ದಿನದಿನಕ್ಕೂ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಜನರು ಭಯಗೊಂಡಿದ್ದಾರೆ. ಅಲ್ಲಲ್ಲಿ ನಿತ್ಯವೂ ನಾಯಿ ದಾಳಿ, ನಾಯಿಗಳು ಕಚ್ಚಿ ಮಕ್ಕಳಾದಿಯಾಗಿ ಜನರು ಗಾಯಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

- ದಾವಣಗೆರೆ ನಗರದ ಬಹುತೇಕ ಎಲ್ಲ ಕಡೆ ಬೀದಿನಾಯಿಗಳ ಉಪಟಳಕ್ಕೆ ಕಂಗೆಟ್ಟ ಜನ - ಶ್ವಾನಗಳ ಸೆರೆ ಕಾರ್ಯಾಚರಣೆ ಕೈಗೊಂಡು ಹಾವಳಿ ತಪ್ಪಿಸಲು ನಾಗರಿಕರ ಆಗ್ರಹ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಿನದಿನಕ್ಕೂ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಜನರು ಭಯಗೊಂಡಿದ್ದಾರೆ. ಅಲ್ಲಲ್ಲಿ ನಿತ್ಯವೂ ನಾಯಿ ದಾಳಿ, ನಾಯಿಗಳು ಕಚ್ಚಿ ಮಕ್ಕಳಾದಿಯಾಗಿ ಜನರು ಗಾಯಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಇಲ್ಲಿನ ಕೆಟಿಜೆ ನಗರ, ವಿನೋಬ ನಗರ, ನಿಟುವಳ್ಳಿ, ಲೇಬರ್ ಕಾಲನಿ ಸೇರಿದಂತೆ ಅನೇಕ ಕಡೆ ನಾಯಿಗಳ ಹಾವಳಿಗೆ ಜನರು ಭೀತಿಯಿಂದಲೇ ಕಾಲ ಕಳೆಯುವಂತಾಗಿದೆ. ರಾತ್ರಿವೇಳೆ ಅಷ್ಟೇ ಅಲ್ಲ, ಹಾಡಹಗಲೇ ಒಬ್ಬಂಟಿಯಾಗಿ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಯುವತಿಯರು, ವಯೋವೃದ್ಧರು ಸಂಚರಿಸುವುದೇ ಸವಾಲಿನ ಕೆಲಸವಾಗುತ್ತಿದೆ.

ವಿನೋಬ ನಗರ, ಶಂಕರ ವಿಹಾರ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿವೆ. ವಿನೋಬ ನಗರ 4ನೇ ಮುಖ್ಯರಸ್ತೆಯಲ್ಲಿ ಅಂಗಡಿಗೆ ಬಂದ ಯುವಕನೊಬ್ಬನ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ಯುವಕನು ಗಾಯಗೊಂಡಿದ್ದಾನೆ. ಇದೆಲ್ಲಾ ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಲ್ಲದೇ, 15ನೇ ವಾರ್ಡ್‌ನ ಶಂಕರ ವಿಹಾರ ಬಡಾವಣೆಯ ದೂಡಾ ಕಚೇರಿ ಸಮೀಪದ ಪ್ರದೇಶದಲ್ಲಿ ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದ 59 ವರ್ಷದ ಬಾಬಣ್ಣ ಎಂಬ ವ್ಯಕ್ತಿಯ ಮೇಲೆ ಬೀದಿ ನಾಯಿ ದಾಳಿ ಮಾಡಿ, ಗಂಭೀರ ಗಾಯಗಳಾಗುವಂತೆ ಕಚ್ಚಿ ಗಾಯಗೊಳಿಸಿದೆ. ಇನ್ನು ಕೆಟೆಜೆ ನಗರ- ಪಿ.ಜೆ. ಬಡಾವಣೆಗೆ ಹೊಂದಿಕೊಂಡಿರುವ ವಿದ್ಯಾರ್ಥಿ ಭವನದಿಂದ ಹರ್ಷ ಬಾರ್‌ವರೆಗಿನ ರಸ್ತೆ, ಕೆಟಿಜೆ ನಗರ 12ನೇ ಕ್ರಾಸ್ 3ನೇ ಮುಖ್ಯರಸ್ತೆ, ಸುತ್ತಲಿನ ಪ್ರದೇಶದಲ್ಲಿ ನಾಯಿಗಳ ಹಿಂಡು ಹಾವಳಿಗೆ ಜನ ಕಂಗಾಲಾಗಿದ್ದಾರೆ.

ಕೆಟಿಜೆ ನಗರ 12ನೇ ಕ್ರಾಸ್ ನ ಹಳೆ ಜಿಲ್ಲಾ ಖಜಾನೆ ಇದ್ದ ಕಟ್ಟಡದಲ್ಲಿ ಈಗ ಸರ್ಕಾರಿ ವಿದ್ಯಾರ್ಥಿನಿಯರ ಹಾಸ್ಟೆಲ್ ಇದೆ. ಇದೇ 12ನೇ ಕ್ರಾಸ್‌ ಮೂಲಕ 13, 14, 15, 16 ಹಾಗೂ 17ನೇ ಕ್ರಾಸ್‌ ಹಾಗೂ ಲೇಬರ್ ಕಾಲನಿ, ಭಗತ್ ಸಿಂಗ್ ನಗರ, ಕೆಬಿ ಬಡಾವಣೆಗೆ ಜನರು ಹೋಗಲು ಬಳಸುವ ರಸ್ತೆಯಾಗಿದೆ. ಆದರೆ, ವಿದ್ಯಾರ್ಥಿ ಭವನದಿಂದ ಹರ್ಷ ಬಾರ್‌ವರೆಗೆ ಇರುವ ಬಾರ್, ಮಾಂಸಾಹಾರಿ ಹೋಟೆಲ್‌ನವರು, ಅಲ್ಲಿಗೆ ಬಂದವರು ಹಾಕುವ ಆಹಾರ ತಿಂದು ಕೊಬ್ಬಿರುವ ನಾಯಿಗಳು ಇಲ್ಲಿನ ಜನರಿಗೆ ತೋಳಗಳಂತೆ ಕಾಡುತ್ತಿವೆ.

