ಏಮ್ಸ್‌ಗಾಗಿ ಅವಿರತ ಹೋರಾಟಕ್ಕೀಗ ಸಾವಿರ ದಿನ

| Published : Feb 04 2025, 12:31 AM IST

ಸಾರಾಂಶ

ರಾಯಚೂರು ಏಮ್ಸ್‌ ಮಂಜೂರಾತಿ ಹೋರಾಟ ಸಮಿತಿ ಕೈಗೊಂಡಿರುವ ಐತಿಹಾಸಿಕ ಅನಿರ್ಧಿಷ್ಟ ಧರಣಿ ಇದೇ ಫೆ.5 ರಂದು 1000 ದಿನ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಜಿಲ್ಲೆಯಾದ್ಯಂತ ಬೃಹತ್‌ ಹೋರಾಟ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಗೆ ಏಮ್ಸ್ ಮಂಜೂರು ಮಾಡಲೇಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಯಚೂರು ಏಮ್ಸ್‌ ಮಂಜೂರಾತಿ ಹೋರಾಟ ಸಮಿತಿ ಕೈಗೊಂಡಿರುವ ಐತಿಹಾಸಿಕ ಅನಿರ್ಧಿಷ್ಟ ಧರಣಿ ಇದೇ ಫೆ.5 ರಂದು 1000 ದಿನ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಜಿಲ್ಲೆಯಾದ್ಯಂತ ಬೃಹತ್‌ ಹೋರಾಟ ಕೈಗೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ತಿಳಿಸಿದರು.ಸ್ಥಳೀಯ ಪತ್ರಿಕಾ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹತ್ವಾಕಾಂಕ್ಷೆ ಜಿಲ್ಲೆಯಾದ, ಐಐಟಿ ತಪ್ಪಿದ ರಾಯಚೂರು ಜಿಲ್ಲೆಗೆ ಏಮ್ಸ್ ಆರೋಗ್ಯ ಸಂಸ್ಥೆ ನೀಡಬೇಕು ಎಂದು ವಿವಿಧ ಹಂತಗಳಲ್ಲಿ ಹೋರಾಟ ಮಾಡಿದ್ದು, ಕಳೆದ 998 ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿ ದ್ದೇವೆ. ನಮ್ಮಹೋರಾಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ 5 ಬಾರಿ ಪತ್ರ ಬರೆದಿದ್ದಾರೆ. ಆದರೆ ಯಾವುದೇ ಸ್ಪಂದನೆ ನೀಡದ ಪ್ರಧಾನಮಂತ್ರಿ, ಗೃಹ ಮಂತ್ರಿ ಈಚೆಗೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ರಾಯಚೂರು ಜಿಲ್ಲೆಗೆ ರಾಷ್ಟ್ರೀಯ ಆರೋಗ್ಯ ಯೋಜನೆ ಯಡಿಯಲ್ಲಿ ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೇರಿಸಿ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಇತ್ತೀಚೆಗೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಮುಖ್ಯಮಂತ್ರಿ ಯವರ ಪತ್ರಕ್ಕೆ ಉತ್ತರಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಸೋಮಣ್ಣ, ಶೋಭಾ ಕರಂದ್ಲಾಜೆ ಹೋರಾಟಗಾರರ ಮನವಿಗೆ ಸ್ದಂದಿಸಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಡಾ.ಶಿವರಾಜ ಪಾಟೀಲ ಜಿಲ್ಲೆಯ ಜನರ ಧ್ವನಿಯಾಗಿ ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.ಈಗಲೂ ಕಾಲ ಮಿಂಚಿಲ್ಲ ಶಾಸಕ ಡಾ.ಶಿವರಾಜ ಪಾಟೀಲ, ವಿಜಯೇಂದ್ರ ನಮ್ಮ ಹೋರಾಟಕ್ಕೆ ಬೆಂಬಲಿಸಿ ಪ್ರಧಾನ ಮೋದಿಯ ಬಳಿ ನಿಯೋಗ ಕರೆದು ಕೊಂಡುಹೀಗಿ ಬದ್ಧತೆ ಪ್ರದರ್ಶಿಸಲಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಏಮ್ಸ್‌ ಹೋರಾಟದ ಸಾವಿರ ದಿನಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಹೋರಾಟ ನಡೆಯಲಿದ್ದು, ರಾಯಚೂರು ನಗರದ ಕರ್ನಾಟಕ ಸಂಘದಿಂದ ನಡೆಯಲಿರುವ ಬೃಹತ್ ಪ್ರತಿಭಟನಾ ಮೆರವಣಿಯಲ್ಲಿ ಕಲ್ಯಾಣ ಕರ್ನಾಟಕದ ಹೋರಾಟಗಾರ ಲಕ್ಷ್ಮಣ ದಸ್ತಿ, ಕಲಬುರಗಿಯ ಶರಣಬಸಪ್ಪ ಅಪ್ಪ ಶಿಕ್ಷಣ ಸಂಸ್ಥೆಯ ಬಸವರಾಜ , ಹೋರಾಟಗಾರ ಆರ್.ಕೆ.ಹುಡಗಿ ಸೇರಿದಂತೆ ಜಿಲ್ಲೆಯ ವಿವಿಧ ಕನ್ನಡ ಪರ , ದಲಿತ,ಪ್ರಗತಿಪರ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕ ಅಶೋಕ ಕುಮಾರ ಜೈನ್, ಜಾನ್ ವೆಸ್ಲಿ ಕಾತರಕಿ,ಮಲ್ಲಣ್ಣ ದಿನ್ನಿ, ವಿನಯ ಕುಮಾರ ಚಿತ್ರಕಾರ, ಎಂ.ಆರ್ ಬೇರಿ ಉಪಸ್ಥಿತರಿದ್ದರು.ಏಮ್ಸ್‌ಗಾಗಿ ನಾಳೆ ಸಿರವಾರ ಬಂದ್

