ಸಾರಾಂಶ
ಚನ್ನಪಟ್ಟಣ: ತಾಲೂಕು ಕಾಂಗ್ರೆಸ್ ಸಮಿತಿ ಎಂ.ಎಸ್.ರಾಮಯ್ಯ ಆಸ್ಪತ್ರೆ ಸಹಯೋಗದಲ್ಲಿ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಆರೋಗ್ಯ ಶಿಬಿರದಲ್ಲಿ ೨೧೦೦ಕ್ಕೂ ಹೆಚ್ಚು ಜನರು ಭಾಗಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸಾಮಾನ್ಯ ರೋಗ ವಿಭಾಗ, ಕ್ಯಾನ್ಸರ್ ರೋಗ ವಿಭಾಗ, ಹೃದಯ ರೋಗ, ಚರ್ಮ ರೋಗ, ಮೂಳೆ ಮತ್ತು ಕೀಲು ರೋಗ, ಸ್ತ್ರೀ ರೋಗ, ನರರೋಗ, ಮೂತ್ರಕೋಶ, ಕಣ್ಣಿನ ತಪಾಸಣಾ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ಬಿ.ಪಿ., ಸಕ್ಕರೆ ಕಾಯಿಲೆ ವಿಭಾಗದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು.ಆರೋಗ್ಯ ಶಿಬಿರದಲ್ಲಿ ಸುಮಾರು ೧೦೦ ಮಂದಿಗೆ ಹೆಚ್ಚಿನ ಚಿಕಿತ್ಸೆಗೆ ಸೂಚಿಸಲಾಯಿತು. ೩೦ಮಂದಿಗೆ ಕ್ಯಾನ್ಸರ್ ಸ್ಕ್ಯಾನಿಂಗ್ ನಡೆಸಲಾಯಿತು.
ಶಿಬಿರಕ್ಕೆ ಆಗಮಿಸಿದ ಜನರಿಗೆ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ನಡೆಸಿ, ಔಷಧ ನೀಡುವ ಜತೆಗೆ ಸೂಕ್ತ ಸಲಹೆ ಸೂಚನೆ ನೀಡಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಿದರು.ಎಂ.ಎಸ್. ರಾಮಯ್ಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ್ ಮಾತನಾಡಿ, ಚನ್ನಪಟ್ಟಣದಲ್ಲಿ ಆಯೋಜಿಸಿರುವ ತಪಾಸಣಾ ಶಿಬಿರದಲ್ಲಿ ಸುಮಾರು ೪೦ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದಾರೆ. ಸಾವಿರಾರು ಜನ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಬಂದ ಜನರಿಗೆ ಅಗತ್ಯ ಔಷಧ ನೀಡಲಾಗಿದೆ. ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಅಗತ್ಯವಿರುವವರಿಗೆ ಒಂದು ದಿನಾಂಕ ನಿಗಧಿಪಡಿಸಿ ಆಸ್ಪತ್ರೆಯಿಂದಲೇ ಬಸ್ ಸೇವೆ ಒದಗಿಸಿ ಬೆಂಗಳೂರಿಗೆ ಕರೆಸಿಕೊಂಡು ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ತಪಾಸಣಾ ಶಿಬಿರಕ್ಕೆ ವಿಶೇಷವಾಗಿ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚುವ ಯಂತ್ರೋಪಕರಣವಿರುವ ವಾಹನವನ್ನು ತೆಗೆದುಕೊಂಡು ಬರಲಾಗಿದೆ. ಕ್ಯಾನ್ಸರ್ ರೋಗದ ಲಕ್ಷಣಗಳು ಇರುವ ರೋಗಿಗಳನ್ನು ಇಲ್ಲೇ ತಪಾಸಣೆ ನಡೆಸಲಾಗುವುದು. ಆನಂತರ ಅವರಿಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಮಾತನಾಡಿ, ತಾಲೂಕಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ವೈದ್ಯರು ಇಲ್ಲೇ ಔಷಧ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆ ಇರುವವರಿಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುವುದು. ಎಲ್ಲ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಅಗತ್ಯ ಕಂಡುಬಂದವರಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್ ಮಾತನಾಡಿದರು.ಡಿ.ಕೆಶಕಾಂತರಾಜು, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬೋರ್‌ವೆಲ್ ರಂಗನಾಥ್, ನಗರಸಭೆ ಸದಸ್ಯ ವಾಸಿಲ್ ಅಲಿಖಾನ್, ಮುಖಂಡರಾದ ಕೆ.ಟಿ.ಲಕ್ಷ್ಮಮ್ಮ, ಪಿ.ಡಿ.ರಾಜು, ಶಕೀಲ್ ಇತರರು ಇದ್ದರು.