ಕಲಾವಿದರಿಗೆ ಮುಡಿಪು: ಉಡುಪಿ ‘ಯಕ್ಷಗಾನ ಕಲಾರಂಗ’ಕ್ಕೆ ಸಾರ್ಥಕ ಸುವರ್ಣ ಸಂಭ್ರಮ

| Published : Oct 07 2025, 01:03 AM IST

ಕಲಾವಿದರಿಗೆ ಮುಡಿಪು: ಉಡುಪಿ ‘ಯಕ್ಷಗಾನ ಕಲಾರಂಗ’ಕ್ಕೆ ಸಾರ್ಥಕ ಸುವರ್ಣ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತೀ ವರ್ಷ ಮೇ ತಿಂಗಳ ಸಂಕ್ರಮಣದ ೧೦ ದಿನದ ಬಳಿಕ ಪತ್ತನಾಜೆ. ಯಕ್ಷಗಾನದ ತೆಂಕು ಮತ್ತು ಬಡಗು ಮೇಳಗಳು ಗೆಜ್ಜೆ ಬಿಡಿಸಿ ಒಳ ಸರಿಯುವ ದಿನ. ೧೯೭೫ನೇ ಇಸವಿಯ ಪತ್ತನಾಜೆಯ ದಿನ, ಮೇ ೨೪ರಂದು ಎರಡೂ ತಿಟ್ಟುಗಳ ಸಂಗಮ ಕ್ಷೇತ್ರವಾದ ಉಡುಪಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು ದೀಪ ಬೆಳಗಿಸಿ ಯಕ್ಷಗಾನ ಕಲಾರಂಗವನ್ನು ಉದ್ಘಾಟಿಸಿದರು.

ಯಾವುದೇ ಸಂಪನ್ಮೂಲ ಇಲ್ಲದ ಸಂಸ್ಥೆಯಿಂದ ವಾರ್ಷಿಕ 5 ಕೋಟಿ ರು. ವ್ಯವಹಾರ । ಕಲಾವಿದರಿಗೆ ನಾನಾ ರೂಪದ ನಿರಂತರ ನೆರವುಕಳೆದ ಶತಮಾನದ ೭೦ರ ದಶಕದಲ್ಲಿ ಅನ್ಯ ಕಲಾಪ್ರಕಾರದ ಪ್ರಭಾವದಿಂದ ತನ್ನ ಪಾರಂಪರಿಕ ಸೊಗಸಿನಿಂದ ಯಕ್ಷಗಾನ ದೂರವಾಗುತ್ತಿರುವುದನ್ನು ಮನಗಂಡು ಕಲಾ ರಸಿಕರಿಗೆ ರುಚಿ ಶುದ್ಧಿಯ ಯಕ್ಷಗಾನವನ್ನು ತೋರಿಸುವ ಉದ್ದೇಶದೊಂದಿಗೆ, ಸಮಾನ ಮನಸ್ಕರಿಂದ ೧೯೭೫ರಲ್ಲಿ ಉಡುಪಿಯಲ್ಲಿ ಪ್ರಾರಂಭವಾದ ಸಂಸ್ಥೆ ಯಕ್ಷಗಾನ ಕಲಾರಂಗ.

