ಸಾರಾಂಶ
ಹಾತೂರು ಗ್ರಾಮದ ಖಂಡಿಕ ವಿಶ್ವೇಶ್ವರ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಹೊನ್ನೇಕೊಪ್ಪ ಶಾಲೆ, ಗ್ರಾಮಸ್ಥರಿಂದ ಸನ್ಮಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಎಚ್.ಎಸ್. ಪುಟ್ಟಸ್ವಾಮಿ ಅವರು ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆ, ಹಳ್ಳಿಬೈಲು, ಹೊನ್ನೇಕೊಪ್ಪ ಸರ್ಕಾರಿ ಶಾಲೆಯಲ್ಲಿ 32 ವರ್ಷ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದು ಹಾತೂರು ಗ್ರಾಮದ ಮುಖಂಡ ಕೆ.ಎಸ್.ಉಮೇಶ್ ಪ್ರಶಂಸೆ ವ್ಯಕ್ತಪಡಿಸಿದರು.
ಶುಕ್ರವಾರ ತಾಲೂಕಿನ ಹಾತೂರು ಗ್ರಾಮದ ಖಂಡಿಕ ವಿಶ್ವೇಶ್ವರ ಮಹಿಷ ಮರ್ಧಿನಿ ದೇವಸ್ಥಾನ ಆವರಣದಲ್ಲಿ ಹೊನ್ನೇಕೊಪ್ಪ ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕ ಎಚ್.ಎಸ್. ಪುಟ್ಟಸ್ವಾಮಿ, ಶಾಲೆಯ ಬಿಸಿಯೂಟ ಅಡುಗೆಯವರಾದ ಗಿರಿಜಮ್ಮರನ್ನು ಗ್ರಾಮಸ್ಥರು, ಶಾಲೆಯ ಎಸ್.ಡಿ.ಎಂ.ಸಿ.ಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾತೂರು ಗ್ರಾಮದ ಹೊನ್ನೇಕೊಪ್ಪ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಶಿಕ್ಷಕರಾಗಿದ್ದ ಎಚ್.ಎಸ್.ಪುಟ್ಟಸ್ವಾಮಿ ಸರಳ , ಸಜ್ಜನ ವ್ಯಕ್ತಿತ್ವದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಶಾಲೆ ಮುಂಚೂಣಿಗೆ ಬರಲು ಅವರ ಶ್ರಮ ಕಾರಣ. ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಹಂತ ಬಂದಾಗ ಎಚ್.ಎಸ್.ಪುಟ್ಟಸ್ವಾಮಿ ಮಕ್ಕಳನ್ನು ಶಾಲೆಗೆ ಕರೆ ತಂದಿದ್ದರು ಎಂದು ಸ್ಮರಿಸಿದರು.ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರಳ ಗುಣ ಬೆಳೆಸಿಕೊಂಡು ಶಿಕ್ಷಕ ವೃತ್ತಿಗೆ ಗೌರವ ತಂದು ನಿವೃತ್ತರಾದ ಶಿಕ್ಷಕ ಎಚ್.ಎಸ್.ಪುಟ್ಟಸ್ವಾಮಿ ಅವರಿಗೆ ಗ್ರಾಮಸ್ಥರು ಸನ್ಮಾನಿಸಿರುವುದು ಸಕಾಲಿಕವಾಗಿದೆ. ಯಾವುದೇ ವೃತ್ತಿಯಲ್ಲಿದ್ದರೂ ಬದ್ಧತೆಯಿಂದ ಕೆಲಸ ಮಾಡಿದವರನ್ನು ಸಮಾಜ ಗುರುತಿಸ ಬೇಕಾಗಿದೆ. ಇತ್ತೀಚಿಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಹಂತ ಬಂದಿರುವುದು ಕಳವಳಕಾರಿ ವಿಷಯ ಎಂದರು.
ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಪಬ್ಲಿಕ್ ಶಾಲೆ ಮಾಡಿ ಆ ಶಾಲೆಗೆ ಉತ್ತಮ ಆಟದ ಮೈದಾನ, ಮಕ್ಕಳನ್ನು ಕರೆ ತರಲು ವಾಹನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲ ಭೂತ ಸೌಕರ್ಯ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆ ಗಳಿಗೆ ಆಕರ್ಷಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಸೀತೂರು ಗ್ರಾಮದಲ್ಲೇ ಹುಟ್ಟಿ ಬೆಳೆದು ಅದೇ ಗ್ರಾಮ ಪಂಚಾಯಿತಿ 3 ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಚ್.ಎಸ್.ಪುಟ್ಟಸ್ವಾಮಿ ಸನ್ಮಾನಕ್ಕೆ ಅರ್ಹರಾಗಿದ್ದಾರೆ. ಅವರಿಗೆ ಗ್ರಾಮಸ್ಥರು ಸನ್ಮಾನ ಮಾಡಿರುವುದು ಊರಿಗೆ ಹೆಮ್ಮೆ ವಿಚಾರ ಎಂದರು. ಗ್ರಾಪಂ ಸದಸ್ಯರಾದ ಎನ್.ಪಿ.ರಮೇಶ್, ಸಿದ್ದಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಹೊನ್ನೇಕೊಪ್ಪ ಶಾಲೆ ಶಿಕ್ಷಕ ಎಚ್.ಎಸ್.ಪುಟ್ಟಸ್ವಾಮಿ, ಬಿಸಿಯೂಟ ಅಡುಗೆಯವರಾದ ಗಿರಿಜಮ್ಮ ಅವರನ್ನು ಗ್ರಾಮದ ಹಿರಿಯರಾದ ಲೋಕಮ್ಮ ಸನ್ಮಾನಿಸಿದರು.ಸಭೆ ಅಧ್ಯಕ್ಷತೆಯನ್ನು ಹೊನ್ನೇಕೊಪ್ಪ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಅರುಣಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಸದಸ್ಯೆ ಕವಿತ, ಕಾಫಿ ಬೆಳೆಗಾರ ರಾಮಣ್ಣ,ವಿಶ್ವೇಶ್ವರ ಮಹಿಷ ಮರ್ದಿನಿ ದೇವಸ್ಥಾನದ ಸಮಿತಿ ಅಧ್ಯಕ್ಷ ಶೇಷಾಚಲ, ಉಪಾಧ್ಯಕ್ಷ ಅನಂತಪದ್ಮನಾಭ ,ಶಶಿನಾಥ್, ಉಮೇಶ್ , ಸುಷ್ಮ ಇದ್ದರು.