ಕೊಳೆಯುತ್ತಿರುವ ಬೆಳೆ ಕಾಪಾಡಿಕೊಳ್ಳಲು ಹರಸಾಹಸ

| Published : Oct 23 2024, 12:33 AM IST

ಸಾರಾಂಶ

ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಹಾಕಿದಲ್ಲಿಯೇ ಮೆಕ್ಕೆಜೋಳ ತೆನೆಗಳು ಮೊಳಕೆಯೊಡೆದು ಸಸಿ ನಾಟುತ್ತಿವೆ. ಅವುಗಳನ್ನು ಬಗೆ ಬಗೆದು ನೋಡುವ ರೈತ ಬಸನಗೌಡ ಕ್ವಾಟಿ ಮುಖದಲ್ಲಿ ದುಃಖ ಮಡುಗಟ್ಟಿತ್ತು.

450 ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿ

ಈರುಳ್ಳಿ ಬೆಳೆದ ರೈತರ ಪಾಡು ದೇವರಿಗೆ ಪ್ರೀತಿ

ಬಹುತೇಕ ಬೆಳೆ ಮಣ್ಣು ಪಾಲು

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಹಾಕಿದಲ್ಲಿಯೇ ಮೆಕ್ಕೆಜೋಳ ತೆನೆಗಳು ಮೊಳಕೆಯೊಡೆದು ಸಸಿ ನಾಟುತ್ತಿವೆ. ಅವುಗಳನ್ನು ಬಗೆ ಬಗೆದು ನೋಡುವ ರೈತ ಬಸನಗೌಡ ಕ್ವಾಟಿ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಹಾಗೆ ಮುಂದೆ ಸಾಗಿದರೆ ಪಕ್ಕದಲ್ಲಿಯೇ ಕಟಾವು ಮಾಡಿದ ಈರುಳ್ಳಿ ಹಾಳಾಗಿದ್ದನ್ನು ಸ್ವಚ್ಛ ಮಾಡುತ್ತಿರುವ ಮತ್ತೊಂದು ದೃಶ್ಯ. ಹಾಗೆ ಮುಂದೆ ಸಾಗಿದರೇ ಕಟಾವು ಮಾಡಿರುವ ಈರುಳ್ಳಿಯನ್ನು ಮಳೆ ಬಿಡುವು ಕೊಟ್ಟಾಗ ಸ್ವಚ್ಛ ಮಾಡುವ ಮತ್ತೊಂದು ದೃಶ್ಯ.

ಹೀಗೆ, ನೀವು ಹೊಲದಲ್ಲಿ ಸಾಗಿದರೆ ರೈತರು ಪಡುತ್ತಿರುವ ಯಾತನೆ ಕಣ್ಣಿಗೆ ರಾಚುತ್ತದೆ. ಕಣ್ಣೀರು ತರುತ್ತದೆ, ಯಾರ ಮುಖದಲ್ಲಿಯೂ ಕಳೆ ಇಲ್ಲ. ನೆಮ್ಮದಿ ಇಲ್ಲ, ವರ್ಷದ ಫಸಲು ನೀರುಪಾಲಾಗಿದ್ದಕ್ಕೆ ಅನ್ನದಾತರು ಮರಗುತ್ತಿದ್ದಾರೆ.

ಹೊಲದಲ್ಲಿಯೇ ಕಿತ್ತು ಹಾಕಿದ ಈರುಳ್ಳಿ ಕೊಳೆತು ಹೋಗಿದ್ದು, ಅಳಿದುಳಿದಿದ್ದನ್ನು ಕಟಾವು ಮಾಡಿಸುತ್ತಿರುವ ದೃಶ್ಯವಂತೂ ಎಂಥವರ ಕಣ್ಣಲ್ಲೂ ನೀರು ತರುವಂತೆ ಇತ್ತು.

ಹೌದು, ಪ್ರಸಕ್ತ ವರ್ಷ ಕೊಪ್ಪಳ ಜಿಲ್ಲಾದ್ಯಂತ ಆಗಾಗ ಸುರಿಯುತ್ತಿರುವ ಮಳೆ ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಕಟಾವಿಗೆ ಬಂದಿರುವ ಬೆಳೆ ಬಹುತೇಕ ಮಣ್ಣುಪಾಲಾಗಿದ್ದು, ಕೈಗೆ ಬಂದ ತುತ್ತಾ ಬಾಯಿಗೆ ಬರದಂತೆ ಆಗಿದೆ. ಯಾವುದೇ ಗ್ರಾಮಕ್ಕೆ, ಹೊಲಕ್ಕೆ ಹೋದರೂ ಒಂದಲ್ಲ ಒಂದು ಬೆಳೆ ಕಳೆದುಕೊಂಡ ರೈತರ ಚಿಂತೆ ಕಣ್ಣಿಗೆ ರಾಚುತ್ತದೆ.ಈರುಳ್ಳಿ ಬೆಳೆದ ರೈತರ ಕಣ್ಣೀರು:

