ಬಸವನಬಾಗೇವಾಡಿ ತಾಲೂಕಿನ ಬುದ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಎಸ್. ಚಿಮ್ಮಲಗಿ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ತೀವ್ರ ಆಸಕ್ತಿ ಮೂಡಿಸಲು, ಸಂತಸದ ಕಲಿಕೆ ಸಾಕಾರಗೊಳಿಸಲು ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಬಸವನಬಾಗೇವಾಡಿ ತಾಲೂಕಿನ ಬುದ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಎಸ್. ಚಿಮ್ಮಲಗಿ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ತೀವ್ರ ಆಸಕ್ತಿ ಮೂಡಿಸಲು, ಸಂತಸದ ಕಲಿಕೆ ಸಾಕಾರಗೊಳಿಸಲು ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.ವಿದ್ಯಾರ್ಥಿಗಳನ್ನು ಪರಿಸರದೊಂದಿಗೆ ನೇರವಾಗಿ ತೊಡಗಿಸಲು ಬುದ್ನಿಯ ಪ್ರಾಣಿ ವೈವಿಧ್ಯತೆಯ ಅಧ್ಯಯನ ಯೋಜನೆ ಕೈಗೊಂಡಿದ್ದಾರೆ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳೇ ವಿಜ್ಞಾನಿಗಳಾಗಿ ಬದಲಾದರು. ಶಾಲೆಯ ಸುತ್ತಮುತ್ತಲಿನ ಹಾಗೂ ಗ್ರಾಮದ ವಿವಿಧ ಪ್ರಾಣಿ, ಕೀಟ ಹಾಗೂ ಪಕ್ಷಿಗಳ ಛಾಯಾಚಿತ್ರಗಳನ್ನು ಮಕ್ಕಳು ಸ್ವತಃ ತೆಗೆದು, ಅವುಗಳ ಗುರುತಿಸುವಿಕೆ ಮತ್ತು ದತ್ತಾಂಶ ಸಂಗ್ರಹ ಮಾಡಿದರು. ಈ ಎಲ್ಲಾ ಮಾಹಿತಿಯನ್ನು ಡಿಜಿಟಲ್ ಆ್ಯಪ್‌ನಲ್ಲಿ ಯಶಸ್ವಿಯಾಗಿ ದಾಖಲಿಸಿದ್ದಾರೆ.
ಶಾಲೆಯಲ್ಲಿ ಒಲಿಯಾಂಡರ್ ಹಾಕ್ ಪತಂಗದ ಸಂಪೂರ್ಣ ಜೀವನಚಕ್ರವನ್ನು ವಿದ್ಯಾರ್ಥಿಗಳೊಂದಿಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದು, ಮೊಟ್ಟೆಯಿಂದ ಹಿಡಿದು ಕಂಬಳಿಹುಳು, ಕೋಶಾವಸ್ಥೆ ಹಾಗೂ ಚಿಟ್ಟೆಯಾಗಿ ಹೊರಬರುವವರೆಗಿನ ಪ್ರತಿಯೊಂದು ಹಂತವನ್ನು ಮಕ್ಕಳು ಕಣ್ಣಾರೆ ಕಂಡು, ಪ್ರಕೃತಿಯ ವಿಸ್ಮಯ ಅನುಭವಿಸಿ ತಿಳಿಯುವಂತೆ ಶಿಕ್ಷಕಿ ಬಸವರಾಜೇಶ್ವರಿ ಮಾಡಿದ್ದಾರೆ.ವಿಜಯಪುರ ಜಿಲ್ಲೆಯ ಡಿ.ಎಸ್.ಇ.ಆರ್.ಟಿ ಉಸ್ತುವಾರಿಯಲ್ಲಿ ತರಗತಿ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಶೈಕ್ಷಣಿಕ ವಿಡಿಯೋಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಈ ವೀಡಿಯೊಗಳನ್ನು ರಾಜ್ಯಮಟ್ಟದ ಡಿಕ್ಷಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು ಈ ಶಾಲೆಯ ಮಕ್ಕಳಿಗೆ ಮಾತ್ರವಲ್ಲದೆ ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೀಕ್ಷಿಸಿ ಕಲಿಯಲು ಸಹಕಾರಿಯಾಗಿದೆ.
