ಯಲಬುರ್ಗಾದಲ್ಲಿ ಲೀಡ್‌ಗಾಗಿ ಟೈಟ್ ಫೈಟ್

| Published : Apr 27 2024, 01:22 AM IST / Updated: Apr 27 2024, 09:33 AM IST

ಯಲಬುರ್ಗಾದಲ್ಲಿ ಲೀಡ್‌ಗಾಗಿ ಟೈಟ್ ಫೈಟ್
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯಲಬುರ್ಗಾ ಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಲೀಡ್ ಕೊಡಿಸಲು ಬಸವರಾಜ ರಾಯರಡ್ಡಿ ಹಾಗೂ ಹಾಲಪ್ಪ ಆಚಾರ ಇಬ್ಬರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಶತಾಯಗತಾಯ ಶ್ರಮಿಸುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಲೀಡ್‌ಗಾಗಿ ಹಾಲಿ ಶಾಸಕ ಬಸವರಾಜ ರಾಯರಡ್ಡಿ ಮತ್ತು ಮಾಜಿ ಸಚಿವ ಹಾಲಪ್ಪ ಆಚಾರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಇಬ್ಬರೂ ಶಕ್ತಿ ಮೀರಿ ಶ್ರಮಿಸುತ್ತಿರುವುದರಿಂದ ಟೈಟ್ ಫೈಟ್ ಇದೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಹಾಲಪ್ಪ ಆಚಾರ್ ಪರಾಭವಗೊಂಡಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ ಎನ್ನುವುದಕ್ಕಿಂತ ಬಿಜೆಪಿಯಲ್ಲಿಯೇ ಇದ್ದ ಕೆಲವರು ಕೈಕೊಟ್ಟಿದ್ದರಿಂದ ಸೋಲುವಂತಾಯಿತು ಎನ್ನುವುದು ಜಗಜ್ಜಾಹೀರು. ಇದು ಕಾಂಗ್ರೆಸ್ ಗೆಲ್ಲಲು ಕಾರಣವಾಯಿತು ಎಂದು ಸಹ ಹೇಳಲಾಗುತ್ತದೆ. ಏನೇ ಆಗಲಿ, ಸಚಿವರಾಗಿದ್ದಾಗಲೇ ಹಾಲಪ್ಪ ಆಚಾರ ಸೋಲುವಂತಾಯಿತು.

ಕಾಂಗ್ರೆಸ್ಸಿನ ಬಸವರಾಜ ರಾಯರಡ್ಡಿ ಅವರು ಹಿಂದಿನ ಎಲ್ಲ ದೋಷಗಳನ್ನು ತಿದ್ದುಕೊಂಡು, ಕ್ಷೇತ್ರದಲ್ಲಿಯೇ ಬಿಡಾರ ಹೂಡಿ, ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈಗ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಲೀಡ್ ಕೊಡಿಸಲು ಇಬ್ಬರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಶತಾಯಗತಾಯ ಶ್ರಮಿಸುತ್ತಿದ್ದಾರೆ. ಅದರಲ್ಲೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಂತೂ ನೀವು ಲೀಡ್ ಕೊಟ್ಟರೆ ಹೆಚ್ಚು ಅನುದಾನ ತರಲು ಅನುಕೂಲವಾಗುತ್ತದೆ ಎಂದು ಬಹಿರಂಗವಾಗಿಯೇ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪೆಗಾಗಿ ಲೀಡ್ ತಂದುಕೊಡಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಈಗಾಗಲೇ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಸಿರುವ ಅವರು, ಹೇಗಾದರೂ ಮಾಡಿ ಲೀಡ್ ತಂದುಕೊಡಲೇಬೇಕು ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಿಗೆ ವರವಾಗಿದೆ. ಆದರೆ, ವಾಸ್ತವ ಲೆಕ್ಕಾಚಾರ ಏನಾಗಿದೆ ಎನ್ನುವುದನ್ನು ಈಗಲೇ ಹೇಳಲು ಆಗದು. ಸದ್ಯ ಕಾಂಗ್ರೆಸಂತೂ ಈ ಕ್ಷೇತ್ರದಲ್ಲಿ ನಿರಾಳವಾಗಿದ್ದು, 10-15 ಸಾವಿರ ಲೀಡ್ ನಿರೀಕ್ಷೆಯಲ್ಲಿದೆ.

ಆದರೆ, ಇತ್ತ ಬಿಜೆಪಿಯ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ತಂದುಕೊಡಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿರುವ ಮಾಜಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದರಲ್ಲೂ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಲು ಪ್ರಮುಖ ಕಾರಣ ಎನ್ನುವ ಆರೋಪವೂ ಇವರ ಮೇಲೆ ಇದೆ. ಈಗ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿಯನ್ನೇ ತೊರೆದಿದ್ದು, ಕ್ಷೇತ್ರದಲ್ಲಿ ಇದ್ದ ದ್ವಿಶಕ್ತಿ ಇಲ್ಲದಾಗಿರುವುದರಿಂದ ಹಾಲಪ್ಪ ಆಚಾರ ಅವರು ಪ್ರಯತ್ನ ನಡೆಸಿದ್ದಾರೆ. ಲೀಡ್ ಕೊಟ್ಟೇಕೊಡಬೇಕು ಎಂದು ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರಗಳನ್ನು ಮೀರಿ ಮತದಾರರು ಲೆಕ್ಕಾಚಾರ ಹಾಕಿ ಮತ ಹಾಕಲಿದ್ದಾರೆ. ಯಾರ ಕೈ ಮೇಲಾಗಲಿದೆ ಕಾದುನೋಡಬೇಕಿದೆ.ಯಲಬುರ್ಗಾ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ನಾಯಕರು ಯಾರೂ ಪಕ್ಷ ತೊರೆದಿಲ್ಲ ಮತ್ತು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಹೀಗಾಗಿ, ಪಕ್ಷಕ್ಕೆ ಬಹುದೊಡ್ಡ ಮಟ್ಟದ ಲೀಡ್ ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳುತ್ತಾರೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಇದೆ ಹಾಗೂ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ತರಲು ಮತದಾರರೇ ಮುಂದಾಗಿದ್ದಾರೆ. ಹೀಗಾಗಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ಸಮಸ್ಯೆಗಳನ್ನು ಸರಿಪಡಿಸಲಾಗಿದ್ದು, ಬಹುದೊಡ್ಡ ಲೀಡ್ ಬರಲಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳುತ್ತಾರೆ.