ಜಿಲ್ಲೆಯ ಕೈಗಾರಿಕೆಗಳು, ಗಾರ್ಮೆಂಟ್ಸ್‌ಗಳಲ್ಲಿ ಶೇ.80ರಷ್ಟು ಕನ್ನಡಿಗರಿಗೇ ಉದ್ಯೋಗ ಅವಕಾಶ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ನ.15ರಂದು ನಗರದ ಕರೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಕ.ರ.ವೇ. ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದ್ದಾರೆ.

- ಕೈಗಾರಿಕೆ, ಗಾರ್ಮೆಂಟ್ಸ್, ಉದ್ಯಮದಲ್ಲಿ ಶೇ.80 ಹುದ್ದೆ ಕನ್ನಡಿಗರಿಗೆ ಮೀಸಲಿಡಿ: ರಾಮೇಗೌಡ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ಕೈಗಾರಿಕೆಗಳು, ಗಾರ್ಮೆಂಟ್ಸ್‌ಗಳಲ್ಲಿ ಶೇ.80ರಷ್ಟು ಕನ್ನಡಿಗರಿಗೇ ಉದ್ಯೋಗ ಅವಕಾಶ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ನ.15ರಂದು ನಗರದ ಕರೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಕ.ರ.ವೇ. ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11.30ಕ್ಕೆ ಕರೂರು ಕೈಗಾರಿಕಾ ಪ್ರದೇಶದ ವಿವಿಧ ಕೈಗಾರಿಕಾ ಕಂಪನಿಗಳು, ಗಾರ್ಮೆಂಟ್ಸ್‌ಗಳಿಗೆ ಭೇಟಿ ನೀಡಿ, ಮನವಿ ಅರ್ಪಿಸುವ ಮೂಲಕ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವಂತೆ ಒತ್ತಾಯಿಸಲಿದ್ದೇವೆ ಎಂದರು.

ಕೈಗಾರಿಕೆಗಳು, ಗಾರ್ಮೆಂಟ್ಸ್‌ಗಳಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡುವಂತೆ ಅವುಗಳ ಮಾಲೀಕರು, ಆಡಳಿತ ಮಂಡಳಿಗೆ ತಿಳಿಸಿ, ಜಾಗೃತಿ ಮೂಡಿಸಲಾಗುವುದು. ನ.1ರಿಂದ ಬೆಂಗಳೂರಿನ ಎಲ್ಲ ಐಟಿ-ಬಿಟಿ ಕಂಪನಿಗಳಲ್ಲಿ ಎಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಿದ್ದಾರೆಂಬ ಬಗ್ಗೆ ಕಂಪನಿಗಳಿಗೆ ಮಾಹಿತಿ ಕೋರಿದ್ದು, 120ಕ್ಕೂ ಹೆಚ್ಚು ಕಂಪನಿ ಸ್ಪಂದಿಸಿವೆ. ನ.30ರವರೆಗೂ ಅಭಿಯಾನ ನಡೆಯಲಿದೆ ಎಂದು ಅವರು ಹೇಳಿದರು.

ಪ್ರತಿ ಸಂಸ್ಥೆಯಲ್ಲೂ ಒಟ್ಟು ಎಷ್ಟು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ, ಅದರಲ್ಲಿ ಕನ್ನಡಿಗರು ಎಷ್ಟು ಜನ, ಪರಭಾಷಿಕರು ಎಷ್ಟು ಜನ ಉದ್ಯೋಗಿಗಳಿದ್ದಾರೆಂಬ ಸಂಪೂರ್ಣ ಮಾಹಿತಿಯನ್ನು ಕರವೇ ರಾಜ್ಯ ಸಮಿತಿಗೆ ನೀಡುವಂತೆ ಮನವಿ ಮಾಡಲಾಗುವುದು. ಯಾವುದೇ ಸಂಸ್ಥೆ, ಕಂಪನಿಯವರು ಸರಿಯಾದ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದರೆ, ಅಂತಹ ಸಂಸ್ಥೆ ವಿರುದ್ಧ ಕ.ರ.ವೇ. ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಸಿದರು.

ಜಾಗೃತಿ ಅಭಿಯಾನಕ್ಕೆ ಕೈಗಾರಿಕಾ ಸಂಸ್ಥೆಗಳು ಸ್ಪಂದಿಸಿ ಸಹಕರಿಸಿದರೆ ಅದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾಹಿತಿ ಸಂಗ್ರಹಿಸಿ, ಕ.ರ.ವೇ. ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದಲ್ಲಿ ಎಲ್ಲ ಜಿಲ್ಲಾಧ್ಯಕ್ಷರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗುವುದು. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಒತ್ತಡ ಹೇರಲಾಗುವುದು. ಸರ್ಕಾರ ಈ ಕಾನೂನು ಜಾರಿಗೊಳಿಸದಿದ್ದರೆ ಕರವೇ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ರಾಮೇಗೌಡ ತಿಳಿಸಿದರು.

ವೇದಿಕೆ ಮುಖಂಡರಾದ ಸಂತೋಷ, ರವಿಕುಮಾರ, ಗೋಪಾಲ ದೇವರಮನೆ ಇತರರು ಇದ್ದರು.

- - -

-5ಕೆಡಿವಿಜಿ5: ದಾವಣಗೆರೆಯಲ್ಲಿ ಗುರುವಾರ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.