ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ: ದುಬಾರೆ ಸಾಕಾನೆ ಶಿಬಿರದಲ್ಲಿನ ಶಾಂತ ಸ್ವಭಾವದ ಆನೆ ಮಾರ್ತಾಂಡ, ಕಂಜನ್ ಆನೆ ನಡೆಸಿದ ದಾಳಿಯಲ್ಲಿ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಇದಕ್ಕೆ ಮಾವುತ, ಕಾವಾಡಿಗರು ಸೇರಿದಂತೆ ಅಪಾರ ಆನೆ ಪ್ರೇಮಿಗಳು ಕಣ್ಣೀರ ವಿದಾಯ ಹಾಕಿದ್ದಾರೆ.

ದುಬಾರೆಯಲ್ಲಿ ಸೋಮವಾರ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಕಂಜನ್ ಆನೆ ಏಕಾಏಕಿ ಮಾರ್ತಾಂಡ ಆನೆಯ ಮೇಲೆ ದಾಳಿ ನಡೆಸಿದೆ. ಪರಿಣಾಮ ಮಾರ್ತಾಂಡ ಆನೆಯ ದೇಹದ 7 ಭಾಗಗಳಲ್ಲಿ ಕಂಜನ್ ದಂತದಿಂದ ದಿವಿದಿದೆ ಎನ್ನಲಾಗಿದೆ. ಇದರಿಂದ ಗಂಭೀರ ಸ್ವರೂಪದ ಗಾಯಕ್ಕೆ ಮಾರ್ತಾಂಡ ನರಳಿ ಕೊನೆಗೂ ಪ್ರಾಣಬಿಟ್ಟಿದೆ.

ತಾನು ಪಳಗಿಸಿದ ಆನೆಯ ಕಳೇಬರ ಮುಂದೆ ಮಾವುತ ನವೀನ್, ಕಾವಾಡಿಗ ಗೌಸ್ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಚಿತ್ರಣ ನೋಡಿದವರನ್ನು ಹೃದಯ ಕಲುಕುವಂತೆ ಮಾಡಿತು. ಸೌಮ್ಯ ಸ್ವಭಾವದ ಮಕ್ನಾ ಆನೆ ಮಾರ್ತಾಂಡ ತನ್ನ ಜೀವ ತೊರೆಯುವ ಮೂಲಕ ಇನ್ನು ದುಬಾರೆಯ ಪರಿಸರದಲ್ಲಿ ನೆನಪಾಗಿ ಮಾತ್ರ ಉಳಿಯಿತು. ಮಾರ್ತಾಂಡ ಆನೆಯನ್ನು 2022ರಲ್ಲಿ ಸಲಕೇಶಪುರದಲ್ಲಿ ಸೆರೆ ಹಿಡಿದು ರೇಡಿಯೋ ಕಾಲರ್ ಹಾಕಿ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ಬಿಡಲಾಗಿತ್ತು. ಇದಾದ ಬಳಿಕ 45 ದಿನದಲ್ಲಿ ಮತ್ತೆ ಸಕಲೇಶಪುರ ಭಾಗಕ್ಕೆ ಬಂದು ಸೇರಿಕೊಂಡಿತು. ಬಳಿಕ ಶಾರ್ಪ್ ಶೂಟರ್ ವೆಂಕಟೇಶ್ ಅವರು ಡಾಟ್ ಮಾಡಿ ನಂತರ ಸಾಕಾನೆಗಳ ಸಹಕಾರ ಮೂಲಕ ಸೆರೆ ಹಿಡಿದು ಅದನ್ನು ದುಬಾರೆಯಲ್ಲಿ ಪಳಗಿಸಲಾಗಿತ್ತು. ದುಬಾರೆಯಲ್ಲಿ ಯಾವುದೇ ತೊಂದರೆ ಕೊಡದೆ ಎಲ್ಲರಿಗೂ ಈ ಆನೆ ಅಚ್ಚುಮೆಚ್ಚಾಗಿತ್ತು. 53 ವರ್ಷದ ಮಾರ್ತಾಂಡ 4500 ಕೆ.ಜಿ. ತೂಕವಿತ್ತು. ಕಾರ್ಯಾಚರಣೆಯಲ್ಲಿ ಭಾಗಿ: ಜನರಿಗೆ ಸಿಂಹ ಸ್ವಪ್ನವಾಗಿದ್ದ ಸೋಮವಾರಪೇಟೆ ಸಮೀಪದ ಕಾಜೂರು ಕರ್ಣ ಎಂಬ ಆನೆಯನ್ನು ಸೆರೆ ಹಿಡಿಯುವಲ್ಲಿ ಮಾರ್ತಾಂಡ ಆನೆ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಇದಲ್ಲದೆ ಹೊರ ಜಿಲ್ಲೆಗಳಲ್ಲಿನ ಆನೆ ಸೆರೆ ಕಾರ್ಯಾಚರಣೆಯಲ್ಲೂ ಕೂಡ ಪಾಲ್ಗೊಂಡಿತ್ತು.

