ದೇವನೆಲೆಗಳು ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಸಾಹಿತ್ಯ ಪ್ರಕಾರಗಳ ಲಭ್ಯತೆ ಹಾಗೂ ಓದುವಿಕೆಗೆ ಸೂಕ್ತ ಸ್ಥಳದ ಅಗತ್ಯವಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಪೋಕ್ಲು: ದೇವನೆಲೆಗಳು ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಸಾಹಿತ್ಯ ಪ್ರಕಾರಗಳ ಲಭ್ಯತೆ ಹಾಗೂ ಓದುವಿಕೆಗೆ ಸೂಕ್ತ ಸ್ಥಳದ ಅಗತ್ಯವಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಕ್ಕಬೆಯಲ್ಲಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಅಕಾಡೆಮಿಯ ೨೦ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನ ದೇವನೆಲೆಗಳು, ಐನ್ಮನೆಗಳು, ಸಮಾಜಗಳು, ವಿದ್ಯಾಸಂಸ್ಥೆಗಳು ಸಾಂಸ್ಕೃತಿಕವಾಗಿ ಬೆಳೆಯಬೇಕು. ಸಾಂಸ್ಕೃತಿಕವಾದ ಬೆಳವಣಿಗೆಯು ಸಾಹಿತ್ಯಕ್ಕೆಒತ್ತು ನೀಡುತ್ತವೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಕೊಡವ ಪುಸ್ತಕ ಪತ್ತಾಯ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಇದರಿಂದ ಆಯಾಯ ದೇವನೆಲೆಗಳ ಪೌರಾಣಿಕ ಹಿನ್ನೆಲೆ, ಚಾರಿತ್ರಿಕ ಘಟನಾವಳಿಗಳು, ಮಹತ್ವ-ಮಹಿಮೆಯನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದರು.ಕೊಡಗಿನ ಊರೂರುನಲ್ಲಿರುವ ಪುರಾತನ ದೇವನೆಲೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವುದರಿಂದ ಅಲ್ಲಿಗೆ ಬರುವ ಭಕ್ತರು ಆಯಾಯ ಕ್ಷೇತ್ರದ ಮಹತ್ವ-ಮಹಿಮೆಯ ಬಗ್ಗೆ ಓದಿ ತಿಳಿದುಕೊಳ್ಳುವುದರಿಂದ ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಪುಸ್ತಕ ಪತ್ತಾಯವನ್ನು ಸ್ಥಾಪಿಸುವಲ್ಲಿ ದೇವಸ್ಥಾನ ಸಮಿತಿಯವರು ಮುಂದೆ ಬರಬೇಕೆಂದು ಕರೆ ನೀಡಿದರು.ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮವನ್ನು ಪೂಜಾ ವಿಧಿಯೊಂದಿಗೆ ಉದ್ಘಾಟಿಸಿದ ಇಗ್ಗುತಪ್ಪ ದೇವಸ್ಥಾನದ ಪ್ರಧಾನ ಅರ್ಚಕ ಕುಶಭಟ್ ಮಾತನಾಡಿ, ಇಗ್ಗುತಪ್ಪನ ನೆಲೆಯಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ವಿದ್ಯಾದಾನದ ಮತ್ತೊಂದು ಸ್ವರೂಪ. ಇಂತಹ ಮಹತ್ಕಾರ್ಯವನ್ನು ಕೊಡವ ಅಕಾಡೆಮಿ ಮಾಡುತ್ತಿದೆ. ಮನೆಮನೆಗಳಲ್ಲಿ ಇರುವ ಪುಸ್ತಕಗಳನ್ನು ಪುಸ್ತಕ ಪತ್ತಾಯದಲ್ಲಿ ಸಂಗ್ರಹಿಸಿ ಇಟ್ಟರೆ ಓದುಗರ ಅನುಕೂಲಕ್ಕೆ ಪ್ರಯೋಜನವಾಗುತ್ತದೆ. ಈ ಮಣ್ಣಿನಲ್ಲಿ ಕೊಡವ ಸಾಹಿತ್ಯ, ಸಂಸ್ಕೃತಿ ಬೆಳೆಯಬೇಕು, ಚಿರಕಾಲ ಉಳಿಯಬೇಕು ಎಂದು ಆಶಿಸಿದರು.ಇಗ್ಗುತಪ್ಪ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಸ್ಥಾಪಿಸಿರುವ ೨೦ನೇ ಕೊಡವ ಪುಸ್ತಕ ಪತ್ತಾಯದ ನೋಂದಣಿಗೆ ರೂ. ಹತ್ತು ಸಾವಿರದ ಚೆಕ್ಕನ್ನು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.ಅಕಾಡೆಮಿ ಸದಸ್ಯರಾದ ನಾಪಂಡ ಸಿ. ಗಣೇಶ, ಕುಡಿಯರ ಎಂ. ಕಾವೇರಪ್ಪ, ಪಾರುಪತ್ಯೆಗಾರ ಪರದಂಡ ಪ್ರಿನ್ಸ್, ದೇವತಕ್ಕರಾದ ಪರದಂಡ ವಿಠಲ ಭೀಮಯ್ಯ, ಪಂಚಾಯತ್ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್, ದೇವಸ್ಥಾನದಜ್ಯೋತಿಷಿ ಕಣಿಯಂಡ ನಾಣಯ್ಯ, ಮುಜರಾಯಿಇಲಾಖೆಯ ಹಿಂದಿನ ಅಧ್ಯಕ್ಷರಾಗಿದ್ದ ಕೂತಂಡ ಉತ್ತಪ್ಪರ ಪತ್ನಿ ವಾಣಿ ಉತ್ತಪ್ಪ ಸಂಸಾರ, ಉದಿಯಂಡ ಸುಬಾಶ್, ಸಮಾಜ ಸೇವಕ ಪಾಲಂದಿರ ಜಗಜೋಯಪ್ಪ, ಕೋಲತಂಡ ವಿಠಲ್ ಸುಬ್ರಮಣಿ, ಪರದಂಡ ಲಾಲ ಸುಬ್ಬಯ್ಯ, ಕುಡಿಯರ ಮುತ್ತಪ್ಪ ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.