ಕಾಡಾನೆಯಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ

| Published : Dec 14 2024, 12:49 AM IST

ಸಾರಾಂಶ

ಕಾಡಾನೆಗಳಿಂದ ಹಾನಿಯಾದ ರೈತರ ಬೆಳೆಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲವಗೆರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಕಾಡಾನೆಗಳಿಂದ ಹಾನಿಯಾದ ರೈತರ ಬೆಳೆಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲವಗೆರೆ ತಿಳಿಸಿದರು.

ಅವರು ಗುರುವಾರ ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ, ಚಂದಾಳಕೆರೆ, ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಕೊಪ್ಪ, ಕಣ್ಣೂರು, ಈ ಭಾಗದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ರೈತರ ಬೆಳೆಯನ್ನು ನಾಶ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ, ಶಾಸಕ ಗೋಪಾಲಕೃಷ್ಣ ಬೇಳೂರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳೊಂದಿಗೆ ಸ್ಥಳ ಭೇಟಿ ಮಾಡಿ ನಂತರ ಅವರು ಮಾತನಾಡಿದರು.

ಕಾಡಾನೆಗಳು ರೈತರು ಬೆಳೆದ ಅಡಿಕೆ, ಬಾಳೆ, ಕಬ್ಬು, ಭತ್ತಕ್ಕೆ ಹಾನಿಯಾದ ಬಗ್ಗೆ ರೈತರು ಆತಂಕ ಪಡಬಾರದು. ನಷ್ಟವಾದ ರೈತರ ಬೆಳೆಗೆ ಸರ್ಕಾರ ಸೂಕ್ತವಾದ ಪರಿಹಾರ ನೀಡಲಿದೆ. ಆದರಿಂದ ರೈತರ ನಷ್ಟವಾದ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ದಾಖಲಾತಿಯೊಂದಿಗೆ ಅರಣ್ಯ ಇಲಾಖೆಗೆ ನೀಡಬೇಕು ಎಂದರು.

ಅಲ್ಲದೆ ಈ ಭಾಗದ ರೈತರು ಸಂಜೆ ವೇಳೆಯಲ್ಲಿ ತೋಟ, ಹೊಲ, ಗದ್ದೆ ಕಡೆ ಯಾರು ತೆರಳಬಾರದು. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯವರೊಂದಿಗೆ ಸ್ಥಳೀಯ ಗ್ರಾಮಸ್ಥರು ಸಹಕಾರ ನೀಡುವಂತೆ ತಿಳಿಸಿದರು.

ಚೋರಡಿ ಅರಣ್ಯ ವಲಯ ಅಧಿಕಾರಿ ರವಿ ಮಾತನಾಡಿ, ಕಳೆದ 3-4 ದಿನಗಳಿಂದ ವನ್ಯಜೀವಿ ವಲಯದಿಂದ ಶಾಂತಿಕೆರೆ, ಹೊರಬೈಲು, ಕಮದೂರು ಮಾರ್ಗವಾಗಿ ಹೆದ್ದಾರಿಯನ್ನು ದಾಟಿ ಆನೆಗಳು ಅರಸಾಳು ಗಿಳಾಲ ಗುಂಡಿ ಅರಣ್ಯ ಭಾಗಕ್ಕೆ ಬಂದಿದ್ದು, ತಿಂಗಳವಾಡಿ ಹೊಸಕೊಪ್ಪ ಕಣ್ಣೂರು, ಚಂದಾಳ್ ಕೆರೆ, ಭಾಗದ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ. ಶಾಸಕರ ಮಾಹಿತಿ ಮೇರೆಗೆ ಇಲಾಖೆಯ ಮುಖಾಂತರ ಸ್ಥಳ ಪರಿಶೀಲಿಸಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಬೆಳೆಗಳ ಆಧಾರದ ಮೇಲೆ ರೈತರಿಗೆ ಪರಿಹಾರ ಸಿಗಲಿದೆ. ರೈತರು ಸೂಕ್ತ ದಾಖಲೆಯೊಂದಿಗೆ ಅರಣ್ಯ ಇಲಾಖೆಯ ಚೋರಡಿ ಕಚೇರಿಗೆ ಸಲ್ಲಿಸಿ. ಬಂದಿರುವ ಆನೆಗಳನ್ನು ಅದೇ ಮಾರ್ಗದಲ್ಲಿ ಓಡಿಸಲು ಅರಣ್ಯ ಇಲಾಖೆಯ ಎರಡು ತಂಡಗಳ ರಚನೆ ಮಾಡಿಕೊಂಡು ಹಗಲು ಮತ್ತು ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ. ಸ್ಥಳೀಯ ಗ್ರಾಮಸ್ಥರು ರೈತರು ಎಚ್ಚರದಿಂದಿರಬೇಕು. ಅಲ್ಲದೆ ಆನೆಗಳನ್ನು ಓಡಿಸುವಲ್ಲಿ ಅರಣ್ಯ ಇಲಾಖೆಯವರೊಂದಿಗೆ ಹೆಚ್ಚಿನ ಸಹಕಾರ ನೀಡಬೇಕೆಂದರು.ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲೀಮುಲ್ಲಾ ಖಾನ್, ಪಕ್ಷದ ಮುಖಂಡರಾದ ರೆಹಮತುಲ್ಲಾ, ಮೋಹನ್, ನಾಗಪ್ಪ ಸೇರಿದಂತೆ ಅನೇಕರು ಇದ್ದರು.