ಯಾವುದೇ ಸಂಪನ್ಮೂಲವಿಲ್ಲದ ಸಂಸ್ಥೆ ಸಹೃದಯ ದಾನಿಗಳ ಕೊಡುಗೆಯ ಮೂಲಕ ವಾರ್ಷಿಕ ೫ ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸುತ್ತಿರುವುದು ಸೇವಾ ಸಂಸ್ಥೆಗಳಿಗೊಂದು ಮಾದರಿ. ಇಂತಹ ಮಹಾನ್ ಸಾಧಕ ಸಂಸ್ಥೆಗೆ ಇದೀಗ ಸ್ವರ್ಣ ಸಂಭ್ರಮ.ರಂಗಸ್ಥಳದಲ್ಲಿ ರಾಜಾಧಿರಾಜ, ಸ್ವರ್ಗಾಧಿಪತಿ, ದೇವದೇವೋತ್ತಮ, ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾಗಿ ವೈಭವೀಕರಿಸಲ್ಪಡುವ ಕಲಾವಿದರು ವೈಯಕ್ತಿಕ ಜೀವನದಲ್ಲಿ ಅನುಭವಿಸುತ್ತಿರುವ ಹಲವಾರು ಕಷ್ಟಗಳಿಗೆ ಸ್ಪಂದಿಸುವುದಕ್ಕಾಗಿ ‘ಕಲೆ ಕಲಾವಿದರಿಗಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ, ಯಕ್ಷಗಾನ ಕಲಾರಂಗ ತನ್ನ ಚಟುವಟಿಕೆ ಪ್ರಾರಂಭಿಸಿತು.ಪ್ರತೀ ವರ್ಷ ಮೇ ತಿಂಗಳ ಸಂಕ್ರಮಣದ ೧೦ ದಿನದ ಬಳಿಕ ಪತ್ತನಾಜೆ. ಯಕ್ಷಗಾನದ ತೆಂಕು ಮತ್ತು ಬಡಗು ಮೇಳಗಳು ಗೆಜ್ಜೆ ಬಿಡಿಸಿ ಒಳ ಸರಿಯುವ ದಿನ. ೧೯೭೫ನೇ ಇಸವಿಯ ಪತ್ತನಾಜೆಯ ದಿನ, ಮೇ ೨೪ರಂದು ಎರಡೂ ತಿಟ್ಟುಗಳ ಸಂಗಮ ಕ್ಷೇತ್ರವಾದ ಉಡುಪಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು ದೀಪ ಬೆಳಗಿಸಿ ಯಕ್ಷಗಾನ ಕಲಾರಂಗವನ್ನು ಉದ್ಘಾಟಿಸಿದರು.೫೦ ವರ್ಷಗಳ ಹಿಂದೆ ಈ ಸಂಘಟನೆಗೆ ಮೂರ್ತಸ್ವರೂಪ ನೀಡಿದವರು ಡಾ.ಬಿ ಬಿ. ಶೆಟ್ಟಿಯವರೆಂದೇ ಖ್ಯಾತರಾದ ಡಾ.ಬ್ರಹ್ಮಾವರ ಬಾಲಕೃಷ್ಣ ಶೆಟ್ಟರು. ಪ್ರೋತ್ಸಾಹಿಸಿದವರು ಕಲಾಸಕ್ತರಾದ ಪ್ರೋ.ಜಿ.ಆರ್. ರೈ, ನಿರ್ಮಲಾ ಲಂಚ್ ಹೋಮ್‌ನ ಸುಂದರ ಶೆಟ್ಟಿ, ವಿಶ್ವಜ್ಞ ಶೆಟ್ಟಿ, ಅಮ್ಮುಂಜೆ ನಾಗೇಶ ನಾಯಕ, ಪ್ರೋ.ಬಿ. ವಿ. ಆಚಾರ್ಯ, ಆನಂದ ಗಾಣಿಗ, ಎಂ.ಎಸ್. ಕೃಷ್ಣನ್, ಐ. ನಾರಾಯಣ ಮತ್ತು ಕೆ. ಬಾಲಕೃಷ್ಣ ರಾಯರು. ಅನಂತರದ ಕಾಲಘಟ್ಟದಲ್ಲಿ ಆಧರಿಸಿದಂವರು ಅಸಂಖ್ಯಾತ ಅಭಿಮಾನಿಗಳು. ಆರಂಭ ಕಾಲದಲ್ಲಿ ವಿಶ್ವಜ್ಞ ಶೆಟ್ಟರು ಮತ್ತು ಎಸ್.ವಿ.ಭಟ್ಟರು, ನೂರು ರೂಪಾಯಿ ಸದಸ್ಯತ್ವ ಶುಲ್ಕವನ್ನು ತಿಂಗಳಿಗೆ ಹತ್ತು ರುಪಾಯಿಯಂತೆ ಸಂಗ್ರಹಿಸಿ ಸದಸ್ಯ ಸಂಖ್ಯೆಯನ್ನು ವೃದ್ದಿಸಿದರು.ಈ ಐವತ್ತು ವರ್ಷಗಳಲ್ಲಿ ಕಲಾರಂಗ ಏರಿದ ಸಾಧನಾ ಶಿಖರ, ವಿಸ್ತರಿಸಿದ ಸೇವಾ ವ್ಯಾಪ್ತಿ, ವ್ಯಾಪಿಸಿದ ಕ್ಷೇತ್ರ, ಕಲಾವಿದರಿಗೆ ಚಾಚಿದ ಸಹಾಯಹಸ್ತ ಎಲ್ಲವೂ ಹುಬ್ಬೇರಿಸುವಂತಹದು.