ಪಾಲಿಕೆಯಿಂದ ಇದೇ ನಾಯಿಗಳನ್ನು ಹಿಡಿದು ಕೊಂಡೊಯ್ದಿದ್ದರು. ಎಲ್ಲಿ ಬಿಟ್ಟಿದ್ದರೋ ಗೊತ್ತಿಲ್ಲ. ನಾಲ್ಕು ದಿನಗಳ ನಂತರ ಬಂದ ಅದೇ ನಾಯಿಗಳು ಮತ್ತೆ ತಮ್ಮ ಆರ್ಭಟ ಶುರುವಿಟ್ಟುಕೊಂಡಿವೆ. ಇಲ್ಲಿನ ನಾಯಿಗಳಿಗಂತೂ ಪ್ರತಿ 2-3 ದಿನಕ್ಕೆ ಕನಿಷ್ಠ 15-20 ಜನರಿಗೆ, ಹತ್ತಾರು ವಾಹನಗಳಿಗೆ ಬೆನ್ನುಹತ್ತಿ ಹೋಗದಿದ್ದರೆ, ಮಕ್ಕಳು, ಮಹಿಳೆಯರು, ಪುರುಷರು, ವಯೋವೃದ್ಧರನ್ನು ಕಚ್ಚಿ, ಮನುಷ್ಯ ರಕ್ತದ ರುಚಿ ಕಾಣದಿದ್ದರೆ ಅವುಗಳ ಮತ್ತಷ್ಟು ವ್ಯಗ್ರವಾಗುವಂತೆ ವರ್ತಿಸುತ್ತಿವೆ.

ವಿದ್ಯಾರ್ಥಿ ಭವನದಿಂದ ಹರ್ಷ ಬಾರ್‌ವರೆಗೆ ಇರುವಂತಹ ಮಾಂಸಾಹಾರಿ ಹೋಟೆಲ್‌ಗಳ ಅಳಿದುಳಿದ ರುಚಿ ರುಚಿಯಾದ ಮಾಂಸದ ಆಹಾರ, ಕೋಳಿ ಮಾಂಸದಂಗಡಿಗಳ ಅಳಿದುಳಿದ ಮಾಂಸವನ್ನು ತಿಪ್ಪೆ, ಚರಂಡಿಯಲ್ಲಿ, ಬಿಸಾಡಿದ್ದ ಸ್ಥಳದಲ್ಲಿ ತಿಂದು ಕೊಬ್ಬಿರುವ ನಾಯಿಗಳ ಹಿಂಡಂತೂ ಜನರಿಗೆ ಹೆದರಷ್ಟು ಕೊಬ್ಬಿವೆ. ಅವು ಹೆದರುವುದು ಪಾಲಿಕೆಯಿಂದ ಬಲೆ ಹಿಡಿದು ಬರುವವರಿಗೆ ಮಾತ್ರ ಎಂಬಂತಾಗಿದೆ ಎನ್ನುತ್ತಾರೆ ನಾಯಿ ಕಡಿತದಿಂದ ಗಾಯಗೊಂಡ ಕುಟುಂಬ ಸದಸ್ಯರು.

ಹಿಂದಿನಿಂದಲೂ ಪಾಲಿಕೆ ಅಧಿಕಾರಿಗಳಿಗೆ ಬೀದಿನಾಯಿಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವಂತೆ ಸ್ಥಳೀಯರು ನಿರಂತರ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ನಾಯಿ ಹಿಡಿಸುವ ಕೆಲಸ ಮಾಡುತ್ತಾರೆ. ಪಾಲಿಕೆ ಒಂದು ವೇಳೆ ಇಂತಹ ನಾಯಿಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳದಿದ್ದರೆ ಮಕ್ಕಳು, ಮಹಿಳೆಯರ ಪಾಲಿಗೆ ಅಪಾಯಕಾರಿಯಾದ ನಾಯಿಗಳ ವಿರುದ್ಧ ಜನರೇ ಏನಾದರೂ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸ್ಥಳೀಯರು ನೀಡುತ್ತಿದ್ದಾರೆ. ಅಪಾಯಕಾರಿ ನಾಯಿಗಳನ್ನು ಸೆರೆಹಿಡಿದು ಸಾಗಿಸುವ ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ತುರ್ತು ಮುಂದಾಬೇಕಾಗಿದೆ ಎಂಬುದು ಅಸಮಾಧಾನಿಗಳ ಎಚ್ಚರಿಕೆಯಾಗಿದೆ.

- - -

-5ಕೆಡಿವಿಜಿ9: ದಾವಣಗೆರೆಯಲ್ಲಿ ಬೀದಿನಾಯಿ ಕಚ್ಚಿ ಗಾಯಗೊಂಡ ವ್ಯಕ್ತಿ.

-5ಕೆಡಿವಿಜಿ10: ದಾವಣಗೆರೆಯಲ್ಲಿ ಬೀದಿನಾಯಿ ಕಚ್ಚಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು.

-5ಕೆಡಿವಿಜಿ11, 12:

-5ಕೆಡಿವಿಜಿ13: ನಾಯಿಗಳ ಗುಂಪಿನ ನಾಯಕಿಯಂತೆ ಈ ನಾಯಿ.