ಸಾರಾಂಶ
ರಾಣಿಬೆನ್ನೂರು: ಜ್ಞಾನ ಬಯಸಿ ಬಂದ ವಿದ್ಯಾರ್ಥಿಗಳಿಗೆ ಆಸರೆ ನೀಡುವ ಗುರುವೃತ್ತಿ ಪವಿತ್ರವಾಗಿದೆ ಎಂದು ಹಲಗೇರಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಸ್. ಮೋಟಗಿ ಹೇಳಿದರು. ತಾಲೂಕಿನ ಹಲಗೇರಿ ಗ್ರಾಮದ ಶ್ರೀ ಹಾಲಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2024- 25ನೇ ಸಾಲಿನ ಕಾಲೇಜು ಸಂಸತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದಿನ ವಿದ್ಯಾರ್ಥಿಗಳು ಅನುಭವಿಸಿದ ಒಂದಂಶದ ಕಷ್ಟವೂ ಕೂಡ ಇಂದಿನ ವಿದ್ಯಾರ್ಥಿಗಳಿಗೆ ಇಲ್ಲ. ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳು ಇಂದು ಸಮಾಜಮುಖಿ ಉದ್ಯೋಗಗಳಲ್ಲಿ ತೊಡಗಬೇಕು. ಮಾನವ ಋಣಗಳಲ್ಲಿ ಒಂದಾದ ಸಮಾಜ ಋಣವನ್ನು ತೀರಿಸಬೇಕು ಎಂದರು. ಪ್ರಾ. ಬಿ.ಎಚ್. ಪಾಟೀಲ ಮಾತನಾಡಿ, ಹಲವಾರು ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿರುವ ಈ ವಿದ್ಯಾವರ್ಧಕ ಸಂಘವು ಈ ಭಾಗದ ಶೈಕ್ಷಣಿಕ ಜ್ಞಾನ ದಾಸೋಹ ಕೇಂದ್ರವಾಗಿದೆ. ಇಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಜ್ಞಾನದ ದಾಸೋಹಿಗಳಾಗಿ ಬಂದ ಈ ಬಾರಿಯ ವಿದ್ಯಾರ್ಥಿಗಳು ಕೂಡ ತಮ್ಮ ಜೀವನದಲ್ಲಿ ಸಫಲತೆಯನ್ನು ಕಾಣಲಿ. ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಕಾಲೇಜಿನ ಫೀ ಇತ್ಯಾದಿ ಖರ್ಚುಗಳನ್ನು ತಾವೇ ಬರಿಸುತ್ತಿರುವ ಕ್ರಿಯಾಶೀಲ ಉಪನ್ಯಾಸಕರುಗಳ ಸದುಪಯೋಗವನ್ನು ಪಡೆಯಬೇಕು ಎಂದರು. ಗ್ರಾಮದ ಉರ್ದು ಪ್ರೌಢಶಾಲೆಯ ಶಿಕ್ಷಕ ಜಗದೀಶ ಮಳಿಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ಮಹತ್ವಾಕಾಂಕ್ಷೆ ಅತಿ ಮುಖ್ಯವಾದದ್ದು. ಅದನ್ನು ಈಡೇರಿಸಿಕೊಳ್ಳುವುದರಲ್ಲಿ ಸತತ ಪ್ರಯತ್ನವಿರಬೇಕು. ಮಹತ್ವಾಕಾಂಕ್ಷೆಗಳನ್ನು ತಲುಪಲು ಆರಂಭಿಕ ಹಂತದಲ್ಲಿ ಸಣ್ಣ ಸಣ್ಣ ಗುರಿಗಳನ್ನು ತಲುಪಬೇಕು ಎಂದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಪಲ್ಲವಿ ಮರೋಳ, ಕೆ.ಬಿ. ಮನೋಜ, ಜಾಹೀದ್‌ಬಾನು ಕಳ್ಳಿಮನಿ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ಹಾಲಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ಯು. ಹಲಗೇರಿ, ಸದಸ್ಯರುಗಳಾದ ಎಸ್.ಎಂ. ಪಾಟೀಲ, ಸಿದ್ಲಿಂಗನಗೌಡ ಪಾಟೀಲ, ಉಪನ್ಯಾಸಕರುಗಳಾದ ಜಿ.ಎಸ್. ಹಲಗೇರಿ, ಗೀತಾ ಆರ್.ಆರ್., ಶಾರದಾ ಪಾಟೀಲ, ಎನ್.ಜಿ. ಚವ್ಹಾಣ, ಎಂ.ಎಫ್. ಮುರನಾಳ, ಎಸ್.ಎಸ್. ಕೋಣನತಲಿ, ಜಿ.ಬಿ. ವಿವೇಕ, ಕವಿರಾಜ ಹಿರೇಮಠ, ಕಿಶೋರ ಶಿವಪೂಜಿಮಠ ಉಪಸ್ಥಿತರಿದ್ದರು.