ಬೀದಿಬದಿ ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಾರುಕಟ್ಟೆ!

| Published : Sep 12 2025, 12:06 AM IST

ಸಾರಾಂಶ

ಅನಧಿಕೃತ ಸ್ಥಳ ಹಾಗೂ ಚರಂಡಿ ಮೇಲೆ ಬೀದಿಬದಿ ವ್ಯಾಪಾರಸ್ಥರು ನಿರ್ಮಿಸಿಕೊಂಡಿದ್ದ ಗೂಡಂಗಡಿ ತೆರವುಗೊಳಿಸಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಮುಕ್ತವಾಗಿದೆ. ಅಲ್ಲದೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಿದೆ.

ಪಾಲಾಕ್ಷ ಬಿ ತಿಪ್ಪಳ್ಳಿ

ಯಲಬುರ್ಗಾ:

ಅನಧಿಕೃತ ಸ್ಥಳ ಹಾಗೂ ಚರಂಡಿ ಮೇಲೆ ನಿರ್ಮಿಸಿಕೊಂಡಿದ್ದ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನು ರಸ್ತೆ ಸುರಕ್ಷತಾ ನಿಯಮದಡಿ ತೆರವುಗೊಳಿಸಿ ಬೀದಿಬದಿ ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಪಪಂನಿಂದ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ರಸ್ತೆ ಬದಿ ೨೩ ಅಂಗಡಿಕಾರರಿಗೆ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ನಡೆಸಲು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ವ್ಯಾಪಾರಸ್ಥರಿಗೆ ಪಪಂನಿಂದ ಅನುಕೂಲ ಕಲ್ಪಿಸಲಾಗಿದೆ. ಅಲ್ಲದೆ ಹಳೆಯ ಪ್ರವಾಸಿ ಮಂದಿರ ಜಾಗದಲ್ಲಿ ತರಕಾರಿ ವ್ಯಾಪಾರ ಮಾಡಲು ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಿ ಅಲ್ಲಿ ಕುಡಿವ ನೀರು, ವಿದ್ಯುತ್ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲಾಗಿದೆ.

ಅನಧಿಕೃತ ಸ್ಥಳ ಹಾಗೂ ಚರಂಡಿ ಮೇಲೆ ಬೀದಿಬದಿ ವ್ಯಾಪಾರಸ್ಥರು ನಿರ್ಮಿಸಿಕೊಂಡಿದ್ದ ಗೂಡಂಗಡಿ ತೆರವುಗೊಳಿಸಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಮುಕ್ತವಾಗಿದೆ. ಅಲ್ಲದೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಪಟ್ಟಣದ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ದೃಷ್ಟಿಯಿಂದ ಪಪಂ ಕೈಗೊಂಡ ನಿರ್ಧಾರಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸಿಸಿ ಕ್ಯಾಮೆರಾ ಅಳವಡಿಕೆ:ಪ್ರಯಾಣಿಕರ ಸುರಕ್ಷತೆ, ರಸ್ತೆ ನಿಯಮ ಪಾಲನೆ ಹಾಗೂ ಕಳ್ಳತನ ತಡಗಟ್ಟಲು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇಡೀ ದಿನದ ಚಿತ್ರಣ ಪಪಂ ಮುಖ್ಯಾಧಿಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮೊಬೈಲ್ ಮುಖಾಂತರ ವೀಕ್ಷಣೆ ಮಾಡಬಹುದಾಗಿದೆ.

ವ್ಯಾಪಾರಸ್ಥರಿಗೆ ಮುಕ್ತ ಅವಕಾಶ:

₹೫೦ ಲಕ್ಷ ವೆಚ್ಚದಲ್ಲಿ ಪಟ್ಟಣದ ಇಂದಿರಾ ಕ್ಯಾಂಟೀನ್ ಹಿಂದುಗಡೆ ಹೊಸ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಾರುಕಟ್ಟೆಯಲ್ಲಿ ೧೮ ಕಾಂಪ್ಲೆಕ್ಸ್‌ ನಿರ್ಮಾಣವಾಗಲಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಎಲ್ಲ ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸಲು ಮುಕ್ತ ಅವಕಾಶ ಮಾಡಿಕೊಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ತಿಳಿಸಿದ್ದಾರೆ.ಅನಧಿಕೃತ ಸ್ಥಳ ಹಾಗೂ ಚರಂಡಿ ಮೇಲೆ ನಿರ್ಮಾಣಗೊಂಡ ಅಂಗಡಿಗಳನ್ನು ಶೇ. ೧೦೦ರಷ್ಟು ತೆರವುಗೊಳಿಸಲಾಗಿದೆ. ಇದಕ್ಕೆ ಪಟ್ಟಣದ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ದೃಷ್ಟಿಯಿಂದ ಜನರಿಂದ ಸಹಕಾರ ಸಿಕ್ಕದೆ. ಟಿಪ್ಪು ಸುಲ್ತಾನ್ ವೃತ್ತದಿಂದ ಕನಕದಾಸ ವೃತ್ತದಿಂದ ಮುಧೋಳ ರಸ್ತೆ ವರೆಗೆ. ಚೆನ್ನಮ್ಮ ವೃತ್ತದಿಂದ ಬುದ್ಧ ಬಸವ ಅಂಬೇಡ್ಕರ್ ಭವನದವರೆಗೆ ಚರಂಡಿ ಮೇಲೆ ಅಂಗಡಿ ನಿರ್ಮಾಣ ಮಾಡಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ನಾಗೇಶ, ಪಪಂ ಮುಖ್ಯಾಧಿಕಾರಿ ಯಲಬುರ್ಗಾ