ಕತ್ತಿ ಡೆಡ್‌ ಹಾರ್ಸ್‌, ಔಟ್‌ ಆಫ್‌ ಆರ್ಡರ್‌ ಆಗ್ತಾರೆ!

| Published : Oct 01 2025, 01:01 AM IST

ಸಾರಾಂಶ

ಈ ಚುನಾವಣೆ ಹುಕ್ಕೇರಿಗೆ ಮಾತ್ರ ಸೀಮಿತವಾದದ್ದು. ಮಾಜಿ ಸಂಸದ ರಮೇಶ ಕತ್ತಿ ಡೆಡ್‌ ಹಾರ್ಸ್‌ ಆಗಿದ್ದು, ಮತ್ತೆ ಅವರು ಔಟ್‌ ಆಫ್‌ ಆರ್ಡರ್‌ ಆಗುತ್ತಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹುಕ್ಕೇರಿ ವಿದ್ಯುತ್‌ ಸಹಕಾರಿ ಸಂಘದ ಚುನಾವಣೆಯಲ್ಲಿ ನಾವು ಸೋತಿದ್ದೇವೆ ನಿಜ. ಆದರೆ, ಇದು ಸೋಲಷ್ಟೇ ಹೊರತು ನಮಗೆ ಮುಖಭಂಗವಲ್ಲ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಹುಕ್ಕೇರಿಗೆ ಮಾತ್ರ ಸೀಮಿತವಾದದ್ದು. ಮಾಜಿ ಸಂಸದ ರಮೇಶ ಕತ್ತಿ ಡೆಡ್‌ ಹಾರ್ಸ್‌ ಆಗಿದ್ದು, ಮತ್ತೆ ಅವರು ಔಟ್‌ ಆಫ್‌ ಆರ್ಡರ್‌ ಆಗುತ್ತಾರೆ. ಈ ಚುನಾವಣೆಯ ಸೋಲು ಸೋಲಷ್ಟೇ ಹೊರತು ಮುಖಭಂಗವಲ್ಲ. ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ ಎಂದರು. ನಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡಲು ನಾವು ಹೋಗಬೇಕಿತ್ತು ಅದಕ್ಕಾಗಿ ಹೋದೆವು. ಎಲ್ಲೂ ಸ್ಟ್ರಾಟಜಿ ಫೇಲ್ ಆಗಿರಲಿಲ್ಲ, ಈಗ ಫೇಲ್ ಆಗಿದೆ. ಎಲ್ಲರೂ ಟೀಂ ಆಗಿ ಕೆಲಸ ಮಾಡಲಿಲ್ಲ‌. ಹೀಗಾಗಿ ಸೋತಿದ್ದೇವೆ. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.

ನಮ್ಮ ಸೋಲಿಗೆ ಪ್ರಮುಖ ಕಾರಣವೆನೆಂದರೆ ಕೆಲವು ಕಡೆ ನಮ್ಮ ಮತಗಳು ತಿರಸ್ಕಾರಗೊಂಡಿವೆ. 9 ಮತ ಹಾಕುವಲ್ಲಿ 10 ಮತ ಹಾಕಿದ್ದಾರೆ. ಕೆಲವು ಕಡೆ 5 ಸಾವಿರ ಹಾಗೂ ಇನ್ನೊಂದು ಕಡೆ 8 ಸಾವಿರ ಮತಗಳು ತಿರಸ್ಕಾರವಾಗಿವೆ. ನಾವು ಅನೇಕ ಜನರಲ್‌ ಚುನಾವಣೆ ಮಾಡಿದ್ದೇವೆ. ಈಗ ಹುಕ್ಕೇರಿಯಲ್ಲಿ ನಡೆದ ವಿದ್ಯುತ್‌ ಸಹಕಾರಿ ಚುನಾವಣೆ ನಮಗೆ ಹೊಸದಾಗಿದ್ದು, ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟು ಪ್ರಯತ್ನ ನಮ್ಮ ಕಡೆಯಿಂದ ಮಾಡಿದ್ದೇವೆ. 12 ಸಾವಿರ ಮತಗಳನ್ನು ಪಡೆದಿದ್ದೇವೆ. ನಮ್ಮ ವಿರೋಧಿ ಬಣ 20 ಸಾವಿರ ಮತಗಳನ್ನು ಪಡೆದುಕೊಂಡಿದೆ ಎಂದರು.

