ಕಾಡಾನೆ ದಾಳಿಗೆ ಬುಡಕಟ್ಟು ಜನಾಂಗದ ಯುವಕ ಬಲಿ

| Published : Mar 22 2024, 01:02 AM IST

ಸಾರಾಂಶ

ಕಾಡಾನೆ ದಾಳಿಗೆ ಆದಿವಾಸಿ ಬುಡಕಟ್ಟು ಜನಾಂಗದ ಯುವಕ ಬಲಿಯಾಗಿರುವ ಘಟನೆ ಕತ್ತೆ ಕಾಲು ಪೋಡು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರು ಕಾಡಾನೆ ದಾಳಿಗೆ ಆದಿವಾಸಿ ಬುಡಕಟ್ಟು ಜನಾಂಗದ ಯುವಕ ಬಲಿಯಾಗಿರುವ ಘಟನೆ ಕತ್ತೆ ಕಾಲು ಪೋಡು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಹನೂರು ತಾಲೂಕಿನ ಕತ್ತೆ ಕಾಲು ಪೋಡು ಗ್ರಾಮದ ಆದಿವಾಸಿ ಯುವಕ ಮಾದ (23) ವರ್ಷ ಕಾಡಾನೆ ದಾಳಿಗೆ ಬಲಿಯಾಗಿರುವ ದುರ್ದೈವಿಯಾಗಿದ್ದಾನೆ. ಹಿರಿಯಂಬಲ ಗ್ರಾಮಕ್ಕೆ ಹೋಗಿದ್ದ ಈತ ಮನೆಗೆ ಬೇಕಾಗಿರುವ ಪದಾರ್ಥಗಳನ್ನು ಖರೀದಿಸಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಬಿಳಿಗಿರಂಗನ ಬೆಟ್ಟ ಹುಲಿ ಸಂರಕ್ಷಣಾ ವ್ಯಾಪ್ತಿಯ ಪಂದೇಶ್ ಎಂಬುವರ ಜಮೀನಿನಲ್ಲಿ ನಡೆದುಕೊಂಡು ಬರುವಾಗ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ಅರಣ್ಯಾಧಿಕಾರಿಗಳು ದೌಡು: ಘಟನಾ ಸ್ಥಳಕ್ಕೆ ಬೈಲೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು: ಮೃತ ಯುವಕನ ತಾಯಿ ರಂಗಮ್ಮ ಹನೂರು ಪೊಲೀಸ್ ಠಾಣೆಗೆ ಯುವಕ ಪುತ್ರ ಕಾಡಾನೆ ದಾಳಿಗೆ ಒಳಗಾಗಿ ಮೃತಪಟ್ಟಿರುವುದಾಗಿ ದೂರು ಸಲ್ಲಿಸಿದ್ದಾರೆ ಪ್ರಕರಣ ದಾಖಲಿಸಿಕೊಂಡು ಮೃತನ ಶವ ಪರೀಕ್ಷೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮಾಜಿ ಶಾಸಕ ನರೇಂದ್ರ ಭೇಟಿ: ಮಾಜಿ ಶಾಸಕ ನರೇಂದ್ರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಯುವಕನ ಕುಟುಂಬದವರಿಗೆ ಸಾಂತ್ವನ ತಿಳಿಸಿ ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಚಾಮರಾಜನಗರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಹಾಗೂ ನವೀನ್ ಮಠದ್ ಅವರಿಗೆ ಮತ್ತು ವಲಯ ಅರಣ್ಯ ಅಧಿಕಾರಿಗಳಿಗೆ ಸರ್ಕಾರದಿಂದ ಬರುವ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸರ್ಕಲ್ ಸೋಲಿಗ ಸಂಘದ ಕಾರ್ಯದರ್ಶಿ, ಗಿರೀಶ್ ಕುಮಾರ್ ಉಪಸ್ಥಿತರಿದ್ದರು.

ಕಳೆದ 20 ದಿನಗಳ ಹಿಂದೆ ಕೊಳ್ಳೇಗಾಲ ವಲಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕರಳೆಕಟ್ಟೆ ಗ್ರಾಮದ ಬುಡಕಟ್ಟು ಸೋಲಿಗ ಸಮುದಾಯದ ವ್ಯಕ್ತಿ ಒಬ್ಬ ಸಹ ಆನೆ ದಾಳಿಗೆ ಸಾವನ್ನಪ್ಪಿದ್ದ. ಇದರ ಬೆನ್ನಲ್ಲೇ ಮತ್ತೊಂದು ಕತ್ತೆ ಕಾಲು ಪೊಡು ಗ್ರಾಮದಲ್ಲಿ ಮತ್ತೊಬ್ಬ ಯುವಕ ಮಾದ ಕಾಡನೆ ದಾಳಿಗೆ ಬಲಿಯಾಗಿದ್ದಾನೆ. ಅರಣ್ಯಾಧಿಕಾರಿಗಳು ಆನೆಗಳು, ರೈತರ ಜಮೀನಿಗೆ ಬರುವ ಮಾರ್ಗಗಳಲ್ಲಿ ಆನೆಗೆ ಕಂದಕ ರೈಲ್ವೆ ಕಂಬಿ ಅಳವಡಿಸಿ ಕ್ರಮವಹಿಸಬೇಕಾಗಿದೆ ಇಂತಹ ಘಟನೆಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಕಮ ಕೈಗೊಳ್ಳಬೇಕು. ಮುತ್ತಯ್ಯ, ಕಾರ್ಯದರ್ಶಿ, ರಾಜ್ಯ ಮೂಲ ನಿವಾಸಿ ಬುಡಕಟ್ಟು ಜನರ ವೇದಿಕೆ

ಕಾಡಾನೆ ದಾಳಿಯಿಂದ ಯುವಕ ಮೃತಪಟ್ಟಿರುವ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿದ್ದೇನೆ. ಸರ್ಕಾರದಿಂದ ಕೂಡಲೇ ಮೃತ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಈ ಬಗ್ಗೆ ಸೂಕ್ತ ಪರಿಹಾರ ನೀಡಲು ಕ್ರಮವಹಿಸಲಾಗಿದೆ.ಎಂ.ಆರ್. ಮಂಜುನಾಥ್, ಶಾಸಕ, ಹನೂರು