ಸಾರಾಂಶ
ಮೊಳಕಾಲ್ಮುರು ತಾಲೂಕಿನ ಬಿಜಿಕೆರೆ ಗ್ರಾಮದ ದಲಿತ ಕಾಲೋನಿಯ ಚರಂಡಿ ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ತಂಡ ತಾಲೂಕಿನ ಬಿಜಿ ಕೆರೆ ಗ್ರಾಮದ ದಲಿತ ಕಾಲೋನಿಗೆ ಸೋಮವಾರ ಭೇಟಿ ನೀಡಿ ಚರಂಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದರು.ಗ್ರಾಮದ ಅರ್ಧ ಚರಂಡಿ ನೀರು ಬಂದು ಸೇರುವ ದಲಿತ ಕಾಲೋನಿಯಲ್ಲಿ, ಮುಂದೆ ಸಾಗದೆ ಕೊಚ್ಚೆಯ ಹೊಂಡದಂತಾಗಿ ನಿರ್ಮಾಣವಾಗಿತ್ತು. ಸುತ್ತಲಿನ ನಿವಾಸಿಗಳು ಅದೇ ಕೊಚ್ಚೆಯ ಸನಿಹದಲ್ಲಿಯೇ ಬದುಕನ್ನು ಕಟ್ಟಿಕೊಂಡು ನಿತ್ಯ ಸಂಕಷ್ಟ ಅನುಭವಿಸುವಂತಾಗಿತ್ತು. ಜ್ವರ ಸೇರಿ ಇನ್ನಿತರೆ ಸಮಸ್ಯೆಗಳ ನಡುವೆ ಬಳಲುವಂತಾಗಿತ್ತು. ಈ ಸಮಸ್ಯೆ ಅರಿತು ಆ.11ರಂದು (ಕೊಚ್ಚೆ ಗುಂಡಿಯಂತಾದ ಬಿ.ಜಿ.ಕೆರೆ ಗ್ರಾಮದ ದಲಿತ ಕಾಲೋನಿ) ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ಪರಿಣಾಮವಾಗಿ ಸೋಮವಾರ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮದ ದಲಿತ ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಈ ವೇಳೆ ಸುತ್ತಲಿನ ಪ್ರದೇಶದಲ್ಲಿನ ಕೊಚ್ಚೆಯನ್ನು ಕಂಡು ಗ್ರಾಪಂ ಕಾರ್ಯವೈಖರಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. ಬ್ಲೀಚಿಂಗ್ ಇಲ್ಲಿನ ಸ್ವಚ್ಛತೆಗೆ ಕ್ರಮ ವಹಿಸುವಂತೆ ಸೂಚಿಸಿದರು. ನಂತರ ಗ್ರಾಪಂ ಆಗಮಿಸಿ ಅಲ್ಲಿನ ಪಿಡಿಒ ಮಲ್ಲಿಕಾರ್ಜುನ ಅವರೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಕೂಡಲೆ ರಾಜಕಾಲುವೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿ ಇಲಾಖೆಗೆ ಕಡತ ನೀಡಬೇಕು. ಅನುದಾನಕ್ಕಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸಿ ರಾಜಕಾಲುವೆ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ ಎಂದು ಸಮಾಜ ಕಲ್ಯಾಣಾಧಿಕಾರಿ ದೇವ್ಲಾ ನಾಯ್ಕ ತಿಳಿಸಿದರು.