ಹಣ್ಣು ಹಾಗೂ ತರಕಾರಿ ವಿದೇಶಕ್ಕೆ ರಫ್ತು ಮಾಡುವುದು ಸಂರ್ಕೀಣ ಪ್ರಕ್ರಿಯೆ. ಬೆಳೆ ಕೊಯ್ಲಿನಿಂದ ಹಿಡಿದು ವಿಮಾನ ನಿಲ್ದಾಣದ ವರೆಗೆ ಮತ್ತು ಅಲ್ಲಿಂದ ತಲುಪಬೇಕಾದ ದೇಶದ ವರೆಗೆ ಒಂದು ವ್ಯವಸ್ಥಿತ ಪ್ರಕ್ರಿಯೆ ಇರಬೇಕು, ಅಂದಾಗ ರಫ್ತು ಸಲೀಸಲಾಗುತ್ತದೆ.

ಧಾರವಾಡ:

ಪ್ರಸಕ್ತ ಋತುವಿನಲ್ಲಿ ವಿದೇಶಗಳಿಗೆ ಧಾರವಾಡದಿಂದ ಆಫೂಸ್ ಮಾವು ರಫ್ತು ಮಾಡುವ ನಿಟ್ಟಿನಲ್ಲಿ ಮಂಗಳವಾರ ಧಾರವಾಡ ಮಾವು ಬೆಳೆಗಾರರ ಬಳಗವು ಮಾವು ಅಭಿವೃದ್ಧಿ ಕೇಂದ್ರದ ಆಶ್ರಯದಲ್ಲಿ ವಿಮಾನ ನಿಲ್ದಾಣ, ಸರಕು ಸಾಗಣೆ ವಿಮಾನಯಾನ, ರಫ್ತು ಸಂಸ್ಥೆಗಳು ಹಾಗೂ ಸಾಗಣೆದಾರರೊಂದಿಗೆ ವಿಸ್ಕೃತ ಚರ್ಚೆ ನಡೆಸಿತು.

ಇಲ್ಲಿಯ ಹೊರವಲಯದಲ್ಲಿರುವ ತರಕಾರಿ ಉತ್ಕೃಷ್ಟತಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಹಲವು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಗೋವಾ ಮೋಪಾದ ಜಿಎಂಆರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಏರ್ ಕಾರ್ಗೋ) ಬಿಜಿನೆಸ್ ಹೆಡ್ ಪುರುಷೋತ್ತಮಸಿಂಗ್ ಠಾಕೂರ್ ಮಾತನಾಡಿ, ಹಣ್ಣು ಹಾಗೂ ತರಕಾರಿ ವಿದೇಶಕ್ಕೆ ರಫ್ತು ಮಾಡುವುದು ಸಂರ್ಕೀಣ ಪ್ರಕ್ರಿಯೆ. ಬೆಳೆ ಕೊಯ್ಲಿನಿಂದ ಹಿಡಿದು ವಿಮಾನ ನಿಲ್ದಾಣದ ವರೆಗೆ ಮತ್ತು ಅಲ್ಲಿಂದ ತಲುಪಬೇಕಾದ ದೇಶದ ವರೆಗೆ ಒಂದು ವ್ಯವಸ್ಥಿತ ಪ್ರಕ್ರಿಯೆ ಇರಬೇಕು, ಅಂದಾಗ ರಫ್ತು ಸಲೀಸಲಾಗುತ್ತದೆ ಎಂದರು.

ನಮ್ಮ ನಿಲ್ದಾಣದಿಂದ ಹಲವು ದೇಶಗಳಿಗೆ ಸರಕು ಸಾಗಣೆ ವಿಮಾನಯಾನ ಸೇವೆ ಇದೆ. ಈಗಾಗಲೇ ಸಾವಯವ ಕೃಷಿ ಉತ್ಪನ್ನ, ತೋಟಗಾರಿಕೆ ಬೆಳೆಗಳು ರಫ್ತು ಆಗುತ್ತಿವೆ. ರೈತರ ತೋಟದಿಂದ ಹಣ್ಣು ತಂದ ಲಾರಿ ನಮ್ಮ ನಿಲ್ದಾಣ ತಲುಪಿದರೆ, ಮುಂದೆ ಉತ್ಪನ್ನ ವಿದೇಶದ ಗ್ರಾಹಕರಿಗೆ ಕೈ ಸೇರುವವರಿಗೆ ಎಲ್ಲ ಪ್ರಕ್ರಿಯೆ ನಿರ್ವಹಿಸುವ ವ್ಯವಸ್ಥೆಗಳು ನಮ್ಮಲ್ಲಿ ಲಭ್ಯವಿದೆ. ಕಳೆದ ವರ್ಷ 5000 ಟನ್‌ಗಳಷ್ಟು ಉತ್ಪನ್ನ ಸಾಗಣೆ ಮಾಡಿದ್ದೇವೆ. ಅದರಲ್ಲಿ ಶೇ. 70ರಷ್ಟು ಬೇಗನೆ ಹಾಳಾಗುವ ಉತ್ಪನ್ನಗಳಾಗಿವೆ. ಧಾರವಾಡ, ಬೆಳಗಾವಿ, ಹಾವೇರಿ ವಿಜಯಪುರ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಹಣ್ಣು ಮತ್ತು ತರಕಾರಿ ರಫ್ತಿಗೆ ಮೋಪಾ ವಿಮಾನ ನಿಲ್ದಾಣ ಅತ್ಯಂತ ಅನುಕೂಲಕರವಾಗಿದೆ ಎಂದು ಹೇಳಿದರು.

