ನಕಲಿ ಕೀ ಬಳಸಿ ಆಸ್ಪತ್ರೆಯಲ್ಲಿ ₹19 ಲಕ್ಷದ ಟ್ಯಾಬ್‌ ಕದ್ದ

| Published : Jul 17 2024, 12:47 AM IST

ಸಾರಾಂಶ

ನಕಲಿ ಕೀ ಬಳಸಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಶೇಖರಿಸಿಟ್ಟಿದ್ದ ಟ್ಯಾಬ್‌ಗಳನ್ನು ಕಳವು ಮಾಡಿದ್ದ ಮಾಜಿ ಆ್ಯಂಬುಲೆನ್ಸ್ ಚಾಲಕನೊಬ್ಬನನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಕಲಿ ಕೀ ಬಳಸಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಶೇಖರಿಸಿಟ್ಟಿದ್ದ ಟ್ಯಾಬ್‌ಗಳನ್ನು ಕಳವು ಮಾಡಿದ್ದ ಮಾಜಿ ಆ್ಯಂಬುಲೆನ್ಸ್ ಚಾಲಕನೊಬ್ಬ ಸಿದ್ದಾಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೊಸಕೆರೆಹಳ್ಳಿ ಸಮೀಪದ ದತ್ತಾತ್ರೇಯನಗರದ ನಿವಾಸಿ ಶ್ರೀನಿವಾಸ್ ಬಂಧಿತ. ₹19 ಲಕ್ಷ ಮೌಲ್ಯದ ಲೆನೋವಾ ಕಂಪನಿಯ 62 ಟ್ಯಾಬ್‌ಗಳು ಹಾಗೂ 2 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಜಯನಗರದ 2ನೇ ಹಂತದ ಬಿಬಿಎಂಪಿ ಆಸ್ಪತ್ರೆಯ ತಾತ್ಕಾಲಿಕ ದಸ್ತಾನು ಮಳಿಗೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಟ್ಯಾಬ್‌ಗಳು ಕಳ್ಳತನವಾಗಿದ್ದವು. ತನಿಖೆಗಿಳಿದ ಮೋಹನ್‌ ಡಿ.ಪಟೇಲ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆ ಆಸ್ಪತ್ರೆಯ ಆ್ಯಂಬುಲೆನ್ಸ್‌ ಚಾಲಕನಾಗಿದ್ದ ಶ್ರೀನಿವಾಸ್‌ನನ್ನು ಬಂಧಿಸಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಕೊರೋನಾ ಸಮಯದಲ್ಲಿ ಜಯನಗರದ ಬಿಬಿಎಂಪಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನಾಗಿ ಹೊರಗುತ್ತಿಗೆ ಆಧಾರದ ಮೇರೆಗೆ ಮೂರು ವರ್ಷ ಶ್ರೀನಿವಾಸ್ ಕೆಲಸ ಮಾಡಿದ್ದ. ಆ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಜತೆ ಆತನಿಗೆ ಆತ್ಮೀಯ ಒಡನಾಟ ಬೆಳೆಯಿತು. ಅದೇ ಸಮಯದಲ್ಲಿ ಆಸ್ಪತ್ರೆಯ ದಾಸ್ತಾನು ಕೇಂದ್ರದ ಬೀಗದ ಕೀಗಳನ್ನು ಆತ ನಕಲು ಮಾಡಿಕೊಂಡಿದ್ದ. ಇನ್ನು ಗುತ್ತಿಗೆ ಅ‍ವಧಿ ಮುಗಿದು ಆಸ್ಪತ್ರೆಯಲ್ಲಿ ಕೆಲಸ ತೊರೆದ ಬಳಿಕವು ವೈದ್ಯರು ಮತ್ತು ಸಿಬ್ಬಂದಿ ಜತೆ ಆತನ ಸಂಪರ್ಕ ಮುಂದುವರೆದಿತ್ತು. ಆಗಾಗ್ಗೆ ವೈದ್ಯರ ಕಾರುಗಳಿಗೆ ಆತನೇ ಚಾಲಕನಾಗಿ ಸಹ ಕೆಲಸ ಮಾಡುತ್ತಿದ್ದ.

ಹೀಗೆ ಆಸ್ಪತ್ರೆಗೆ ಬಂದಾಗ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿದ್ದ ದುಬಾರಿ ಮೌಲ್ಯದ ಹೊಸ ಟ್ಯಾಬ್‌ಗಳು ಆತನ ಕಣ್ಣಿಗೆ ಬಿದ್ದಿದೆ. ಹಣದಾಸೆಗೆ ಅವುಗಳನ್ನು ಕಳವು ಮಾಡಲು ಸಂಚು ರೂಪಿಸಿದ್ದ ಶ್ರೀನಿವಾಸ್‌, ಜು.10 ರಂದು ರಾತ್ರಿ ಆಸ್ಪತ್ರೆಗೆ ಬಂದು ನಕಲಿ ಕೀ ಬಳಸಿ ದಾಸ್ತಾನು ಕೇಂದ್ರದ ಬಾಗಿಲು ತೆರೆದು ಟ್ಯಾಬ್‌ಗಳನ್ನು ಕಳವು ಮಾಡಿದ್ದ. ಮರು ದಿನ ಟ್ಯಾಬ್ ಕಳ್ಳತನ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರಿಗೆ ಆಸ್ಪತ್ರೆ ಅಧಿಕಾರಿಗಳು ದೂರು ನೀಡಿದರು. ಅಂತೆಯೇ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಕೆಲವರನ್ನು ವಿಚಾರಿಸಿದರು. ಆ ವೇಳೆ ಶ್ರೀನಿವಾಸ್ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಆತನ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ಸಂಗ್ರಹಿಸಿದಾಗ ಕೃತ್ಯ ನಡೆದ ಸಂದರ್ಭದಲ್ಲಿ ಆಸ್ಪತ್ರೆ ಸುತ್ತಮುತ್ತ ಟವರ್‌ನಲ್ಲೇ ಆತನ ಮೊಬೈಲ್ ಸಂಪರ್ಕದಲ್ಲಿರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ಮತ್ತಷ್ಟು ಶೋಧಿಸಿದಾಗ ಕೃತ್ಯ ನಡೆದ ರಾತ್ರಿ ಆತನ ಮೊಬೈಲ್‌ನಿಂದ ನಮ್ಮ-122ಗೆ ಮಿಸ್ಡ್ ಕಾಲ್ ಬಂದಿರುವ ವಿಷಯ ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೇ ಮಿಸ್‌ಕಾಲ್‌!

ಇರುಳಿನಲ್ಲಿ ಆಸ್ಪತ್ರೆಯಲ್ಲಿ ಓಡಾಡುವ ಮೊಬೈಲ್‌ನ ಟಾರ್ಚ್ ಆನ್ ಮಾಡುವ ವೇಳೆ ಆಕಸ್ಮಿಕವಾಗಿ ತುರ್ತು ಕರೆ ಬಟನ್ ಅನ್ನು ಆತ ಒತ್ತಿದ್ದಾನೆ. ಆಗ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ 122)ಗೆ ಮಿಸ್ಡ್ ಕಾಲ್ ಆಗಿತ್ತು. ಈ ಮಾಹಿತಿ ಆಧರಿಸಿ ಶ್ರೀನಿವಾಸ್ ವಶಕ್ಕೆ ಪಡೆದು ವಿಚಾರಿಸಿದಾಗ ಹಣಕಾಸು ಸಮಸ್ಯೆಯಿಂದ ತಾನೇ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.