೧೯೮೫ರಲ್ಲಿ ನೊಂದಾಯಿಸಲ್ಪಟ್ಟ ಈ ಸಂಸ್ಥೆಯಲ್ಲಿ ಆಜೀವ, ಪೋಷಕ ಮತ್ತು ಮಹಾ ಪೋಷಕರು ಸೇರಿದಂತೆ ಸುಮಾರು ೧೨೬೫ ಸದಸ್ಯರಿದ್ದಾರೆ. ಒಂದೂವರೆ ದಶಕಗಳ ಕಾಲ ಡಾ.ಬಿ.ಬಿ. ಶೆಟ್ಟರ ಲಲಿತಾ ಕ್ಲಿನಿಕ್, ಸುಂದರ ಶೆಟ್ಟರ ನಿರ್ಮಲಾ ಲಂಚ್ ಹೋಮ್ ಮತ್ತು ನಿಟ್ಟೂರು ಹೈಸ್ಕೂಲ್‌ಗಳಲ್ಲಿ ಕಲಾರಂಗದ ಕಚೇರಿ ಕಾರ್ಯಾಚರಿಸುತ್ತಿತ್ತು. ೨೦೦೦ನೇ ಇಸವಿಯಿಂದ ೨೦೨೪ರ ಏಪ್ರಿಲ್ ತಿಂಗಳವರೆಗೆ ಪೇಜಾವರ ಮಠದ ಕಟ್ಟಡದಲ್ಲಿದ್ದ ಕಚೇರಿ ಇದೀಗ ಇನ್‌ಫೋಸಿಸ್ ಫೌಂಡೇಶನ್ ದಾನವಾಗಿತ್ತ, ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.

ಡಾ. ಬಿ. ಬಿ. ಶೆಟ್ಟಿ, ಪ್ರೊ.ಬಿ. ವಿ ಆಚಾರ್ಯ, ಜಗಜ್ಜೀವನ್‌ದಾಸ ಶೆಟ್ಟಿ, ಶಿವರಾಮ ಶೆಟ್ಟಿ, ಗಣೇಶ್ ರಾವ್, ಮತ್ತು ಪ್ರಸ್ತುತ ಗಂಗಾಧರ ರಾಯರು ಕಲಾರಂಗವನ್ನು ಅಧ್ಯಕ್ಷರಾಗಿ ಮುನ್ನಡೆಸಿದ್ದಾರೆ. ಯಕ್ಷನಿಧಿ, ವಿದ್ಯಾಪೋಷಕ್ ಮತ್ತು ಯಕ್ಷಶಿಕ್ಷಣ ಎಂಬ ಪ್ರಮುಖ ಮೂರು ಅಂಗಸಂಸ್ಥೆಗಳ ಮೂಲಕ ಕಲಾರಂಗ ಕಾರ್ಯ ನಿರ್ವಹಿಸುತ್ತಿದೆ.೧. ಯಕ್ಷನಿಧಿ: ಸಂಸ್ಥೆಯ ಬೆಳ್ಳಿ ಹಬ್ಬದ ಸಂದರ್ಭ ಆರಂಭಗೊಂಡಿತು. ಹಿರಿಯ ಕಲಾವಿದರಿಬ್ಬರು ನಾಲ್ಕು ದಶಕಗಳ ಕಾಲ ಯಕ್ಷಸೇವೆಗೈದು ಬರಿಗೈಯಲ್ಲಿ ಹೊರಬಂದ ಕಾಲಘಟ್ಟದಲ್ಲಿ ಅವರಿಗೆ ಸಹಾಯ ಮಾಡುವುದಕ್ಕಾಗಿ ಯಕ್ಷನಿಧಿ ಎಂಬ ಸಹ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಇದೀಗ ಸುಮಾರು ೪೦ ವೃತ್ತಿ ಮೇಳಗಳ ೧೨೦೦ ಕಲಾವಿದರು ಇದರ ಸದಸ್ಯರು.ಒಂದು ಲಕ್ಷದ ಜೀವನ್ ಆನಂದ, ಗುಂಪು ವಿಮೆ, ಶೇ.50 ರಿಯಾಯಿತಿಯ ಬಸ್ ಪಾಸ್, ವಿದ್ಯಾಭ್ಯಾಸಕ್ಕೆ ನೆರವು, ಗೃಹ ನಿರ್ಮಾಣಕ್ಕೆ ಸಹಾಯ ಧನ, ನಿಧನ ಹೊಂದಿದಾಗ ಆರ್ಥಿಕ ನೆರವು, ಮೇ ೩೧ರಂದು ಕಲಾವಿದರ ಸಮಾವೇಶ, ವೈದ್ಯಕೀಯ ಸಹಾಯ, ಕಲಾವಿದರಿಗೆ ಮನೆ ನಿರ್ಮಾಣ ಮೊದಲಾದ ಕಲಾವಿದ ಸ್ನೇಹಿ ಕಾರ್ಯಗಳಿಂದ ಕಲಾರಂಗ ಕಲಾವಿದರ ಪ್ರೀತಿಗೆ ಪಾತ್ರವಾಗಿದೆ. ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಆಯ್ದ ೨೫ ಕಲಾವಿದರನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು, ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆ ದಿವ್ಯೋಪಸ್ಥಿತಿಯಲ್ಲಿ ರು.