ಶಾಲಾ ಮಕ್ಕಳಿಂದ ಕಾರು ಕ್ಲೀನ್ ಮಾಡಿಸಿದ ಶಿಕ್ಷಕ?

| Published : Feb 20 2024, 01:48 AM IST

ಸಾರಾಂಶ

ಬೆಂಗಳೂರು, ದಾವಣಗೆರೆಯ ಸರ್ಕಾರಿ ಶಾಲೆಗಳಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಘಟನೆ ಮಾಸುವ ಮೊದಲೇ ಮತ್ತೊಂದು ಅಚಾತುರ್ಯ ನಡೆದಿದೆ. ಶಾಲೆಗೆ ಬಂದ ವಿದ್ಯಾರ್ಥಿಗಳಿಂದಲೇ ತನ್ನ ಕಾರು ಸ್ವಚ್ಛ ಮಾಡಿಸಿಕೊಂಡಿರುವ ಆರೋಪ ಈಗ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಕೇಳಿಬಂದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಬೆಂಗಳೂರು, ದಾವಣಗೆರೆಯ ಸರ್ಕಾರಿ ಶಾಲೆಗಳಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಘಟನೆ ಮಾಸುವ ಮೊದಲೇ ಮತ್ತೊಂದು ಅಚಾತುರ್ಯ ನಡೆದಿದೆ. ಶಾಲೆಗೆ ಬಂದ ವಿದ್ಯಾರ್ಥಿಗಳಿಂದಲೇ ತನ್ನ ಕಾರು ಸ್ವಚ್ಛ ಮಾಡಿಸಿಕೊಂಡಿರುವ ಆರೋಪ ಈಗ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಕೇಳಿಬಂದಿದೆ. ನಾಲತವಾಡದ ವೀರೇಶ್ವರ ವೃತ್ತದ ಬಳಿಯ ಶಾಸಕರ ಮಾದರಿಯ ಸರ್ಕಾರಿ ಪ್ರಾಥಮಿಕ ಶಾಲೆ ನಾಲತವಾಡದಲ್ಲಿ ಫೆ.12ರಂದು ಈ ಘಟನೆ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಮುಖ್ಯ ಶಿಕ್ಷಕನ ಕಾರು ತೊಳೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿನ ಶಾಲಾ ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಕಾರು ತೊಳೆಸಿದ ಆರೋಪಕ್ಕೆ ಒಳಗಾಗದವರು. ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿಗಳು ಪೈಪ್‌ನಿಂದ ನೀರು ಬಳಸಿ ಕಾರು ಸ್ವಚ್ಛ ಮಾಡುತ್ತಿರುವುದು ಸ್ಪಷ್ಟವಾಗಿದೆ. ಮಕ್ಕಳಿಬ್ಬರು ಶಾಲಾ ಆವರಣದಲ್ಲಿ ನೀರಿನಿಂದ ಕಾರು ತೊಳೆದು ಟವೆಲ್‌ನಿಂದ ಕ್ಲೀನ್ ಮಾಡುತ್ತಿರುವ ವಿಡಿಯೋ ಕನ್ನಡಪ್ರಭಕ್ಕೆ ಸಿಕ್ಕಿದೆ. ಇಂತಹ ಶಿಕ್ಷಕರ ವಿರುದ್ಧ ಶಿಕ್ಷಣ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನನ್ನ ಗಮನಕ್ಕೆ ಬಂದಿದೆ- ಬಿಇಒ:

ಇನ್ನು ಶಾಲೆಯಲ್ಲಿ ನಡೆದ ಘಟನೆ ನನ್ನ ಗಮನಕ್ಕೆ ಬಂದಿದೆ ಎಂದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಫೆ.12ರಂದು ಶಿಕ್ಷಕರ ಕಾರನ್ನು ವಿದ್ಯಾರ್ಥಿಗಳು ತೊಳೆದಿದ್ದಾರೆ ಎಂದು ಮಾಹಿತಿ ಬಂದಿದ್ದು, ನಾನು 16ರಂದು ಶಾಲೆಗೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಮತ್ತೊಮ್ಮೆ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಹಾಗೂ ಮುಖ್ಯ ಶಿಕ್ಷಕರ ಹೇಳಿಕೆ ಪಡೆಯಲಾಗುವುದು ಎಂದಿದ್ದಾರೆ.ಇನ್ನು ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಹೇಳಿಕೆ ಪ್ರಕಾರ ಕಾರು ನಾನು ಕ್ಲೀನ್ ಮಾಡಿಸಿಲ್ಲ, ಕಾರಿನ ಪಕ್ಕದಲ್ಲಿ ಗಿಡಗಳನ್ನು ನೆಡಲಾಗಿದೆ. ಆ ಗಿಡಗಳಿಗೆ ಪೈಪ್‌ನಿಂದ ನೀರು ಬಿಡುವಾಗ ಮಕ್ಕಳು ನನ್ನ ಕಾರಿಗೂ ಅದೇ ಪೈಪ್ ನೀರಿನಿಂದ ಸ್ವಚ್ಛಗೊಳಿಸಿದ್ದಾರೆ. ಕಾರು ಸ್ವಚ್ಛಗೊಳಿಸುವಂತೆ ನಾನು ಹೇಳಿಲ್ಲ ಎಂದು ಹೇಳಿರುವುದಾಗಿ ಬಿಇಓ ಸ್ಪಷ್ಟಪಡಿಸಿದ್ದಾರೆ. ಆದರೂ ಕಾರು ತೊಳೆಸಿದ್ದು ಮಕ್ಕಳ ದುರ್ಬಳಕೆ ಆಗಿರುವುದರಿಂದ ಘಟನೆ ಕುರಿತು ಮುಖ್ಯ ಶಿಕ್ಷಕನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದಿದ್ದಾರೆ.