ಮಾಧ್ಯಮಗಳ ಮೂಲಕ ಹಿರಿಯ ರಾಜಕಾರಣಿ ಹಾಗೂ ರೈತ ಸಂಘದ ಮುಖಂಡರೊಬ್ಬರು ನೀಡಿರುವ ಆಘಾತಕಾರಿ ಹೇಳಿಕೆ ಜಿಲ್ಲೆಯ ಜನರನ್ನು ಗೊಂದಲಕ್ಕೆಡೆಮಾಡಿದೆ. ಇಂಥವರು ಜಿಲ್ಲೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ರಾಜ್ಯ, ರಾಷ್ಟ್ರದ ಅಭಿವೃದ್ಧಿಗಾಗಿ ಯಾವ ಜಿಲ್ಲೆಯೂ ಮಾಡದ ತ್ಯಾಗವನ್ನು ಮಾಡಿ, ತನ್ನ ಅಸ್ಮಿತೆಯನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಇಂತಹ ಕಾಲಘಟ್ಟದಲ್ಲಿ ಬೇಡ್ತಿ- ವರದಾ- ಅಘನಾಶಿನಿ ನದಿಗಳ ನೀರನ್ನು ಹೊರಜಿಲ್ಲೆಗೆ ಒಯ್ಯುವುದು ಅತ್ಯಂತ ಅವೈಜ್ಞಾನಿಕ. ಜಿಲ್ಲೆಯ ಅಸ್ತಿತ್ವದ ಪ್ರಶ್ನೆಯಾಗಿದೆ. ಹಾಗಾಗಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಹೋರಾಟಕ್ಕೆ ಅನಿವಾರ್ಯವಾಗಿ ಮುಂದಾಗಿದ್ದೇವೆ ಎಂದು ಹಿರಿಯ ಸಹಕಾರಿ, ಚಿಂತಕ ಪ್ರಮೋದ ಹೆಗಡೆ ಹೇಳಿದರು.

ಅವರು, ಶುಕ್ರವಾರ ಬೇಡ್ತಿ- ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ನ. ೩ರಂದು ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜನಾಂದೋಲನದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಾಧ್ಯಮಗಳ ಮೂಲಕ ಹಿರಿಯ ರಾಜಕಾರಣಿ ಹಾಗೂ ರೈತ ಸಂಘದ ಮುಖಂಡರೊಬ್ಬರು ನೀಡಿರುವ ಆಘಾತಕಾರಿ ಹೇಳಿಕೆ ಜಿಲ್ಲೆಯ ಜನರನ್ನು ಗೊಂದಲಕ್ಕೆಡೆಮಾಡಿದೆ. ಇಂಥವರು ಜಿಲ್ಲೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದ ಅವರು, ರಾಷ್ಟ್ರದ ಭದ್ರತೆಗಾಗಿ ನೌಕಾನೆಲೆ, ಅಣುವಿದ್ಯುತ್ ಸ್ಥಾವರ, ಆರು ಜಲವಿದ್ಯುತ್ ಯೋಜನೆ ಸೇರಿದಂತೆ ದೇಶದ ಅಭಿವೃದ್ಧಿಗೆ ಸುಮಾರು ೫೦ ಸಾವಿರ ಎಕರೆಗೂ ಹೆಚ್ಚಿನ ಅರಣ್ಯ ಮತ್ತು ಕೃಷಿ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ೧೦ ಸಾವಿರಕ್ಕೂ ಹೆಚ್ಚಿನ ಕುಟುಂಬವನ್ನು ಸ್ಥಳಾಂತರಿಸಿದೆ. ಇಂತಹ ತ್ಯಾಗ ಸಾಲದೇ, ಪಶ್ಚಿಮಕ್ಕೆ ಹರಿಯುವ ಬೇಡ್ತಿ, ಅಘನಾಶಿನಿ ಪೂರ್ವಕ್ಕೆ ಹರಿಸುವುದು ತೀರಾ ಅವೈಜ್ಞಾನಿಕವಾದುದು. ನೀರೇ ಇಲ್ಲದ ಬೇಡ್ತಿ ನೋಡಿ ಚಿಂತನೆ ಮಾಡಿ ಎಂದರು.

ಉ.ಕ. ಇನ್ನೂ ತ್ಯಾಗ ಮಾಡುತ್ತ ಹೋದರೆ ಜಿಲ್ಲೆಯ ಅಸ್ತಿತ್ವವೇ, ಅಸ್ಮಿತೆಯೇ ಉಳಿಯದು. ಬೇಡ್ತಿ ನದಿಯಲ್ಲಿ ನೀರಿಲ್ಲದ ಪರಿಸ್ಥಿತಿ ಇದೆ. ಈ ನದಿಯ ನೀರನ್ನು ಬೇರೆಡೆಗೆ ತಿರುಗಿಸುವುದು ಅಪಾಯಕಾರಿ. ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆ. ಪಶ್ಚಿಮಘಟ್ಟ ಪ್ರದೇಶದ ಪ್ರಾಣಿ, ಪಶು- ಪಕ್ಷಿಗಳ, ಜನಜೀವನ ಮತ್ತು ಕೃಷಿಯ ರಕ್ಷಣೆಗಾಗಿ ಹೋರಾಡುವುದು ಅನಿವಾರ್ಯವಾಗಿದೆ.

ನೀರು ಬೇಕೆನ್ನುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಉಳಿದ ಯಾವ ಜಿಲ್ಲೆ ದೇಶಕ್ಕಾಗಿ ಇಷ್ಟೊಂದು ಕೊಡುಗೆ ನೀಡಿ ತ್ಯಾಗ ಮಾಡಿದೆ ಎಂಬುದನ್ನು ಈ ಕುರಿತು ಮಾತನಾಡುವವರು ತಿಳಿಸುವ ಹೊಣೆಗಾರಿಕೆ ಹೊರಲಿ ಎಂದು ಪ್ರಮೋದ ಹೆಗಡೆ ಸವಾಲು ಹಾಕಿದ್ದಾರೆ. ಆದ್ದರಿಂದ ಸಂಪೂರ್ಣವಾಗಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಪಡಿಸಿದರು.

ಈ ಸಂದರ್ಭದಲ್ಲಿ ಸಂಕಲ್ಪ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ, ಹಿರಿಯ ಸಹಕಾರಿ ಪಿ.ಜಿ. ಹೆಗಡೆ ಕಳಚೆ ಉಪಸ್ಥಿತರಿದ್ದರು.