ್. ಖಮಿತ್ಕರ್, ಚಿದಂಬರ ಶಾಸ್ತ್ರಿ, ಶಂಕರ್ ನಾಡಿಗೇರ್, ಬಾತಿ ಚಂದ್ರಶೇಖರ್, ಧರಣೇಂದ್ರ, ಹರೀಶ್, ಶಿವಕುಮಾರ್ ಭಾಗವಹಿಸಿದ್ದರು.

- - - -03ಎಚ್‍ಆರ್‌ಆರ್02: ಹರಿಹರದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥ ಸಂಚಲನ ನಡೆಯಿತು.