ದಶಕ ಕಳೆದರೂ ಮುಗಿಯದ ರಂಗಮಂದಿರ!

| Published : May 23 2024, 01:08 AM IST

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರ ನಿರ್ಮಾಣ ಕಳೆದ ಹತ್ತು ವರ್ಷಗಳಿಂದ ಕುಟುಂತ್ತಾ, ತೆವಳುತ್ತಾ ಸಾಗುತ್ತಿದೆ. ಇದು ರಂಗಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೆಷ್ಟು ವರ್ಷಬೇಕು ಎನ್ನುತ್ತಿದ್ದಾರೆ ರಂಗಭೂಮಿ ಕಲಾವಿದರು

ಕುಂಟುತ್ತಾ, ತೇವಳುತ್ತಾ ಸಾಗಿರುವ ಕಾಮಗಾರಿ

ಜಿಲ್ಲಾ ಕೇಂದ್ರವಾಗಿ 25 ವರ್ಷವಾದರೂ ನಿರ್ಮಾಣವಾಗಿಲ್ಲ ರಂಗಮಂದಿರಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಕೇಂದ್ರದಲ್ಲಿ ರಂಗಮಂದಿರ ನಿರ್ಮಾಣ ಕಳೆದ ಹತ್ತು ವರ್ಷಗಳಿಂದ ಕುಟುಂತ್ತಾ, ತೆವಳುತ್ತಾ ಸಾಗುತ್ತಿದೆ. ಇದು ರಂಗಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಪ್ಪಳದಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಸವಿನೆನಪಿಗಾಗಿ ನಿರ್ಮಾಣಗೊಂಡ ಸಾಹಿತ್ಯಭವನವೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಸರೆ. ಅದು, ರಾಜಕೀಯ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೇ ಸೀಮಿತ ಎನ್ನುವಂತೆ ಆಗಿದೆ. ಅಷ್ಟಕ್ಕೂ ಸಾಹಿತ್ಯ ಭವನ ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ, ರಂಗ ಪ್ರಯೋಗಗಳಿಗೆ ಇದು ಸರಿಯಾಗುತ್ತಿಲ್ಲ. ಹೀಗಾಗಿ, ರಂಗಮಂದಿರ ಬೇಕು ಎನ್ನುವ ರಂಗಕರ್ಮಿಗಳ ಕೂಗಿಗೆ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ 2013ರಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. 10 ವರ್ಷವಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

₹10 ಕೋಟಿ ವೆಚ್ಚ:

ಇದುವರೆಗೂ ಸುಮಾರು ₹10 ಕೋಟಿ ವೆಚ್ಚವಾಗಿದ್ದು, ನಿರ್ಮಿತಿ ಕೇಂದ್ರ ಮತ್ತು ಲೋಕೋಪಯಾಗಿ ಇಲಾಖೆ ನಿರ್ಮಾಣದ ಹೊಣೆ ಹೊತ್ತಿವೆ. ನಿರ್ಮಾಣ ನಿಯಮಾನುಸಾರ ನಡೆಯುತ್ತಿಲ್ಲ. ಅಗತ್ಯ ಹಣಕಾಸು ಸಹ ದೊರೆಯತ್ತಿಲ್ಲ. ಪರಿಣಾಮ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ. ಇದು ಕಲಾವಿದರು ಮತ್ತು ರಂಗಕರ್ಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಸುಸಜ್ಜಿತವಾಗಿ ರಂಗಮಂದಿರ ಇಲ್ಲದಂತೆ ಆಗಿದೆ. ಸಾಹಿತಿಗಳು ಸಹ ಈ ಕುರಿತು ಅನೇಕ ಬಾರಿ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ.

ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರು ಅಪಾರ ಸಂಖ್ಯೆಯಲ್ಲಿದ್ದಾರೆ. ವೃತ್ತಿರಂಗಭೂಮಿ ಕಲಾವಿದರು ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರೂ ಇದ್ದಾರೆ. ರಂಗ ಪ್ರಯೋಗಗಳು ಆಗುತ್ತಲೇ ಇರುತ್ತವೆ. ಆದರೆ, ಅವರಿಗೆ ಸುಸಜ್ಜಿತ ಮತ್ತು ಸುಲಭ ದರಕ್ಕೆ ಸಿಗಬಹುದಾದ ರಂಗಮಂದಿರದ ಅಗತ್ಯವಿದೆ. ಹೀಗಾಗಿ ನಿರ್ಮಾಣವಾಗುತ್ತಿರುವ ರಂಗಭೂಮಿ ಬೇಗನೆ ಪೂರ್ಣಗೊಳ್ಳಲಿ ಎಂದು ಆಗ್ರಹಿಸುತ್ತಲೇ ಇದ್ದಾರೆ.

ಇಲ್ಲ ಇಚ್ಛಾಶಕ್ತಿ:

ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ. ರಂಗಭೂಮಿಯ ಕುರಿತು ಯಾವೊಬ್ಬ ರಾಜಕೀಯ ನಾಯಕರು ಸಹ ಈ ಕುರಿತು ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ.

ರಾಜಕೀಯವಾಗಿ ಬೆಂಬಲ ದೊರೆಯದೇ ಇರುವುದರಿಂದ ರಂಗಮಂದಿರ ನಿರ್ಮಾಣ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ.

ಕೆಕೆಆರ್‌ಡಿಬಿಯಲ್ಲಿ ಅನುದಾನ ಬಳಕೆಯಾಗದೆ ಕೊಳೆಯುತ್ತಿದೆ ಎನ್ನಲಾಗುತ್ತದೆ. ಇದಕ್ಕೆ ಅಗತ್ಯ ಅನುದಾನವನ್ನ ಒಮ್ಮೇಲೆ ಕೊಡಿಸುವ ಪ್ರಯತ್ನ ಆಗುತ್ತಲೇ ಇಲ್ಲ.

ರಂಗಮಂದಿರ ಕೇವಲ ಕಲಾವಿದರಿಗಾಗಿ ಮಾತ್ರ ನಿರ್ಮಾಣವಾಗುವುದಿಲ್ಲ, ಇತರೆ ಕಾರ್ಯಕ್ರಮಗಳಿಗೂ ಅನುಕೂಲವಾಗುತ್ತದೆ. ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ವಿಚಾರ ಸಂಕಿರಣ ಸೇರಿದಂತೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಸಹಾಯಕವಾಗುತ್ತದೆ.

ಸಚಿವರೇ ನೋಡಿ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಸ್ಥಳೀಯರೇ ಆಗಿದ್ದಾರೆ. ಆದರೂ ಸಹ ರಂಗಮಂದಿರ ಪೂರ್ಣಗೊಳ್ಳುತ್ತಿಲ್ಲ ಯಾಕೆ ಎನ್ನುವುದೇ ರಂಗ ಪ್ರೇಮಿಗಳ ಪ್ರಶ್ನೆಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರು ರಂಗಮಂದಿರ ನಿರ್ಮಾಣ ಸ್ಥಳಕ್ಕೊಮ್ಮೆ ಭೇಟಿ ನೀಡಬೇಕಾಗಿದೆ ಎನ್ನುವುದು ಕಲಾವಿದರ ಆಗ್ರಹವಾಗಿದೆ.

ರಂಗಮಂದಿರ ಪೂರ್ಣಗೊಳಿಸುವ ದಿಸೆಯಲ್ಲಿ ಕ್ರಮ ವಹಿಸಲಾಗಿದೆ. ನಾಲ್ಕಾರು ತಿಂಗಳಲ್ಲಿಯೇ ಅದನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.