ಮರೆವಿನ ಕಾಯಿಲೆಯ ಜಾಗೃತಿಗಾಗಿ ಚಾರಣ

| Published : Sep 13 2024, 01:32 AM IST

ಸಾರಾಂಶ

ಮರೆವಿನ ಕಾಯಿಲೆಯ ಗಂಭೀರತೆ ಅರಿತು ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯದು

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ನಡಿಗೆ ಆರೋಗ್ಯದೆಡೆಗೆ ಶೀರ್ಷಿಕೆಯಡಿ ಮರೆವಿನ ಕಾಯಿಲೆಯ ಬಗ್ಗೆ ಜಾಗೃತಿಗಾಗಿ ಗುರುವಾರ ಚಾಮುಂಡಿಬೆಟ್ಟಕ್ಕೆ ಚಾರಣ ಏರ್ಪಡಿಸಲಾಗಿತ್ತು.

ಆಜ್ಞೈಮರ್ಸ್‌ ರಿಲೇಟಡ್‌ ಡಿಸ್‌ ಆರ್ಡರ್ಸ್‌ ಸೊಸೈಟಿ ಆಫ್‌ ಇಂಡಿಯಾವು [ಎಆರ್‌ಡಿಎಎಸ್‌ಐ] ಶಾರದಾವಿಲಾಸ ಫಾರ್ಮಸಿ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಈ ಚಾರಣಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಚಾಲನೆ ನೀಡಿ, ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಇದಕ್ಕಾಗಿ ಒಂದಲ್ಲ ಒಂದು ರೀತಿಯ ದೈಹಿಕ ಕಸರತ್ತು ಮಾಡಬೇಕಾಗುತ್ತದೆ. ವಯಸ್ಸಾದ ನಂತರ ಮರೆಗುಳಿತನ ಸಮಸ್ಯೆ ಕಾಡುತ್ತದೆ. ಈ ಬಗ್ಗೆ ಅರಿವು ಮೂಡಿಸುವುದು ಉತ್ತಮವಾದುದು ಎಂದರು.

ಮುಖ್ಯ ಅತಿಥಿಯಾಗಿದ್ದ ಇನ್ನರ್‌ ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಪಲ್ಲವಿ ಅರುಣ್‌ ಮಾತನಾಡಿ, ಮರೆವಿನ ಕಾಯಿಲೆಯ ಗಂಭೀರತೆ ಅರಿತು ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯದು ಎಂದರು.

ಮತ್ತೊರ್ವ ಮುಖ್ಯ ಅತಿಥಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕಿ ಡಾ.ಪಿ. ಸಂಧ್ಯಾ ಮಾತನಾಡಿ, ಯಾವುದೇ ರೋಗವಾದರೂ ಮುನ್ನೆಚ್ಚರಿಕೆ ಮುಖ್ಯವಾಗುತ್ತದೆ. ಮರೆಗುಳಿತನದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿದಲ್ಲಿ ಹೆಚ್ಚಿನ ಅನಾಹುತ ತಡೆಯಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾರದಾವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್‌ ಜೋಶಿ ಮಾತನಾಡಿ,

ಮರೆಗುಳಿ ಕಾಯಿಲೆಯು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಅಸಹಜ ಮೆದುಳಿನ ಅಂಗಾಂಶ ಬದಲಾವಣೆಗಳಿಂದ ಇದು ಉಂಟಾಗುತ್ತದೆ ಎಂದರು.

ಪ್ರತಿ ವರ್ಷ ಸೆಪ್ಟಂಬರ್‌ನಲ್ಲಿ ವಿಶ್ವ ಆಜ್ಢೈಮರ್ಸ್‌ ಮಾಸಿಕ ಆಚರಿಸಲಾಗುತ್ತದೆ. ಅದರಂತೆ ಮೈಸೂರಿನಲ್ಲಿ ಕೂಡ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಎರಡನೇ ಕಾರ್ಯಕ್ರಮವಾಗಿ ಚಾರಣ ಏರ್ಪಡಿಸಲಾಗುತ್ತಿದೆ.

ಎಆರ್‌ಡಿಎಸ್ಐ ಉಫಾಧ್ಯಕ್ಷ ಜಿ.ಎಸ್. ಗಣೇಶ್, ಕಾರ್ಯದರ್ಶಿ ಕೆ.ಆರ್‌. ಗಣೇಶರಾವ್‌ ಮೊದಲಾದವರು ಇದ್ದರು.

ಚಾರಣದಲ್ಲಿ ಶಾರದಾವಿಲಾಸ ಫಾರ್ಮಸಿ ಕಾಲೇಜು, ಎಟಿಎಂಇ ಮತ್ತಿತರ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಚಾಮುಂಡಿಬೆಟ್ಟದಲ್ಲಿ ಮರೆಗುಳಿತನದ ಬಗ್ಗೆ ಅರಿವು ಮೂಡಿಸಲಾಯಿತು. ಅಲ್ಲದೇ ಆಸಕ್ತರಿಗೆ ಆರೋಗ್ಯ, ನೆನಪಿನ ಶಕ್ತಿ ತಪಾಸಣೆ ಕೂಡ ಮಾಡಲಾಯಿತು.