ಸಾರಾಂಶ
ಶಿಕ್ಷಕಿಯೊಬ್ಬಳು ಮಕ್ಕಳನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜುಂಜನಬೈಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.
ಕನ್ನಡಪ್ರಭ ವಾರ್ತೆ ಕಲಘಟಗಿ
ಶಿಕ್ಷಕಿಯೊಬ್ಬಳು ಮಕ್ಕಳನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜುಂಜನಬೈಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ. ಶಿಕ್ಷಕಿ ಸುಜಾತಾ ಸುಣಗಾರ ಎಂಬುವವರು 4ನೇ ಹಾಗೂ 5ನೇ ತರಗತಿ ಮಕ್ಕಳನ್ನು ಕೋಲಿನಿಂದ ಮನಬಂದಂತೆ ಥಳಿಸಿದ್ದಾರೆ.ವಿಷಯ ತಿಳಿದು ಘಟನಾ ಸ್ಥಳಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಹಾಗೂ ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ ಆಗಮಿಸಿ, ಮಕ್ಕಳಿಂದ ಹಾಗೂ ಗ್ರಾಮಸ್ಥರಿಂದ ಘಟನೆ ಕುರಿತು ಮಾಹಿತಿ ಪಡೆದರು.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರ, ‘ಶಿಕ್ಷಕಿ ಥಳಿಸಿರುವ ಬಗ್ಗೆ ಮಕ್ಕಳು ಮಾಹಿತಿ ನೀಡಿದ್ದಾರೆ. ಮಕ್ಕಳನ್ನು ಥಳಿಸುವುದು ಅಪರಾಧವಾಗಿದೆ. ಶಿಕ್ಷಕಿ ತಪ್ಪು ಮಾಡಿರುವುದು ಸಾಬೀತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಶಾಲೆಗೆ ಬರದಂತೆ ಶಿಕ್ಷಕಿಗೆ ಈಗಾಗಲೇ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.