ನಾವು ಗುರಿಯಿಟ್ಟ ಹಂತ ತಲುಪಿದ್ದೇವೆ. ಮತದಾರರು ತಪ್ಪು ಮತಗಳು ಹಾಕಿದ್ದರಿಂದ ನಮ್ಮಗೆ ಹಿನ್ನಡೆಯಾಗಿದೆ. ಅಲ್ಲದೇ ನಮ್ಮ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸರಿಯಾದ ರೀತಿ ಮತದಾರರ ಮನವೊಲಿಸಲು ಸಾಧ್ಯವಾಗದ್ದರಿಂದ ಈ ಚುನಾವಣೆಯಲ್ಲಿ ಸೋಲಾಗಿದೆ ಎಂದ ವಿಶ್ಲೇಷಿಸಿದ ಅವರು, ನಮ್ಮ ವಿರೋಧಿಗಳ ಬಣ 30 ವರ್ಷಗಳಿಂದ ರಾಜಕಾರಣ ಮಾಡಿ 20 ಸಾವಿರ ಮತಗಳನ್ನು ಪಡೆದಿದ್ದಾರೆ. ಆದರೆ ನಾವು 3 ತಿಂಗಳಲ್ಲಿ ಪ್ರಚಾರ ಮಾಡಿ 12 ಸಾವಿರ ಮತಗಳನ್ನು ಪಡೆದಿದ್ದೇವೆ. ನಾವು ಎಷ್ಟು ಗುರಿ ಮುಟ್ಟಬೇಕು ಅಷ್ಟು ಹಂತದ ಗುರಿ ತಲುಪಿದ್ದೇವೆ ಎಂದರು.

ಚುನಾವಣಾ ಪ್ರಚಾರ ಸಭೆಗಳಲ್ಲಿ ವೈಯಕ್ತಿಕವಾಗಿ ನಮ್ಮ ವಿರುದ್ಧ ಟೀಕೆ ಮಾಡಿರುವ ಮಾಜಿ ಸಂಸದ ರಮೇಶ ಕತ್ತಿ ತಮ್ಮ ಘನತೆಗೆ ತಕ್ಕ ಹಾಗೆ ಮಾತನಾಡಬೇಕು. ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಯಮಕನಮರಡಿ ಕ್ಷೇತ್ರ ಹುಕ್ಕೇರಿ ತಾಲೂಕಿನ ಒಂದು ಭಾಗವಾಗಿದೆ. ಹಾಗಾಗಿ, ನಾವು ಈ ಭಾಗದ ಬಗ್ಗೆ ಗಮನ ಹರಿಸಬೇಕಾಗುತ್ತದೆ ಎಂದು ತಿಳಿಸಿದರು.

ಜಾರಕಿಹೊಳಿ ಸಹೋದರರು ಲಿಂಗಾಯತ ವಿರೋಧಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಹುಕ್ಕೇರಿಗೆ ಸೀಮಿತವಷ್ಟೇ. ಇದು ಜಿಲ್ಲೆ ಮತ್ತು ರಾಜ್ಯಕ್ಕೆ ಅನ್ವಯಿಸುವುದಿಲ್ಲ. ನಮ್ಮ ಕ್ಷೇತ್ರಗಳಿಗೆ ಗಡಿ ಇಲ್ಲ. ಎಲ್ಲರಿಗೂ ಮುಕ್ತವಾಗಿದೆ. ಯಾರೂ ಬೇಕಾದರೂ ಬರಬಹುದು ಎಂದರು.

ಜಾರಕಿಹೊಳಿ ಹಾಗೂ ಕತ್ತಿ ನಡುವೆ ಹುಳಿ ಹಿಂಡಿದ್ದು ಅಣ್ಣಾಸಾಹೇಬ ಜೊಲ್ಲೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕತ್ತಿ ಅವರೊಂದಿಗೂ ಸೇರಿ ನಾವು ಚುನಾವಣೆ ಮಾಡಿದ್ದೇವೆ. ಅದು ಸಂದರ್ಭ ಅಷ್ಟೇ ಎಂದರು.

ವಿದ್ಯುತ್‌ ಸಹಕಾರಿ ಸಂಘದ ಚುನಾವಣೆ ಸೋಲಿಗೆ ಪಿಎ ಸಂಸ್ಕೃತಿ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರೇ ನನ್ನ ಗೆಲ್ಲಿಸಿದ್ದರು. ಈಗ ಅವರಿಗೂ ಪಾಠ ಹೋಳೋಣ. ಜನರ ಜೊತೆಗೆ ಹೇಗೆ ವರ್ತನೆ ಮಾಡಬೇಕು ಎಂಬುದರ ಕುರಿತು ತಿಳಿಹೇಳುತ್ತೇವೆ ಎಂದು ಹೇಳಿದರು.

ನಿಮ್ಮನ್ನು ನಂಬಿ ಬಂದವರಿಗೆ ಟಿಕೆಟ್‌ ಕೊಟ್ಟಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕೆಲವರಿಗೆ ಅನಾರೋಗ್ಯದ ಸಮಸ್ಯೆ ಇತ್ತು. ಮತ್ತೆ ಕೆಲವರಿಗೆ ಚುನಾವಣೆ ಸ್ಪರ್ಧಿಸಲು ಆಸಕ್ತಿ ಇರಲಿಲ್ಲ. ಹಾಗಾಗಿ, ಅವರ ಬದಲಿಗೆ ಬೇರೆಯವರಿಗೆ ಟಿಕೆಟ್‌ ನೀಡಲಾಯಿತು ಎಂದರು.