ಸಾರಾಂಶ
ಮಕ್ಕಳ ನ್ಯಾಯ ಕಾಯ್ದೆ-2015, ಮಿಷನ್ ವಾತ್ಸಲ್ಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕೊಪ್ಪಳಕೇವಲ ಕಟ್ಟಡ, ರಸ್ತೆ, ಚರಂಡಿ, ಶೌಚಾಲಯಗಳನ್ನು ಕಟ್ಟುವುದು ಮಾತ್ರವಲ್ಲದೆ, ಮಕ್ಕಳಿಗಾಗಿ ಯೋಗ್ಯ ಸುರಕ್ಷಿತ ವಾತಾವರಣ ನಿರ್ಮಾಣ ನಮ್ಮೆಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಕ್ಕಳ ರಕ್ಷಣೆಯ ಭಾಗೀದಾರ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಮತ್ತು ಮಿಷನ್ ವಾತ್ಸಲ್ಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರದ ಆದೇಶದನ್ವಯ ಪ್ರತಿ ಸ್ಥಳೀಯ ಸರ್ಕಾರಗಳು ತಮ್ಮ ಅನುದಾನದಲ್ಲಿ ಕನಿಷ್ಠ ಶೇ. 5 ಅನುದಾನವನ್ನು ಮಕ್ಕಳಿಗಾಗಿ, ಮಕ್ಕಳ ರಕ್ಷಣೆಗಾಗಿ ಮೀಸಲಿಟ್ಟು, ಮಕ್ಕಳ ಪರವಾದ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಾಗಿದೆ. ಬಾಲ್ಯ ವಿವಾಹ ನಿಷಿದ್ಧವಾಗಿದೆ. ಸರ್ವೋಚ್ಚ ನ್ಯಾಯಾಲಯವು ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವೂ ಅತ್ಯಾಚಾರವೆಂದು ಆದೇಶಿಸಿದೆ. ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದು, ಅದರ ಭಾಗವಾಗಿ ಗ್ರಾಮ ಮಟ್ಟ, ತಾಲೂಕು ಮಟ್ಟದ ಎಲ್ಲ ಇಲಾಖೆಗಳು ಕಾರ್ಯ ಪ್ರವೃತ್ತರಾಗಿ ಇನ್ನು ಮುಂದೆ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬಾಲ್ಯವಿವಾಹವನ್ನು ಮಾಡಲು ಪ್ರಯತ್ನಿಸಿದವರ, ತಯಾರಿ ಮಾಡಿದವರ ಹಾಗೂ ಅದಕ್ಕೆ ಪ್ರಚೋದನೆ ನೀಡಿದವರ ವಿರುದ್ಧವೂ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಮಿಷನ್ ವಾತ್ಸಲ್ಯ ಯೋಜನೆಯು ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಪುನರವಸತಿಗಾಗಿ ಜಾರಿಯಲ್ಲಿರುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಧ್ಯೇಯವಾಕ್ಯವೇ ಯಾವುದೇ ಮಗುವನ್ನು ಹಿಂದುಳಿಯಲು ಬಿಡಬೇಡಿ ಎಂಬುದಾಗಿದೆ. ಯಾವುದೇ ಮಗುವು ಅದರ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮೆಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ನಿಲೋಫರ್ ಎಸ್. ರಾಂಪುರಿ, ನಿರೂಪಣಾಧಿಕಾರಿ ಗಂಗಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಕೆ. ರಾಘವೇಂದ್ರ ಭಟ್, ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಡಾ. ಸುಮಲತಾ ಆಕಳವಾಡಿ, ಇಮಾಮ್‌ಸಾಬ್ ಸದಾಫ್, ತಹಸೀಲ್ದಾರರು, ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ , ಶಾಲಾ ಶಿಕ್ಷಣ, ಕಾರ್ಮಿಕ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.