ಪಾದಯಾತ್ರೆ ಆರಂಭಕ್ಕೆ ಮುನ್ನ ಚಾಮುಂಡಿಬೆಟ್ಟಕ್ಕೆ ಬಿ.ವೈ. ವಿಜಯೇಂದ್ರ ಭೇಟಿ

| Published : Aug 04 2024, 01:21 AM IST

ಪಾದಯಾತ್ರೆ ಆರಂಭಕ್ಕೆ ಮುನ್ನ ಚಾಮುಂಡಿಬೆಟ್ಟಕ್ಕೆ ಬಿ.ವೈ. ವಿಜಯೇಂದ್ರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾದಯಾತ್ರೆ ಯಶಸ್ವಿಗೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿ

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿ- ಜೆಡಿಎಸ್ ಪಾದಯಾತ್ರೆ ಆರಂಭಕ್ಕೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪಾದಯಾತ್ರೆ ಆರಂಭಕ್ಕೆ ಮುನ್ನ ಚಾಮುಂಡೇಶ್ವರಿಯ ದರ್ಶನ ಪಡೆದ ಬಿ.ವೈ. ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ಎಂಡಿಎ, ವಾಲ್ಮೀಕಿ ಹಗರಣ, ಎಸ್ಸಿಎಸ್ಪಿ, ಟಿಎಸ್ಪಿ ಹಣ ದುರ್ಬಳಕೆ ಸೇರಿದಂತೆ ಹಲವು ವಿಚಾರ ಇಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪಾದಯಾತ್ರೆ ಯಶಸ್ವಿಗೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರು ಹೇಳಿ ಅಧಿಕಾರ ಹಿಡಿದಿದೆ. ಆದರೆ, ಅಹಿಂದ ವರ್ಗಕ್ಕೆ ದ್ರೋಹ ಬಗೆದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ತುಳಿತಕ್ಕೆ ಒಳಗಾದ ವರ್ಗಕ್ಕೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.

ತಮ್ಮ ವಿರುದ್ಧ ಡಿಕೆಶಿ ಏಕವಚನ ಪದಪ್ರಯೋಗ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರ ಬಂದಾಗ ಕಾಂಗ್ರೆಸ್ ನವರಿಗೆ ಈ ರೀತಿ ಆಗುತ್ತದೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಪಾದಯಾತ್ರೆ ಮೊಟಕಾಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನವರದ್ದು ಪಶ್ಚಾತ್ತಾಪದ ಯಾತ್ರೆ. ಕೊಟ್ಟ ಭರವಸೆ ಈಡೇರಿಸಲು ಆಗಲಿಲ್ಲ ಎಂಬ ಪಶ್ಚಾತ್ತಾಪದಲ್ಲಿ ಕಾರ್ಯಕ್ರಮ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ತಮ್ಮ ಭ್ರಷ್ಟಾಚಾರದ ಸಮರ್ಥನೆಗೆ ಸರ್ಕಾರವೇ ಇಳಿದಿದೆ ಎಂದು ಅವರು ವಾಗ್ದಾಳಿ ನಡೆಸಿದರು.