ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದ ನಡುವೆಯೂ ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳ 12 ಮಂದಿ ಸೇರಿದಂತೆ ಕರ್ನಾಟಕದ 54 ಜನರ ಪ್ರವಾಸಿಗರ ತಂಡ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆಗಿದೆ.

ಹಾವೇರಿ: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದ ನಡುವೆಯೂ ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳ 12 ಮಂದಿ ಸೇರಿದಂತೆ ಕರ್ನಾಟಕದ 54 ಜನರ ಪ್ರವಾಸಿಗರ ತಂಡ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆಗಿದೆ.

ಶಿವಮೊಗ್ಗದ ಶ್ರೀ ಗುರು ಶಾಂತೇಶ್ವರ ಟೂರಿಸ್ಟ್ ಮೂಲಕ ಆ. 23ರಂದು ಶಿವಮೊಗ್ಗದಿಂದ 54 ಜನರ ತಂಡ ನೇಪಾಳ ಪ್ರವಾಸಕ್ಕೆ ತೆರಳಿತ್ತು. ಮೂರು ದಿನಗಳ ಕಾಲ ನೇಪಾಳದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವ ಉದ್ದೇಶದಿಂದ ಪ್ರವಾಸ ಕೈಗೊಂಡಿದ್ದ ತಂಡದಲ್ಲಿ ರಟ್ಟಿಹಳ್ಳಿಯ ವ್ಯಾಪಾರಸ್ಥರು, ಗುತ್ತಿಗೆದಾರರು ಸೇರಿದಂತೆ ಆರು ಕುಟುಂಬಗಳ 12 ಮಂದಿ ಇದ್ದರು.

ತಂಡವು ನೇಪಾಳದ ಪೋಖರಾ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿತ್ತು. ಪ್ರವಾಸಿಗರು ತಂಗಿದ್ದ ಸ್ಥಳದಿಂದ ಸುಮಾರು 20 ಕಿ.ಮೀ. ದೂರದಲ್ಲಿ ಪ್ರವಾಹ ಸಂಭವಿಸಿತ್ತು. ಪ್ರವಾಹದ ಪರಿಸ್ಥಿತಿ ತೀವ್ರವಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದರು.

‘ಇನ್ನೂ ಅರ್ಧ ಗಂಟೆ ಮುಂದೆ ಹೋಗಿದ್ದರೆ ನಾವು ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದೆವು. ದೇವರ ದಯೆಯಿಂದ ಎಲ್ಲರೂ ಸುರಕ್ಷಿತವಾಗಿ ಮರಳಿ ಬಂದಿದ್ದೇವೆ’ ಎಂದು ಪ್ರವಾಸದಲ್ಲಿದ್ದ ಆರ್.ಎನ್. ಗಂಗೋಳ ಮಾಹಿತಿ ನೀಡಿದ್ದಾರೆ.

ಪ್ರವಾಹದ ಹಿನ್ನೆಲೆಯಲ್ಲಿ ಪೋಖರಾದಿಂದ ಸೋನೌಲಿ ಮಾರ್ಗವಾಗಿ ಗೋರಖ್‌ಪುರಕ್ಕೆ ತೆರಳಿ, ಅಲ್ಲಿಂದ ಭಾರತ ಪ್ರವೇಶಿಸಿದ ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿದ್ದಾರೆ. ಇದರಿಂದ ರಟ್ಟಿಹಳ್ಳಿ ಸೇರಿದಂತೆ ಪ್ರವಾಸಿಗರ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.