ದುಬಾರೆಯಲ್ಲೇ ಮಂಗಳವಾರ ಮಾರ್ತಾಂಡ ಆನೆಯ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.


ಅಕ್ಕಿ ತಿನ್ನುತ್ತಿದ್ದ ಆನೆ! : ಮಾರ್ತಾಂಡ ಆನೆ ಸೆರೆಗೂ ಮುನ್ನ ಸಕಲೇಶಪುರ ಭಾಗದ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಚೀಲಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಆಹಾರವನ್ನು ಹುಡುಕುತ್ತಾ ಮನೆಗಳಿಗೆ ಹಾನಿ ಮಾಡುತ್ತಿತ್ತು. ಇದರಿಂದ ಸೆರೆ ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.ದಸರಾದಲ್ಲಿ ಕಂಜನ್ ಆನೆ ಇಲ್ಲ!: ಐತಿಹಾಸಿಕ ಮೈಸೂರು ದಸರಾ ಜನೋತ್ಸವದಲ್ಲಿ ಮೂರು ಬಾರಿ ಪಾಲ್ಗೊಂಡಿದ್ದ ಕಂಜನ್ ಆನೆ ಇನ್ನು ಮುಂದೆ ದಸರಾ ಮಹೋತ್ಸವಕ್ಕೆ ಈ ಆನೆಯನ್ನು ಬಳಸದಂತೆ ಸೂಚಿಸಿರುವುದಾಗಿಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಹಾಸನ ಜಿಲ್ಲೆ ಯಸಳೂರಿನ ಬಳಿ 2014ರಲ್ಲಿ ಸೆರೆ ಹಿಡಿಯಲಾಗಿದ್ದ 26 ವರ್ಷದ ಕಂಜನ್ 3 ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದ. ಇದೀಗ ಈ ನಿರ್ಧಾರದಿಂದಾಗಿ ಕಂಜನ್ ಆನೆಯ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ.

ದುಬಾರೆಯಲ್ಲಿ ನೀರವ!: ದುಬಾರೆಯಲ್ಲಿ ಸೋಮವಾರ ಸಂಭವಿಸಿದ ದುರ್ಘಟನೆಯಿಂದಾಗಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು‌. ಅಲ್ಲದೆ ಕಂಜನ್ ದಾಳಿಗೆ ಒಳಗಾಗಿದ್ದ ಮಾರ್ತಾಂಡ ಆನೆಗೆ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಇದರಿಂದ ದುಬಾರೆಯನ್ನು ಮಂಗಳವಾರದಿಂದ ಎರಡು ದಿನಗಳ ಕಾಲ ಪ್ರವಾಸಿರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಮಧ್ಯಾಹ್ನ ಮಾರ್ತಾಂಡ ಆನೆ ಮೃತಪಟ್ಟ ಬಳಿಕ ದುಬಾರೆಯಲ್ಲಿ ಮೌನ ಆವರಿಸಿತು. ದ್ವೀಪದಲ್ಲಿ ಎಲ್ಲವೂ ಬಂದ್ ಆಗಿತ್ತು. ಸದಾ ಆನೆಗಳ ಓಡಾಟ, ಪ್ರವಾಗರ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ದುಬಾರೆ ಮಾತ್ರ ಮೌನಕ್ಕೆ ಜಾರಿತ್ತು.*ಕಂಜನ್ ಆನೆ ದಾಳಿಯಿಂದಾಗಿ ಮಾರ್ತಾಂಡ ದೇಹಕ್ಕೆ ಏಳು ಬಾರಿ ದಂತ ಒಳಗೆ ಹೋಗಿದೆ. ಇದರಿಂದ ಆನೆಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದೆ. ಇದರ ಬಗ್ಗೆ ಸಂಪೂರ್ಣ ವರದಿ ಇನ್ನಷ್ಟೇ ಬರಬೇಕಿದೆ. -ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ.*ಸಕಲೇಶಪುರ ಭಾಗದಲ್ಲಿ ಸೆರೆ ಹಿಡಿದಿದ್ದ ಮಾರ್ತಾಂಡ ಆನೆ ಶಾಂತ ಸ್ವಭಾವದಿಂದ ಕೂಡಿತ್ತು. ದುಬಾರೆ ಘಟನೆಯಿಂದ ಮೃತಪಟ್ಟಿರುವುದು ತೀವ್ರ ಬೇಸರ ತರಿಸಿದೆ. -ವಿಕ್ರಂ ಗೌಡ್ರು, ಆನೆ ಪ್ರೇಮಿ