ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುತಾಲೂಕಿನ ಬಡಗಲಪುರ ಗ್ರಾಮದ ರೈತನ ಮೇಲೆ ದಾಳಿ ನಡೆಸಿ ಕಾಡಿನತ್ತ ಪರಾರಿಯಾಗಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಒಂದು ವಾರದಿಂದ ಬಡಗಲಪುರ, ಹಾದನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿ ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ ಬಳಿಕ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಶುಕ್ರವಾರ ಕಾಡಾನೆಗಳ ಸಹಾಯದಿಂದ ಕೂಂಬಿಂಗ್ ಆರಂಭಿಸಿತ್ತು. ಈ ವೇಳೆ ಆನೆಗಳನ್ನು ಕಂಡು ಗಾಬರಿಯಿಂದ ಕಾಡಿನತ್ತ ಓಡುತ್ತಿದ್ದ ಹುಲಿ, ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ಮಹದೇವಗೌಡ ಎಂಬವರ ಮೇಲೆ ದಾಳಿ ಮಾಡಿ ಆತನ ಮುಖಭಾಗಕ್ಕೆ ಗಂಭೀರ ಗಾಯ ಮಾಡಿತ್ತು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಜನರು ಹುಲಿಯನ್ನು ಸೆರೆ ಹಿಡಿಯಲೇಬೇಕು ಎಂದು ಪಟ್ಟು ಹಿಡಿದಿದ್ದರು.ನಂತರ ಶನಿವಾರ ಬೆಳಗ್ಗೆ ಮಹೇಂದ್ರ, ಅಭಿಮನ್ಯು, ಭೀಮ, ಭಗೀರಥ ಎಂಬ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಆರಂಭಿಸಿದ ಅರಣ್ಯ ಇಲಾಖೆಯು ಯಡಿಯಾಲ ಸಮೀಪದ ಜಮೀನೊಂದರಲ್ಲಿ ಇರುವ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕ್ಯಾಮರಾ ಟ್ರಾಪ್ ಗಳ ಮೂಲಕ ಖಚಿತ ಮಾಹಿತಿ ಪಡೆದು ಎರಡು ಡ್ರೋನ್ ಗಳ ನೆರವಿನಿಂದ ಹುಲಿ ಇರುವ ಸ್ಥಳ ಪತ್ತೆ ಹಚ್ಚಿ, ಬಳಿಕ ಪಶುವೈದ್ಯ ಡಾ. ವಸೀಂ ಮಿರ್ಜಾ, ಡಾ. ರಮೇಶ್, ಶಾರ್ಪ್ ಶೂಟರ್ ರಂಜನ್ ಸಾಕಾನೆಗಳ ಮೇಲೆ ಹೋಗಿ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.ಕಳೆದ ಕೆಲ ದಿನಗಳಿಂದಲೂ ಹುಲಿ ಸೆರೆಗಾಗಿ ಅರಣ್ಯ ಇಲಾಖೆಯು ವಿವಿಧ ತಂಡಗಳನ್ನು ರಚಿಸಿಕೊಂಡು ಮೂರು ಕಡೆಗಳಲ್ಲಿ ಬೋನನ್ನು ಇಟ್ಟು ಬಲೆ ಬೀಸಿತ್ತು. ಇಷ್ಟಿದ್ದರೂ ಸೆರೆಯಾಗದ ಹುಲಿ ಪತ್ತೆಗಾಗಿ ಚರುಕುಗೊಂಡ ಅರಣ್ಯ ಇಲಾಖೆ ಕ್ಯಾಮರಾ ಟ್ರಾಪ್ ಅಳವಡಿಸಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಹುಲಿ ಇರುವ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯುವಲ್ಲಿ ಇಲಾಖೆ ಯಶಸ್ವಿಯಾಗಿದೆ.