ಸಿರವಾರ: ರಾಯಚೂರು ಜಿಲ್ಲೆಗೆ ಏಮ್ಸ್ ನೀಡುವಂತೆ ಒತ್ತಾಯಿಸಿ ಸಿರವಾರ ಸಮಸ್ತ ಸಾರ್ವಜನಿಕರು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಫೆ.5 ರಂದು ಸಿರವಾರ ಬಂದ್ ಗರ ಕರೆ ನೀಡಲಾಗಿದೆ ಎಂದು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಮುಖಂಡ ಎನ್.ಉದಯಕುಮಾರ ಸಾಹುಕಾರ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರ ದಿನ ಹೋರಾಟಕ್ಕೆ ಯಾವುದೇ ಬೆಲೆ ನೀಡದಿರುವುದು ನಮ್ಮ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದವರು ಕೇಂದ್ರದ ಮಂತ್ರಿಗಳಾದರೂ ಯಾವುದೇ ಪ್ರಯೋಜನವಾಗಿಲ್ಲ, ಉತ್ತರ ಕರ್ನಾಟಕ ಎಂದರೆ ಕೇವಲ ಹುಬ್ಬಳ್ಳಿ- ಧಾರವಾಡ ಮಾತ್ರವಲ್ಲ, ನಾವು ಕೂಡ ಉತ್ತರ ಕರ್ನಾಟಕದ ಜಿಲ್ಲೆಯವರೇ ಎಂದ ಅವರು, ಹೋರಾಟದ ಬೆಂಬಲವಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಫೆ 5 ರಂದು ಸ್ವಯಂ ಪ್ರೇರಿತರಾಗಿ ಎಲ್ಲ ವ್ಯಾಪಾರಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಹಕಾರದೊಂದಿಗೆ ‘ಸಿರವಾರ ಬಂದ್’ಗೆ ಕರೆಕೊಟ್ಟಿದ್ದೇವೆ ಎಂದರು.

ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ತಾಲ್ಲೂಕಿನ ಪ್ರತಿಯೊಬ್ಬರೂ ಬಂದ್‌ನಲ್ಲಿ ಪಾಲ್ಗೊಂಡು ಏಮ್ಸ್ ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಜಿ.ಲೋಕರೆಡ್ಡಿ, ರಮೇಶ ದರ್ಶನಕರ್, ವೈ.ಭೂಪನಗೌಡ, ಗಣೇಕಲ್ ವೀರೇಶ, ಸಂದೀಪ ಪಾಟೀಲ ನಂದರಡ್ಡಿ, ಕಲ್ಲೂರು ಬಸವರಾಜ ನಾಯಕ, ಅನಿತಾ ನವಲಕಲ್, ಅರಳಪ್ಪ ಯದ್ದಲದಿನ್ನಿ, ಎಂ.ಪ್ರಕಾಶಪ್ಪ, ಅಬ್ರಹಾಂ ಹೊನ್ನಟಗಿ, ಜಯಪ್ಪ ಕೆಂಪು, ಡಿ.ಯಮನೂರು, ಎಲ್.ವಿ.ಸುರೇಶ ಜಾಲಾಪೂರ ಕ್ಯಾಂಪ್, ಮೇಶಾಕ್ ದೊಡ್ಮನಿ ಪಾಲ್ಗೊಂಡಿದ್ದರು.

ಸಿರವಾರ ಬಂದ್ ಬೆಂಬಲ:

ರಾಯಚೂರಿನಲ್ಲಿ ಏಮ್ಸ್ ಗಾಗಿ ನಡೆಯುತ್ತಿರುವ ಹೋರಾಟ ಸಾವಿರ ದಿನಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ನಡೆಸುತ್ತಿರುವ ಸಿರವಾರ ಬಂದ್ ಹೋರಾಟಕ್ಕೆ ಕೆ ಎಸ್ ಎನ್ ಸಾಮಾಜಿಕ ಸೇವಾ ಸಮಿತಿಯು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ ಎಂದು ಸಮಿತಿ ತಾಲೂಕಾಧ್ಯಕ್ಷ ಉಮಾಶಂಕರ ಜೇಗರಕಲ್ ತಿಳಿಸಿದ್ದಾರಲ್ಲದೆ, ಈ ಬಂದ್ ಹೋರಾಟದಲ್ಲಿ ಸಮಿತಿ ಪದಾಧಿಕಾರಿಗಳು,ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಬೇಕು ಎಂದು ಕೋರಿದ್ದಾರೆ