ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಈಗ ನ್ಯಾಕ್ ಎ++ ಮಾನ್ಯತೆ ದೊರೆತಿದೆ.ಇತ್ತೀಚೆಗೆ ನಡೆದ ನ್ಯಾಕ್ 3ನೇ ಆವೃತ್ತಿಯ ಸಮೀಕ್ಷೆಯಲ್ಲಿ ಅಕಾಡೆಮಿಯು 3.61 ರಷ್ಟು ಆಂಕಗಳೊಂದಿಗೆ ಪ್ರತಿಷ್ಠಿತ ನ್ಯಾಕ್ ಎ++ ದರ್ಜೆಯನ್ನು ಗಳಿಸಿದೆ. ಈ ಮಹತ್ವದ ಸಾಧನೆಯು ಉನ್ನತ ಶಿಕ್ಷಣದಲ್ಲಿ ಸಂಸ್ಥೆಯ ಉತ್ಕೃಷ್ಟತೆಗೆ, ಬದ್ಧತೆ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿನ ಮತ್ತು ಅದರ ನಿರಂತರ ಪ್ರಯತ್ನಕ್ಕೆ ದೊರೆತ ಯಶಸ್ಸು ಎಂದು ಸಂಸ್ಥೆ ಹೇಳಿದೆ.ಈ ಗಮನಾರ್ಹ ಮೈಲಿಗಲ್ಲಿನ ಜೊತೆಗೆ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು 2024ನೇ ಸಾಲಿನ ಎನ್ಎೖಆರ್ಎಫ್ ನಲ್ಲಿ 24ನೇ ಶ್ರೇಯಾಂಕ ಹೊಂದಿರುವುದು ಮತ್ತು ಪ್ರತಿಷ್ಠಿತ ಎಸ್.ಡಿ.ಜಿ 3 ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ವಿಶ್ವದಲ್ಲಿ ಮೊದಲ ಸ್ಥಾನದ ಜೊತೆಗೆ ಈ ಪ್ರಶಸ್ತಿಗಳು ನಾವಿನ್ಯ ಸಂಶೋಧನೆ, ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುವಲ್ಲಿ ಸಂಸ್ಥೆಯ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.ನ್ಯಾಕ್ಮಾನ್ಯತೆ ಪ್ರಕ್ರಿಯೆಯು ಅಕಾಡೆಮಿಯ ಶೈಕ್ಷಣಿಕ ಕಾರ್ಯಕ್ರಮಗಳು, ಮೂಲಸೌಕರ್ಯ, ಬೋಧಕರು ಮತ್ತು ಒಟ್ಟಾರೆ ಸಾಂಸ್ಥಿಕ ಪರಿಣಾಮಕಾರಿತ್ವಗಳನ್ನು ಸಮಗ್ರವಾಗಿ ಮೌಲ್ಯಮಾಪನಕ್ಕೆ ಒಳಪಡಿಸಿದ್ದು, ಪ್ರಸ್ತುತ ಇದರ ಎ++ ಗ್ರೇಡ್ ನ ಸಾಧನೆ ಸಂಸ್ಥೆಯ ಬೋಧಕ ವರ್ಗ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಿರಂತರ ಮತ್ತು ಸಾಂಘಿಕ ಪ್ರಯತ್ನಕ್ಕೆ ಮತ್ತು ಅದರ ಭಾಗೀದಾರರು ಮತ್ತು ಹಿತೈಷಿಗಳ ಅಮೂಲ್ಯವಾದ ಬೆಂಬಲಕ್ಕೆ ಸಾಕ್ಷಿಯಾಗಿದೆ.ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆ ಒದಗಿಸುವ ಜೆಎಸ್ಎಸ್ಎಎಚ್ಇಆರ್ನ ಬದ್ಧತೆಯನ್ನು ಪ್ರತಿಬಿಂಬಿಸುವ ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಕಾಡೆಮಿ, ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಮತ್ತು ಅದರ ನಿರಂತರ ಪ್ರಯತ್ನಕ್ಕಾಗಿ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಅಭಿನಂದಿಸಿದೆ.