ಸದ್ಯ ಇದು ಮೂರು ವರ್ಷ ಪ್ರಾಯದ ಹೆಣ್ಣು ಹುಲಿಯಾಗಿದ್ದು, ಗಾಯಗೊಂಡಿದೆ ಎನ್ನಲಾಗಿದೆ. ಸದ್ಯ ಈ ಹುಲಿ ಸೆರೆಗೆ ಬಂಡೀಪುರ ವ್ಯಾಪ್ತಿಯ ಬಡಗಲಪುರ ಗ್ರಾಮದ ಅಕ್ಕಪಕ್ಕದ ವಲಯಗಳ ಸಿಬ್ಬಂದಿಗಳೂ ಸೇರಿ ಸುಮಾರು 65-70 ಮಂದಿ ಸಿಬ್ಬಂದಿ, ಡ್ರೋನ್ ಕ್ಯಾಮರಾ ತಂಡ ಹಾಗೂ ಪಶು ವೈದ್ಯರು ಜೊತೆಗೆ ಸ್ಥಳೀಯ ಜನರ ಸಹಕಾರದಿಂದ ಸೆರೆ ಹಿಡಿಯಲಾಗಿದ್ದು, ಹುಲಿಯ ಆರೈಕೆಗಾಗಿ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸಿಬ್ಬಂದಿಗಳ ತಂಡವನ್ನು ರಚಿಸಿ ನಿರಂತರವಾಗಿ ಕೂಂಬಿಂಗ್ ನಡೆಸಿದ್ದು, ಮೂರು ಕಡೆ ಬೋನುಗಳನ್ನು ಇರಿಸಲಾಗಿತ್ತು, ಇದರ ಫಲವಾಗಿ ಶನಿವಾರ ಬೆಳಗ್ಗೆ 8 ರ ಸಮಯದಲ್ಲಿ ಬಡಗಲಪುರ ರೈತರ ಜಮೀನಿನ ಬಳಿ ಅಳವಡಿಸಲಾಗಿದ್ದ ಬೋನಿನಲ್ಲಿ ಹುಲಿಯು ಸೆರೆಯಾಯಿತು.ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ರವರ ಮಾರ್ಗದರ್ಶನದಲ್ಲಿ ಇಲಾಖಾ ಪಶುವೈಧ್ಯಾಧಿಕಾರಿ ವಸಿಂ ಮಿರ್ಜಾ ರವರ ನೇತೃತ್ವದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಹುಲಿಯನ್ನು ಸುರಕ್ಷಿತವಾಗಿ ಹಿಡಿಯಲಾಗಿದ್ದು, ಹುಲಿಯು ಹೆಣ್ಣಾಗಿದ್ದು, ಅಂದಾಜು ಮೂರು ವರ್ಷ ವಯಸ್ಸು ಆಗಿರಬಹುದೆಂದು ಅಂದಾಜಿಸಲಾಗಿರುತ್ತೆ ಎಂದು ನುಗು ಅರಣ್ಯ ಇಲಾಖೆ ಅಧಿಕಾರಿ ವಿವೇಕ್ ತಿಳಿಸಿದರು.ಬಡಗಲಪುರ ಗ್ರಾಪಂ ಸದಸ್ಯ ಗಂಗಾಧರ್ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಹುಲಿ ಉಪಟಳ ನೀಡುತ್ತಿತ್ತು. ಆಗಾಗ್ಗೆ ಜಾನುವಾರು ಕೊಂದು ನಾವು ಜಮೀನುಗಳಿಗೆ ಹೋಗಲಾರದಂತಹ ಸ್ಥಿತಿ ನಿರ್ಮಾಣವಾಗುವಂತೆ ಮಾಡಿತ್ತು. ಸದ್ಯ ಅರಣ್ಯ ಇಲಾಖೆ ತುಂಬ ಉತ್ಸುಕತೆಯಿಂದ ಹುಲಿ ಸೆರೆ ಹಿಡಿದಿದ್ದು, ಗ್ರಾಮಸ್ಥರಿಗೆ ಸಮಾಧಾನ ತರಿಸಿದೆ. ಇನ್ನು ಹುಲಿ ದಾಳಿಯಿಂದ ಗಾಯಗೊಳಗಾಗಿರುವ ರೈತ ಮಹದೇವಗೌಡ ಅವರಿಗೂ ಇಲಾಖೆ ಸೂಕ್ತ ಪರಿಹಾರ ನೀಡುವ ಮೂಲಕ ಅವರ ಜೀವನಕ್ಕೆ ಆಧಾರ ಕಲ್ಪಿಸಬೇಕು ಎಂದರು. ಇದೇ ವೇಳೆ ಬಂಡೀಪುರ ಸಿ.ಎಫ್. ಪ್ರಭಾಕರನ್, ಎಸಿಎಫ್ ಕೆ.ವಿ. ಸತೀಶ್, ಆರ್.ಎಫ್.ಒ. ಗಳಾದ ವೈರಮುಡಿ, ರಾಜೇಶ್, ಅಮೃತೇಷ್, ರಾಮಾಂಜನೇಯ, ಅಮೃತಾ, ಮುನಿರಾಜು, ವಿವೇಕ್, ಶಾರ್ಪ್ ಶೂಟರ್ ರಂಜನ್, ಬಿ.ಎಸ್. ಗಂಗಾಧರ್, ಬಿ.ಆರ್. ನಟರಾಜು, ಬಿ.ಕೆ. ಶಿವರಾಜು, ಶಿವರಾಜು, ಲಿಂಗರಾಜು, ಪಿ. ರಾಜೀವ್, ರಾಮಚಂದ್ರ, ಕೂಸೇಗೌಡ, ರಮೇಶ್, ಜಲ ರವಿಗೌಡ, ರಾಮಚಂದ್ರ ಇದ್ದರು.