ಇಲಾಖೆ ಕೈಗೊಂಡ ಅನುಭವಾತ್ಮಕ ವಿಜ್ಯಾನ ಕಲಿಕೆ , ಇ-ಕಂಟೆಂಟ್ ಸೃಜನೆ ಇತರ ತರಬೇತಿಗಳಲ್ಲಿ ಪರಿಚಯಿಸಿದ ನೂತನ ಬೋಧನಾ ಪದ್ಧತಿಗಳನ್ನು ಶಾಲೆಯಲ್ಲಿ ಸಕ್ರಿಯವಾಗಿ ಜಾರಿಗೆ ತಂದಿದ್ದಾರೆ. 21ನೇ ಶತಮಾನದ ಕೌಶಲ್ಯದಾರಿತ ಕಲಿಕೆ, ಕಲಾ ಸಮ್ಮಿಳಿತ ಕಲಿಕೆ, ಜೀವನ ಚಕ್ರಗಳ ವೀಕ್ಷಣೆ, ಮಾದರಿಗಳ ಸಂಗ್ರಹಣೆ, ಆನ್ಲೈನ್ ಕಾರ್ಯಗಾರ, ತಂತ್ರಜ್ಞಾನ ಆಧಾರಿತ ಕಲಿಕೆ , ದೀಕ್ಷಾ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೃಜಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಆಲೋಚನೆ, ಸೃಜನಶೀಲತೆ ಮತ್ತು ತಂಡಕಾರ್ಯದ ಸಾಮರ್ಥ್ಯ ಬೆಳೆಸುವಂತೆ ಮಾಡುತ್ತಿದ್ದಾರೆ.ತರಬೇತಿಗಳಲ್ಲಿ ಕಲಿತ ನೂತನ ವಿಷಯಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳುತ್ತ, ತರಗತಿಯನ್ನು ಡಿಜಿಟಲ್ ಸ್ನೇಹಿಯಾಗಿಸಲಾಗಿದೆ. ಕಠಿಣವಾದ ವೈಜ್ಞಾನಿಕ ಪ್ರಯೋಗಗಳು ಮತ್ತು ಸಿದ್ಧಾಂತಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ವಿವಿಧ ಎಐ (AI) ಉಪಕರಣಗಳು ಹಾಗೂ ಸಿಮ್ಯುಲೇಶನ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಈ ಶಿಕ್ಷಕಿ.
ಬಸವರಾಜೇಶ್ವರಿ ಚಿಮ್ಮಲಗಿ ಶಿಕ್ಷಕಿ ಅವರು ಎಲ್ಲ ವಿಷಯದಲ್ಲಿ ಪರಿಣಿತರಿದ್ದಾರೆ. ಅವರು ಮಕ್ಕಳಿಗೆ ಪ್ರಾಯೋಗಿಕವಾಗಿ ಪಾಠ ಬೋಧನೆ ಮಾಡುತ್ತಾರೆ. ನಮ್ಮಲ್ಲಿ ಕೋಣೆಗಳ ಕೊರತೆ ಇದ್ದರೂ ಅದನ್ನು ಲೆಕ್ಕಿಸದೇ ಅವರು ಮಕ್ಕಳೊಂದಿಗೆ ಮಕ್ಕಳಾಗಿ ಆಕರ್ಷಕವಾಗಿ ತಮ್ಮ ಬೋಧನೆ ಮಾಡುತ್ತಾರೆ.-ಸಿ.ಆರ್.ಗಿರಗಾಂವಿ, ಮುಖ್ಯ ಗುರುಗಳು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುದ್ನಿ
ನಾನು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್.ಐ.ಇ) ಅಧ್ಯಯನ ಮಾಡಿದ್ದೇನೆ. ಅಲ್ಲಿ ವಿವಿಧ ಮಾದರಿಗಳೊಂದಿಗೆ ಅತ್ಯುತ್ತಮವಾಗಿ ಅಲ್ಲಿನ ಶಿಕ್ಷಕ ಬಳಗ ಮಾಡುತ್ತಾರೆ. ಇದು ನನಗೆ ಪ್ರೇರಣೆ. ಶಿಕ್ಷಕ ವೃತ್ತಿ ಗೌರವ ವೃತ್ತಿ. ಮಕ್ಕಳಿಗೆ ಏನಾದರೂ ಹೊಸತನ ಕೊಡುವ ಆಶಯ ನಾನು ಹೊಂದಿದ್ದೇನೆ.ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬೋಧಿಸಬೇಕೆಂಬ ಉದ್ದೇಶ ನನ್ನದು.-ಬಸವರಾಜೇಶ್ವರಿ ಚಿಮ್ಮಲಗಿ. ಶಿಕ್ಷಕಿ
ಶಿಕ್ಷಕಿ ಬಸವರಾಜೇಶ್ವರಿ ಚಿಮ್ಮಲಗಿ ಅವರು ಕ್ರಿಯಾಶೀಲರಾಗಿ ವಿಜ್ಞಾನ ವಿಷಯ ಮಕ್ಕಳಿಗೆ ಮನಮುಟ್ಟುವಂತೆ ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡಿ ಬೋಧನೆ ಮಾಡುತ್ತಾರೆ. ಈಗಾಗಲೇ ಇವರು ಮಾಡಿರುವ ವಿಡಿಯೋಗಳು ದೀಕ್ಷಾ ಆ್ಯಪ್ ನಲ್ಲಿ ಆಪಲೋಡ್ ಆಗಿವೆ. ಇಡೀ ಜಗತ್ತು ಇವುಗಳನ್ನು ನೋಡಬಹುದು. ಇತರೇ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.=ರೇಣುಕಾ ಕಲಬುರ್ಗಿ, ಕ್ಷೇತ್ರಶಿಕ್ಷಣಾಧಿಕಾರಿಗಳು, ಬಸವನಬಾಗೇವಾಡಿ