ಬ್ರಹ್ಮಾವರ: ಇಂದು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಬದುರು ರೂಪಿಸಲು ರುಡ್‌ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಹಾಗಾಗಿ ಬದುಕಿನಲ್ಲಿ ನಿಷ್ಠೆ ಇದ್ದರೆ ಯಶಸ್ವಿ ಉದ್ಯಮ ಸಾಧ್ಯ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಭಿಪ್ರಾಯಪಟ್ಟರು.ಜಿಪಂ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿ 6 ದಿನಗಳ ಕಾಲ ಜೈಲುವಾಸಿಗಳಿಗಾಗಿ ನಡೆದ “ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇನ್ನೊಬ್ಬ ಅತಿಥಿ ಕೆನರಾ ಬ್ಯಾಂಕ್‌ನ ವೃತ್ತ ಕಚೇರಿಯ ಮಹಾ ಪ್ರಬಂಧಕ ಗಂಗಾಧರ ಎಚ್.ಕೆ. ಅವರು, ನಾನು ಅವನಲ್ಲ ಎಂಬ ಮನೋಭಾವನೆಯಿಂದ ಹೊರಬಂದು ಸಮಾಜದಲ್ಲಿ ಎಲ್ಲರ ಜೊತೆ ಒಳ್ಳೆಯ ಜೀವನ ಮಾಡಬೇಕು ಎಂದು ಜೈಲುವಾಸಿಗಳಿಗೆ ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯ ಕುಮಾರ ಡಿ. ಚವ್ಹಾಣ್ ಮಾತನಾಡಿ, ಈ ಮುಂದಿನ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು. ಉಡುಪಿ ಜಿಲ್ಲೆಯ ಲೀಡ್ ಡಿಸ್ಟ್ರಿಕ್ಟ್‌ ಮ್ಯಾನೇಜರ್ ಹರೀಶ ಜಿ. ಮಾತನಾಡಿ, ಬ್ಯಾಂಕಿನಿಂದ ಸೀಗುವ ಸಾಲ- ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಶುಭ ಹಾರೈಸಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಬಿ., ಬದುಕಿನಲ್ಲಿ ಛಲವಿದ್ದರೆ ನಾವು ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದು ಎಂದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ತರಬೇತಿಯಲ್ಲಿ ಪಡೆದ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಿ ಎಂದರು.

ಕಚೇರಿ ಸಹಾಯಕ ಶಾಂತಪ್ಪ ನಿರೂಪಿಸಿ, ಜಿಲ್ಲಾ ಕಾರಾಗೃಹದ ಸಿಬ್ಬಂದಿ ರೇಷ್ಮಾ ನಾಯಕ್ ಸ್ವಾಗತಿಸಿ, ಹಿರಿಯ ಕಚೇರಿ ಸಹಾಯಕರಾದ ಶ್ರುತಿ ಪಿ. ಕುಮ್ಟಾಕರ್ ವಂದಿಸಿದರು.