ರಫ್ತುದಾರ ಸುಧೀರ ಚಿತ್ರಗಾರ ಮಾತನಾಡಿ, ಧಾರವಾಡ ಭಾಗದ ಮಾವು ಬೆಳೆಗಾರರಿಗೆ ರಫ್ತು ಪ್ರಕ್ರಿಯೆ ಹೊಸದು. ಹೀಗಾಗಿ, ಅನೇಕ ತಾಂತ್ರಿಕ ಅಡಚಣೆಗಳು ಎದುರಾಗುತ್ತವೆ. ಮಾವು ಕೊಯ್ಲು ಏಪ್ರಿಲ್ 15ರ ಹೊತ್ತಿಗೆ ಆರಂಭವಾಗಲಿದೆ. ದೇಶದಿಂದ ದೇಶಕ್ಕೆ ರಫ್ತು ಮಾನದಂಡಗಳು ಬದಲಾಗುತ್ತಿವೆ. ಇವುಗಳನ್ನು ಅರಿತುಕೊಂಡು ಅದರಂತೆ ರಫ್ತು ಪ್ರಕ್ರಿಯೆ ನಡೆಸಬೇಕಾಗುತ್ತದೆ. ಮಾವು ಪರೀಕ್ಷೆ, ಪ್ಯಾಕಿಂಗ್ ಇತರ ಎಲ್ಲ ಪ್ರಕ್ರಿಯೆಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.

ಮಾವು ಬೆಳೆಗಾರರ ಬಳಗದ ಗೌರವಾಧ್ಯಕ್ಷ ಡಾ. ರಾಜೇಂದ್ರ ಪೋದ್ದಾರ, ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಮಾವು ಬೆಳೆಯ ಪ್ರದೇಶ, ಉತ್ಪಾದನೆ, ಆರ್ಥಿಕ ವಹಿವಾಟು, ರಫ್ತು ಸಿದ್ಧತೆಗಳ ಕುರಿತು ವಿವರಿಸಿದರು. ಮಾವು ಬೆಳೆಗಾರರ ಬಳಗದ ಅಧ್ಯಕ್ಷ ಸುಭಾಸ ಆಕಳವಾಡಿ, ಉಪಾಧ್ಯಕ್ಷ ಪ್ರಮೋದ ಗಾಂವ್ಕರ್, ಕೊಪ್ಪಳ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ವಕ್ಕುಂದ, ಮಾವು ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಸಂತೋಷ ಸಪ್ಪಂಡಿ, ಹುಬ್ಬಳ್ಳಿ ಕೆಪೆಕ್ ಸಂಸ್ಥೆಯ ಸದಾನಂದ ಮಣ್ಣೂರ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಪ್ರಭು ನಡಕಟ್ಟಿ, ವಿಶ್ರಾಮ್ ಸಬನೀಸ್, ಸತ್ಯಜಿತ್ ಭಟ್ಟಾಚಾರ್ಯ, ಪಿ. ನವೀನಕುಮಾರ ಇದ್ದರು. ನಾಗರಾಜ ತಿಮ್ಮಾಪುರ, ನಿರ್ಮಲಾ ಹಿರೇಗೌಡರ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಬೆಳೆಗಾರರಿಗಾಗಿ ಮಾವು ಕ್ಯಾಲೆಂಡರ್ ಹಾಗೂ ಬಳಗದ ಕರಪತ್ರ ಬಿಡುಗಡೆ ಮಾಡಲಾಯಿತು. ವಿದೇಶಗಳಿಗೆ ಮಾವು ರಫ್ತು ಮಾಡಲು ರಾಸಾಯನಿಕ ಅವಶೇಷ ಪರೀಕ್ಷಾ ಅವಶ್ಯವಿರುವುದರಿಂದ ಕೃಷಿ ವಿವಿ ಆವರಣದಲ್ಲಿರುವ ರಾಸಾಯನಿಕ ಅವಶೇಷ ಪರೀಕ್ಷಾ ಪ್ರಯೋಗಾಲಯಕ್ಕೆ ಪ್ರತಿನಿಧಿಗಳು ಭೇಟಿ ನೀಡಿ, ವಿವರ ಪಡೆದರು.