ಸಾರಾಂಶ
ಮಹಿಳೆಯರು, ಮಕ್ಕಳ ಅಭಿನಯ ಕೌಶಲ್ಯದಿಂದ ಯಶಸ್ವಿ
ಮದ್ಯ ವ್ಯಸನದ ಕುರಿತಂತೆ ಮೂಡಿಬರುವ ಕಥೆಯ ಮಾದರಿಕನ್ನಡಪ್ರಭ ವಾರ್ತೆ ಯಲ್ಲಾಪುರಸಂಕಲ್ಪ ಉತ್ಸವದಲ್ಲಿ ಮಹಿಳೆಯರು ಮತ್ತು ಮಕ್ಕಳಿಂದ ಅಭಿನಯಿಸಲ್ಪಟ್ಟ ಅವ್ವ ನಾಟಕ ಅಪಾರ ಜನಮೆಚ್ಚುಗೆ ಗಳಿಸಿತು. ಕತೆ, ಕಾದಂಬರಿ, ಟಿವಿಗಳಲ್ಲಿ ಮದ್ಯ ವ್ಯಸನದ ಕುರಿತಂತೆ ಮೂಡಿಬರುವ ಕಥೆಯ ಮಾದರಿಯಲ್ಲಿಯೇ ರಚಿತವಾದ ಚಿಕ್ಕ ನಾಟಕ ಮಹಿಳೆಯರ ಅಭಿನಯ ಕೌಶಲ್ಯದಿಂದ ಯಶಸ್ವಿಯಾಗುವಲ್ಲಿ ಸಫಲವಾಗಿದೆ.
ಕುಡಿತಕ್ಕೆ ಬಲಿಯಾದ ಮನೆಯ ಯಜಮಾನನಿಂದಾಗಿ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದರೂ ಕಷ್ಟ ಸಹಿಷ್ಣು ಗಂಗತ್ತೆ ಕೂಲಿಮಾಡಿ ಮಗ ಕುಮಾರನನ್ನು ಸಾಕಿ ಆತನ ಭವಿಷ್ಯ ರೂಪಿಸುತ್ತಾಳೆ. ಆದರೆ ಕುಮಾರ ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಿ, ಹೆಂಡತಿಯ ಒತ್ತಾಸೆಯಂತೆ ತಾಯಿಯನ್ನು ದೂರಮಾಡುತ್ತಾನೆ. ಘಟವಾಣಿ ಸೊಸೆಯ ಅಸಡ್ಡೆಯ ಮಾತು ಕೇಳಿದ ಗಂಗತ್ತೆ, ಅಸಹಾಯಕ ಮಗನನ್ನು ಕಂಡರೂ ಯಾರನ್ನೂ ದೂಷಿಸದೆ, ತನಗೆ ಊರು ದೂರ ಬೆಟ್ಟ ಹತ್ರ, ಏನಿದ್ದರೂ ಮಕ್ಕಳು ಚೆನ್ನಾಗಿರಬೇಕು ಎಂಬ ಉದಾತ್ತ ಚಿಂತನೆಯೊಂದಿಗೆ ತನ್ನ ಊರಿಗೆ ನಡೆದು ಅಲ್ಲಿಯೇ ಕೊನೆಗಾಲ ಕಳೆಯುತ್ತಾಳೆ.ಆದರೆ ವಿಧಿಯ ವಿಪರ್ಯಾಸವೆಂಬಂತೆ ಕುಮಾರ ಕಿಡ್ನಿ ಸಮಸ್ಯೆಯಿಂದಾಗಿ ಜೀವನ್ಮರಣದ ತೂಗುಯ್ಯಾಲೆಯಲ್ಲಿ ಆಸ್ಪತ್ರೆ ಸೇರುತ್ತಾನೆ. ವಿಷಯ ತಿಳಿದ ಗಂಗತ್ತೆ ಮಗನಿಗೆ ಗೊತ್ತಾಗದಂತೆ ಡಾಕ್ಟರ್ ಸಹಾಯದಿಂದ ತನ್ನ ಕಿಡ್ನಿಯನ್ನು ಆತನಿಗೆ ಕೊಟ್ಟು ಮತ್ತೆ ಮರಳಿ ತನ್ನ ಗೂಡು ಸೇರುತ್ತಾಳೆ. ಗುಣಮುಖನಾದ ಕುಮಾರ ತನ್ನ ಮನೆಗೆ ಬಂದಾಗ, ಹೆಂಡತಿ ಬೇರೊಬ್ಬನ ಸಂಗಡ ರಾಸಲೀಲೆಯಲ್ಲಿ ಮಗ್ನಳಾಗಿರುವುದನ್ನು ನೋಡುತ್ತಾನೆ. ಇದರಿಂದ ಭ್ರಮನಿರಸನಗೊಂಡು ಊರಿಗೆ ಮರಳುವ ನಿಶ್ಚಯ ಮಾಡುತ್ತಾನೆ. ಆದರೆ ಇದಕ್ಕೂ ಮೊದಲು ತನ್ನ ಜೀವ ಉಳಿಸಿದ ಪುಣ್ಯಾತ್ಮರು ಯಾರು ಎಂದು ವೈದ್ಯರಿಂದ ಮಾಹಿತಿ ಪಡೆದು ವಿಚಾರ ಮಾಡುತ್ತಿರುವಾಗ ತನ್ನ ತಾಯಿಯೇ ಆ ದೇವತೆ ಎಂದು ತಿಳಿದು ದಿಗ್ಮೂಢನಾಗುತ್ತಾನೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು! ಗಂಗತ್ತೆ ಮಗನ ತೊಡೆಯ ಮೇಲೆ ಪ್ರಾಣಬಿಡುವದರ ಮೂಲಕ ನಾಟಕ ಮುಕ್ತಾಯಗೊಳ್ಳುತ್ತದೆ.
ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ ಎಂಬ ಸಂದೇಶ ನೀಡಿದ ನಾಟಕದಲ್ಲಿ ತ್ಯಾಗಮಯಿ ಗಂಗತ್ತೆಯ ಪಾತ್ರಕ್ಕೆ ಅಕ್ಷರಶಃ ಜೀವ ತುಂಬಿದ ಸರೊಜಾ ಹೆಗಡೆ ಭಾವಾಭಿನಯ, ಧ್ವನಿಯ ಏರಿಳಿತಗಳೊಂದಿಗೆ ಸೂಕ್ಷ್ಮ ಸಂವೇದನೆಗಳನ್ನು ಪ್ರೇಕ್ಷಕರಿಗೆ ಸಮರ್ಥವಾಗಿ ಮುಟ್ಟಿಸುವದಲ್ಲಿ ಯಶಸ್ವಿಯಾದರು. ಬಾಲ ಕುಮಾರನಾಗಿ ಯಶಸ್ ಭಾಗ್ವತ್, ಕುಮಾರನಾಗಿ ಆಶಾ ಬಗನಗದ್ದೆ, ಗಂಡ ಮತ್ತು ಪ್ರಿಯಕರನಾಗಿ ರಚನಾ ಹೆಗಡೆ ಕೂಡ ಅಷ್ಟೇ ಸಮರ್ಥವಾಗಿ ತಮ್ಮ ಪಾತ್ರದ ಪೋಷಣೆ ಮಾಡಿದರು. ಪರಿಮಳಾ ಪಾತ್ರಧಾರಿ ಸಂಧ್ಯಾ ಹೆಗಡೆ, ಗೆಳತಿಯರಾಗಿ ಮಮತಾ ಭಟ್ಟ ಮತ್ತು ಸುಮಂಗಲಾ ಭಟ್ಟ, ವೈದ್ಯರಾಗಿ ಆಶಾ ಪಟೇಲ್ ಇವರೂ ಕೂಡ ತಮ್ಮ ಪಾತ್ರದ ಕುರಿತು ನೈಜಾಭಿನಯದ ಮೂಲಕ ಜನಮೆಚ್ಚುಗೆ ಗಳಿಸಿದರು. ಬಾಲ ಕಲಾವಿದರಾಗಿ ಅಭಿರಾಮ, ಸಾಕೇತ, ಆರ್ಯನ್, ಪ್ರಣತಿ, ಆದ್ಯಾ, ಸುಮೇಧಾ, ಅಪೇಕ್ಷಾ, ಪ್ರಗತಿ ವೈಷ್ಣವಿ, ಗಗನ್, ಪರಂಗಿ ಉತ್ತಮ ಅಭಿನಯ ನೀಡಿದರು.ಡಿ.ಎನ್. ಗಾಂವ್ಕರ ಬರೆದು ನಿರ್ದೆಶಿಸಿದ ಈ ನಾಟಕಕ್ಕೆ ಪ್ರವೀಣ ಇನಾಮದಾರ ಹಿನ್ನೆಲೆ ಸಂಗೀತ, ಗಂಗಾ ಭಟ್ಟ, ಸಾನ್ವಿ ಇನಾಮದಾರ್ ಹಿನ್ನೆಲೆ ಗಾಯನ ಒದಗಿಸಿದರು. ಸಣ್ಣಪ್ಪ ಭಾಗ್ವತ್, ಗಾಯತ್ರಿ ಬೋಳಗುಡ್ಡೆ ಸಹಕರಿಸಿದರು.
ನೆರೆದಿದ್ದ ಪ್ರೇಕ್ಷಕ ಸಮೂಹ ನಾಟಕದ ಬಗ್ಗೆ ಅಪಾರ ಹರ್ಷ ವ್ಯಕ್ತಪಡಿಸಿದರು.;Resize=(128,128))
;Resize=(128,128))
;Resize=(128,128))