ಅದರಲ್ಲೂ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಕಟಾವು ಮಾಡಿಕೊಂಡು ಹೋಗಲು ಅವಕಾಶ ಇಲ್ಲದಂತೆ ಆಗಿರುವುದು ರೈತರಲ್ಲಿ ಕಣ್ಣೀರು ತರಿಸುವಂತೆ ಮಾಡಿದೆ.

ಭರ್ಜರಿಯಾಗಿಯೇ ಬಂದಿದ್ದ ಈರುಳ್ಳಿ ಮಳೆ ಸಿಕ್ಕು ಬಹುತೇಕ ಹಾಳಾಗಿದ್ದು, ಅಳಿದುಳಿದಿರುವುದನ್ನು ಸಂರಕ್ಷಣೆ ಮಾಡಿಕೊಂಡು ಮಾಡಿದ ಖರ್ಚನ್ನಾದರೂ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ, ಇದರಲ್ಲಿ ಬಹುತೇಕ ರಾಶಿ ಮಾಡಿ, ರೈತರು ಮಾರಿಕೊಂಡಿದ್ದಾರೆ. ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಇದ್ದು, ಇದರಲ್ಲಿ ಕಟಾವು ಮಾಡಿರುವ ಸುಮಾರು 100 ಹೆಕ್ಟೇರ್ ಈರುಳ್ಳಿ ಬೆಳೆ ಬಹುತೇಕ ಕೆಟ್ಟು ಹೋಗಿದ್ದು, ಅಳಿದುಳಿದಿದ್ದನ್ನು ಸಂರಕ್ಷಣೆ ಮಾಡಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ. ಹಿಂಗಾರು ಪ್ರಾರಂಭದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಲೇ ಇಷ್ಟೆಲ್ಲ ಹಾನಿಯಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ.

ಇನ್ನು ಮೆಕ್ಕೆಜೋಳ, ಬತ್ತ, ಮೆಣಸಿನಕಾಯಿ ಬೆಳೆ ಹಾಗೂ ಹತ್ತಿ ಸೇರಿದಂತೆ ಜಿಲ್ಲೆಯಲ್ಲಿ ಬರೋಬ್ಬರಿ 450 ಹೆಕ್ಟೇರ್‌ಗೂ ಅಧಿಕ ಹಾನಿಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಉಪನಿರ್ದೇಶಕ ರುದ್ರೇಶಪ್ಪ.

ಇದು, ಪ್ರಾಥಮಿಕ ವರದಿಯ ಲೆಕ್ಕಾಚಾರವಾಗಿದ್ದು, ಇನ್ನೂ ಹಾನಿಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈಗಷ್ಟೇ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾನಿಯ ಲೆಕ್ಕಾಚಾರ ಮಾಡುತ್ತಿದ್ದಾರೆ.

ಈಗ ಅಧಿಕಾರಿಗಳು ಕೇವಲ ಗ್ರಾಮ ಪಂಚಾಯಿತಿವಾರು ಇರುವ ಮಳೆಮಾಪನ ಕೇಂದ್ರದ ಲೆಕ್ಕಾಚಾರದ ಆಧಾರದಲ್ಲಿ ಪ್ರಾಥಮಿಕ ಅಂದಾಜು ಮಾಡುತ್ತಿದ್ದಾರೆ. ಆದರೆ, ವಾಸ್ತವವಾಗಿ ಇದರ ಪ್ರಮಾಣ ದೊಡ್ಡದಾಗಿಯೇ ಇದೆ ಎನ್ನುತ್ತಾರೆ ರೈತರು.

ಮಳೆ ಎಡೆಬಿಡದೆ ಸುರಿಯದೇ ಇದ್ದು ರಾಶಿ ಮಾಡುವುದಕ್ಕೆ, ಕಟಾವು ಮಾಡುವುದಕ್ಕೆ ಬಿಡದೆ ಇರುವುದರಿಂದ ಭಾರಿ ಹಾನಿಯಾಗುತ್ತಿದೆ ಎನ್ನುತ್ತಾರೆ ರೈತರು.