ಸಾರಾಂಶ
ನರಗುಂದ/ಗದಗ: ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಅಲ್ಟೋ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ತಾಲೂಕಿನ ಕೊಣ್ಣೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಸಾರಿಗೆ ಸಂಸ್ಥೆಯ ಬಸ್ ಹಾಗೂ ಅಲ್ಟೋ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ, ಮೃತರ ಶವ ಹೊರ ತೆಗೆಯಲು ಹರಸಾಹಸ ಪಡುವಷ್ಟು ಅಪಘಾತ ಭೀಕರವಾಗಿತ್ತು.ಅಪಘಾತದಲ್ಲಿ ಮೃತಪಟ್ಟವರು ಹಾವೇರಿಯ ನಿವಾಸಿಗಳಾದ ರುದ್ರಪ್ಪ (ಬಾಬಣ್ಣ) ಅಂಗಡಿ (58), ಪತ್ನಿ ರಾಜೇಶ್ವರಿ (50), ಮಗಳು ಐಶ್ವರ್ಯಾ (18), ಮಗ ವಿಜಯಕುಮಾರ್ (14) ಎಂದು ಗುರುತಿಸಲಾಗಿದೆ. ರಾಜೇಶ್ವರಿ ತೀವ್ರ ಗಾಯಗೊಂಡು ಆ್ಯಂಬುಲೆನ್ಸ್ ಮೂಲಕ ನರಗುಂದ ಸರ್ಕಾರಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು, ಉಳಿದವರೆಲ್ಲ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿಯಿಂದ ಹೊರಟಿರುವ ಈ ಕುಟುಂಬ ಅಪಘಾತ ನಡೆದ ಸ್ಥಳದಿಂದ ಕೆಲವೇ ಕಿಮೀ ಅಂತರದಲ್ಲಿದ್ದ (ಕೊಣ್ಣೂರ ಮಾರ್ಗವಾಗಿ 5 ಕಿಮೀ ದೂರದಲ್ಲಿರುವ) ಕಲ್ಲಾಪುರದ ಬಸವಣ್ಣ ದೇವರ ದೇವಸ್ಥಾನಕ್ಕೆ ತಲುಪಬೇಕಿತ್ತು, ಆದರೆ ವಿಧಿಯಾಟವೇ ಬೇರೆಯಾಗಿತ್ತು. ದೇವರ ದರ್ಶನವಾಗುವ ಮೊದಲೇ ಇಡೀ ಕುಟುಂಬವೇ ದೇವರ ಪಾದ ಸೇರಿದ್ದು ವಿಪರ್ಯಾಸವೇ ಸರಿ.ನಿದ್ರೆಯ ಮಂಪರು ಕಾರಣವೇ...?:ಕಾರು ಮಾಲೀಕ ರುದ್ರಪ್ಪ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಬಸ್‌ನ ಎಡಭಾಗಕ್ಕೆ ಡಿಕ್ಕಿ ಪಡಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲವರು ಅತಿಯಾದ ವೇಗ ಕಾರಣ ಎಂದರೆ, ಮತ್ತೆ ಕೆಲವರು ನಿದ್ರೆ ಮಂಪರಿಂದ ಹೀಗಾಗಿರಬಹುದು ಎಂದು ಹೇಳಿದ್ದಾರೆ. ಘಟನೆ ಹೇಗೆಯೇ ಆಗಿರಲಿ ಕುಟುಂಬವೇ ಸರ್ವನಾಶವಾಗಿ ಹೋಗಿದೆ. ಇದು ಸಂಬಂಧಿಗಳಿಗೆ ಬಹುದೊಡ್ಡ ಆಘಾತ ನೀಡಿದೆ. ಬೆಳಗ್ಗೆ ದೇವರಿಗೆ ಹೋಗಿ ಬರುತ್ತೇವೆ ಎಂದು ದೀಪ ಹಚ್ಚಿ ಮನೆಯಿಂದ ಬಂದಿರುವ ಕುಟುಂಬಸ್ಥರ ಮನೆಯಲ್ಲೀಗ ಶಾಶ್ವತವಾಗಿ ದೀಪ ಹಚ್ಚಲು ಯಾರೂ ಇಲ್ಲದಂತಹ ಸ್ಥಿತಿ ವಿಧಿ ನಿರ್ಮಿಸಿದೆ.
ಪ್ರಕರಣ ದಾಖಲು: ಗುಳೇದಗುಡ್ಡ ವಿಭಾಗಕ್ಕೆ ಸೇರಿದ ಬಸ್‌ನ ಚಾಲಕ ಕಂ ನಿರ್ವಾಹಕ ಮಲ್ಲಪ್ಪ ಪೂಜಾರಿ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದಲ್ಲಿ ಸಿಪಿಐ ಮಂಜುನಾಥ ನಡುವಿನಮನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎಸ್‌ಪಿ ಭೇಟಿ: ಅಪಘಾತದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಮಾಹಿತಿ ಪಡೆದರು. ಆನಂತರ ಶವಗಳಿದ್ದ ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.