ಪುಟ್ಟರಾಜ ಗವಾಯಿಗಳು ಭಿಕ್ಷೆ ಬೇಡುತ್ತಿದ್ದ ಅನೇಕರಿಗೆ ತಂಬೂರಿ ನೀಡಿ ಸಂಗೀತ ಸಾಧಕರನ್ನಾಗಿ ರೂಪಿಸಿದರು. ಅವರು ವಾರ್ಧಕ್ಯ ಷಟ್ಪದಿಯಲ್ಲಿ ರಚಿಸಿದ ಕೃತಿಗಳು ಹಾಗೂ 12 ವರ್ಷಗಳ ಕಾಲ ಹಿಂದಿ ಮತ್ತು ಇತರೆ ಭಾಷೆಗಳಲ್ಲಿ ರಚಿಸಿದ ಬಸವ ಪುರಾಣ ಇಡೀ ದೇಶಕ್ಕೆ ಅಮೂಲ್ಯ ಕೊಡುಗೆಯಾಗಿದೆ.
ಗದಗ: ಪಂ. ಪುಟ್ಟರಾಜ ಕವಿ ಗವಾಯಿಗಳು ಅಂಧ-ಅನಾಥರಿಗೆ ಆಶ್ರಯದಾತರಾಗಿ, ಸಾಹಿತ್ಯ, ಸಂಗೀತ ಹಾಗೂ ಪುರಾಣ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಯುಗಪುರುಷ ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2816 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪುಟ್ಟರಾಜ ಗವಾಯಿಗಳು ಭಿಕ್ಷೆ ಬೇಡುತ್ತಿದ್ದ ಅನೇಕರಿಗೆ ತಂಬೂರಿ ನೀಡಿ ಸಂಗೀತ ಸಾಧಕರನ್ನಾಗಿ ರೂಪಿಸಿದರು. ಅವರು ವಾರ್ಧಕ್ಯ ಷಟ್ಪದಿಯಲ್ಲಿ ರಚಿಸಿದ ಕೃತಿಗಳು ಹಾಗೂ 12 ವರ್ಷಗಳ ಕಾಲ ಹಿಂದಿ ಮತ್ತು ಇತರೆ ಭಾಷೆಗಳಲ್ಲಿ ರಚಿಸಿದ ಬಸವ ಪುರಾಣ ಇಡೀ ದೇಶಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದರು. ಪಂಡಿತ ಕಾಶೀನಾಥ ಶಾಸ್ತ್ರಿಗಳು ಅಡನೂರು ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳು ನಾಡು ಕಂಡ ನಡೆದಾಡುವ ದೇವರು. ಸಂಗೀತ, ನಾಟಕ, ಸಾಹಿತ್ಯ ಕ್ಷೇತ್ರದ ಸಾವಿರಾರು ಪ್ರತಿಭೆಗಳಿಗೆ ಶಕ್ತಿಯಾಗಿ ಬೆಳೆಸಿದ ಮಹಾತ್ಮರು ಎಂದು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವೀರೇಶ್ವರ ಪುಣ್ಯಾಶ್ರಮದ ಪಂಚಾಕ್ಷರಿ ಗವಾಯಿಗಳು ಅಣ್ಣಿಗೇರಿ ಅವರಿಗೆ ಶ್ರೀಗಳು ಗೌರವ ಸನ್ಮಾನ ನೆರವೇರಿಸಿದರು.ಆರಂಭದಲ್ಲಿ ಡಾ. ಅದ್ವೈತ ಶಿವಪುರ ಅವರಿಂದ ಕೊಳಲು ವಾದನ, ವೀರೇಶ ಕಿತ್ತೂರ ಅವರಿಂದ ಸ್ವರ ನಮನ ಹಾಗೂ ಡಾ. ನಾರಾಯಣ ಹಿರೇಕೊಳಚಿ (ವಾಯೊಲಿನ್) ಮತ್ತು ಡಾ. ಹನುಮಂತ ಪಡಗಾನೂರ (ತಬಲಾ) ಅವರ ಜುಗಲ್ ಬಂದಿ ಸಂಗೀತ ಪ್ರೇಕ್ಷಕರನ್ನು ಗಮನ ಸೆಳೆಯಿತು.
ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಮಹೇಶ ಪುರಾಣಿಕಮಠ ಧರ್ಮಗ್ರಂಥ ಪಠಣ ಹಾಗೂ ಮಹಾಂತೇಶ ಪುರಾಣಿಕಮಠ ವಚನ ಚಿಂತನ ನಡೆಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರೂಪಿಸಿದರು. ದಾಸೋಹ ಸೇವೆಯನ್ನು ಬನ್ನಿಕೊಪ್ಪದ ಬಸವಣ್ಣೆವ್ವ ಶಿವಪ್ಪ ನಡಮನಿ ಹಾಗೂ ದಯಾನಂದ ಬಿರಾದಾರ (ಸಿಂದಗಿ) ವಹಿಸಿದ್ದರು. ವೇದಿಕೆಯಲ್ಲಿ ಶಿವಪ್ಪ ಯರಾಸಿ, ಪ್ರಭು ಗಂಜಾಳ, ಆದೇಶ ಅಂಗಡಿ, ಸೋಮು ಪುರಾಣಿಕ, ಎಸ್.ಐ. ಪಟ್ಟೇದ, ಸುನಂದ ಪಿಳ್ಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊನೆಯಲ್ಲಿ ವಚನಮಂಗಳ ಜರುಗಿತು.