A touch of 'Nijadani' at Kadabanakatte for Children's Day

ಬಾಲ್ಯದಲ್ಲಿ ಓದಿದ ಶಾಲೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆದ ಸಚಿವ ರಘುಮೂರ್ತಿ । ಹಳೆಯ ನೆನಪುಗಳ ಪುನರ್ಮನನ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಮಕ್ಕಳ ದಿನಾಚರಣೆ ಎಂದರೆ ನೆಹರು ಅವರ ಬಗ್ಗೆ ನಾಲ್ಕು ಮಾತಾಡಿ, ಮಕ್ಕಳಿಗೆ ಸಿಹಿ ತಿನ್ನಿಸುವ ಪರಿಪಾಟಲು ಎಲ್ಲ ಕಡೆ ಇದೆ. ಆದರೆ ಸಚಿವ ಟಿ. ರಘುಮೂರ್ತಿ ಮಕ್ಕಳ ದಿನಾಚರಣೆಗೆ ಬೇರೆಯದೇ ಸ್ಪರ್ಶ ನೀಡಿದ್ದಾರೆ. ತಾವು ಪ್ರಾಥಮಿಕ ಶಿಕ್ಷಣ ಪಡೆದಿದ್ದ ಹುಟ್ಟೂರು ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದ ಶಾಲೆಗೆ ಭೇಟಿ ನೀಡಿ ಬಾಲ್ಯದ ನೆನಪುಗಳ ಹರವಿದ್ದಾರೆ.

ಬಾಲ್ಯದ ನೆನಪುಗಳು ಎಂದಿಗೂ ನಿತ್ಯನೂತನ, ಹಚ್ಚ ಹಸಿರಾಗಿಯೇ ಹೃದಯದಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಅದರಲ್ಲೂ ಪ್ರಾಥಮಿಕ ಶಾಲೆಯ ತರಗತಿಗಳು ನೆನಪುಗಳ ಮೆರವಣಿಗೆಯನ್ನೇ ನಮ್ಮ ಕಣ್ಣ ಹಾದು ಹೋಗುತ್ತದೆ. ಅದರಲ್ಲೂ ಮಕ್ಕಳ ದಿನಾಚರಣೆಯಂದೇ ಈ ರೀತಿಯ ಭೇಟಿಯಾದರೆ ಅದೊಂದು ದಿವ್ಯಾನುಭವ.ಇಂಥ ವಿಶೇಷ ಅನುಭವವನ್ನು ಮಕ್ಕಳ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಮತ್ತು ಚಳ್ಳಕೆರೆಗೆ ಅಧಿಕೃತ ಕಾರ್ಯದ ನಿಮಿತ್ತ ತೆರಳುತ್ತಿದ್ದ ಸಚಿವರು, ಕಡಬನಕಟ್ಟೆ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಭೇಟಿ ನೀಡಿದಾಗ ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿದ್ದ ಮಕ್ಕಳಿಗೆ ಅಚ್ಚರಿ ಕಾದಿತ್ತು. ನಮ್ಮ ಶಾಲೆಯಲ್ಲಿಯೇ ಓದಿ ಈಗ ಕರ್ನಾಟಕ ಸರ್ಕಾರದ ಸಚಿವರಾಗಿ ಮೊದಲ ಬಾರಿಗೆ ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಚಿವರ ಕಂಡು ಚಿಣ್ಣರು, ಶಾಲಾ ಸಿಬ್ಬಂದಿ ಸಂತಸಪಟ್ಟರು.

ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಕುಶಲೋಪರಿ ನಡೆಸಿದ ಸಚಿವರು, 1967-68ರಲ್ಲಿ ನಾನು ಈ ಶಾಲೆಯಲ್ಲಿ ಒಂದನೇ ತರಗತಿ ಓದಿದೆ. ಏಳನೇ ತರಗತಿಯವರೆಗೂ ನನ್ನ ಶಿಕ್ಷಣ ಇಲ್ಲಿಯೇ ಮುಂದುವರಿದಿತ್ತು. ನಂತರ ಬೇರೆ ಕಡೆ ತೆರಳಿದೆ ಎಂದು ವಿವರಿಸಿದರು. ಚಿಣ್ಣರಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದ ಸಚಿವರು, ಸಿಹಿ ಹಂಚಿದರು.

ಈ ಶಾಲೆಯು ನನಗೆ ಅಕ್ಷರ ಕೃಷಿ ಮಾಡಿಸಿದೆ. ಇಲ್ಲಿ ಕಲಿತ ನಾನು ಮುಂದೆ ಇಂಜಿನಿಯರ್‌ ಆಗುವ ಮಟ್ಟಕ್ಕೆ ತಲುಪಿದೆ. ಈಗ ಸಚಿವನಾಗಿ ನನ್ನ ಶಾಲೆಗೆ ಮೊದಲ ಬಾರಿ ಭೇಟಿ ನೀಡಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು, ಶಾಲೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ವಿವರ ಪಡೆದುಕೊಂಡರು.ನಂತರ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಸುದರ್ಶನ ಹಾಗೂ ಶಿಕ್ಷಕರೊಂದಿಗೆ ಹಾಗೂ ಶಾಲಾ ಸಿಬ್ಬಂದಿಯೊಂದಿಗೂ ಸಮಾಲೋಚನೆ ನಡೆಸಿದರು.

ಶಾಲೆಯ ಸುತ್ತಮುತ್ತಲ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುವುದು. ಶಾಲೆಯ ಸುತ್ತ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಅತ್ಯುತ್ತಮ ರೀತಿಯಲ್ಲಿ ಕಾಣುವಂತೆ ಮಾಡಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

----------------

ಪೋಟೋ ಕ್ಯಾಪ್ಸನ್

ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ತಾವು ಪ್ರಾಥಮಿಕ ಶಿಕ್ಷಣ ಮುಗಿಸಿದ ಕಡಬನಕಟ್ಟೆ ಶಾಲೆಗೆ ಶನಿವಾರ ಭೇಟಿ ನೀಡಿ ಮಕ್ಕಳ ಜೊತೆ ಕೆಲ ಕಾಲ ಹಳೆಯ ನೆನಪು ಮಾಡಿಕೊಂಡರು.

----------ಫೋಟೋ ಪೈಲ್ ನೇಮ್-14 ಸಿಟಿಡಿ1--