ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಶಿಕ್ಷಕರ ಬದುಕು ಸಾರ್ಥಕ

| Published : Sep 15 2025, 01:00 AM IST

ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಶಿಕ್ಷಕರ ಬದುಕು ಸಾರ್ಥಕ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿದಾಗ ಶಿಕ್ಷಕರ ಬದುಕು ಸಾರ್ಥಕವೆನಿಸುತ್ತದೆ. ತಾಯಿ ಜನ್ಮ ಕೊಟ್ಟರೆ, ಶಿಕ್ಷಕರು ಜೀವನವನ್ನು ನೀಡುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನಕ್ಕೆ ಒಂದು ಗುರಿ ಮತ್ತು ಗುರು ಅಗತ್ಯ ಎಂದು ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಸೊರಬ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿದಾಗ ಶಿಕ್ಷಕರ ಬದುಕು ಸಾರ್ಥಕವೆನಿಸುತ್ತದೆ. ತಾಯಿ ಜನ್ಮ ಕೊಟ್ಟರೆ, ಶಿಕ್ಷಕರು ಜೀವನವನ್ನು ನೀಡುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನಕ್ಕೆ ಒಂದು ಗುರಿ ಮತ್ತು ಗುರು ಅಗತ್ಯ ಎಂದು ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಪಟ್ಟಣದ ರಂಗನಾಥ ಕನ್ವೆನ್ಷನ್ ಹಾಲ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಅನೇಕ ಸರ್ಕಾರಿ ಶಾಲೆಗಳು ಅವನತಿ ಕಾಣುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳು ಇದ್ದರೂ ಸಹ ಮಕ್ಕಳ ದಾಖಲಾತಿ ಹೆಚ್ಚಿಸುವುದು ಸಾಹಸದ ಕೆಲಸವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದೆ. ಆದರೆ ಜ್ಞಾನಕ್ಕಾಗಿ ಇಂಗ್ಲಿಷ್ ಬಳಸಿ ಬದುಕು ಕಟ್ಟಿಕೊಳ್ಳಲು ಕನ್ನಡ ಕಲಿಕೆ ಅಗತ್ಯ. ಕನ್ನಡದ ಶಿಕ್ಷಣದಿಂದ ಎಲ್ಲಾ ಕ್ಷೇತ್ರದಲ್ಲೂ ಪಾರಂಗತರಾಗಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಸಂಸ್ಕಾರ ಕಲಿಸಿ ಸಮಾಜಮುಖಿಯಾಗಿ ಪರಿವರ್ತಿಸಿ ಮುಖ್ಯ ವೇದಿಕೆಗೆ ತರುವ ಗುರುತರವಾದ ಹೊಣೆ ಶಿಕ್ಷಕರದ್ದಾಗಿದೆ ಎಂದ ಅವರು, ರಾಜಕೀಯ ಕ್ಷೇತ್ರದ ವಿವಿಧ ಆಯಾಮಗಳನ್ನು ಕಂಡಿದ್ದೇನೆ. ಪ್ರಸ್ತುತ ದಿನಮಾನಗಳಲ್ಲಿ ರಾಜಕೀಯ ಮೌಲ್ಯಗಳು ಬದಲಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಸತ್ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ. ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಗುರುಗಳನ್ನು ಗೌರವಯುತವಾಗಿ ಕಾಣಬೇಕು. ವೇದಿಕೆಯಿಂದ ಅನೇಕ ಸಾಮಾಜಿಕ ಹಾಗೂ ಜನಪರವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಉತ್ತಮ ಶಿಕ್ಷಕರನ್ನು ಗೌರವಿಸುತ್ತಿರುವುದು ಸಂತಸ ಎನಿಸುತ್ತಿದೆ. ಈಗಾಗಲೇ ಸಮಿತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು ಒಂದು ಸಾವಿರ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ಹೇಳಿದರು.

ದುಗ್ಲಿ ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ವಂದನಾ ರೈ ಕಾರ್ಕಳ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ, ಸಮಾಜ ಸೇವಕ ಕಾರ್ತಿಕ್ ಸಾಹುಕಾರ್ ಆನವಟ್ಟಿ, ನಲಿಕಲಿ ಕ್ರಿಯಾಶೀಲ ತಾರೆಯರು ಟ್ರಸ್ಟ್ ಅಧ್ಯಕ್ಷೆ ಫೌಜಿಯಾ ಸರಚತ್, ಶ್ರೀಧರ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಗುತ್ತೇದಾರ್ ಶೇಕ್ ನವಾಬ್ ಮೊದಲಾದವರು ಇದ್ದರು.

ದಸರಾ ವಿಷಯದಲ್ಲಿ ರಾಜಕೀಯ ಸಲ್ಲದು

ನಾಡಹಬ್ಬ ದಸರಾ ಉದ್ಘಾಟನೆಯ ವಿಷಯದಲ್ಲಿ ರಾಜಕೀಯ ಮಾಡುವುದು ಸಲ್ಲದು. ರಾಷ್ಟ್ರಕವಿ ಕುವೆಂಪು ಅವರಿಗೆ ಕನ್ನಡ ಕಲಿಕೆಗೆ ಉತ್ತೇಜನ ನೀಡಿದವರು ಒಬ್ಬ ಅಲ್ಪಸಂಖ್ಯಾತ ವ್ಯಕ್ತಿ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಕೃಷ್ಣರಾಜ ಒಡೆಯರ್ ಕೂಡ ಅಂದಿನ ದಿವಾನರಾದ ಮಿರ್ಜಾ ಇಸ್ಮಾಯಿಲ್ ಅವರನ್ನು ಅಂಬಾರಿ ಮೇಲೆ ಕೂರಿಸಿಕೊಂಡಿದ್ದರು ಎಂದು ಮೈಸೂರು ದಸರಾ ಉದ್ಘಾಟನೆ ಆಯ್ಕೆಯಾಗಿರುವ ಸಾಹಿತಿ ಬಾನು ಮುಸ್ತಾಕ್ ಅವರನ್ನು ವೈ.ಎಸ್.ವಿ.ದತ್ತಾ ಸಮರ್ಥಿಸಿದರು.