೫೦೦೦ ನಗದು ಪುರಸ್ಕಾರದೊಂದಿಗೆ ಕಲಾರಂಗ ಗೌರವಿಸಿದೆ. ಪ್ರತಿ ವರ್ಷ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತೆಂಕು ಮತ್ತು ಬಡಗಿನ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಲಾಗುತ್ತಿದೆ.೨. ವಿದ್ಯಾಪೋಷಕ್: ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ, ೨೦ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಅಂಗಸಂಸ್ಥೆ ವಿದ್ಯಾಪೋಷಕ್. ಈ ೨೦ ವರ್ಷಗಳಲ್ಲಿ ೮೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ೧೦ ಕೋಟಿಗೂ ಅಧಿಕ ಮೊತ್ತದ ನೆರವನ್ನು ನೀಡಲಾಗಿದೆ. ಈ ವರ್ಷ ೧೧೮೨ ವಿದ್ಯಾರ್ಥಿಗಳಿಗೆ ೧,೧೫,೫೦,೦೦೦ ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೋಲಾರ್ ದೀಪ, ಲ್ಯಾಪ್‌ಟಾಪ್, ಅಡುಗೆ ಅನಿಲ ವಿತರಿಸಲಾಗುತ್ತಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ೫ ದಿನದ ಸನಿವಾಸ ಶಿಬಿರ ನಡೆಸಲಾಗುತ್ತದೆ.ವಿದ್ಯಾಪೋಷಕ್ ನೆರವಿಗಾಗಿ ಪ್ರತಿ ವರ್ಷ ೧೦೦೦ಕ್ಕೂ ಹೆಚ್ಚು ಅರ್ಜಿಗಳು ಬರುತ್ತವೆ. ಅದರ ಮಂಜೂರಾತಿಗಾಗಿ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಅರ್ಜಿದಾರರ ಮನೆಗೆ ಭೇಟಿ ನೀಡಿ ವರದಿ ನೀಡುತ್ತಾರೆ. ಈ ಸಂದರ್ಭ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿ ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತದೆ. ಸುಮಾರು ೧೫ ವರ್ಷಗಳಿಂದ ವಿದ್ಯಾಪೋಷಕ್‌ನಲ್ಲಿ ಆರ್ಥಿಕ ನೆರವು ಪಡೆದ ವಿದ್ಯಾರ್ಥಿಗಳು ಇಂದು ಉಚ್ಛ ಸ್ತರದಲ್ಲಿದ್ದಾರೆ. ಬ್ರಹ್ಮಾವರದ ಪ್ರಣವ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಆಗಿರುವ ಡಾ.ರಂಜಿತ್ ಕುಮಾರ್, ಈ ಬಾರಿಯ ವಿದ್ಯಾಪೋಷಕ್ ವಿನಮ್ರ ಸಹಾಯ ನಿಧಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ತಾನು ವೈದ್ಯನಾಗುವುದಕ್ಕೆ ವಿದ್ಯಾಪೋಷಕ್‌ನ ನೆರವು ಸಹಾಯವಾಯಿತು ಎಂದು ತಮ್ಮ ಮನದಾಳ ಬಿಚ್ಚಿಟ್ಟರು. ಮಾತ್ರವಲ್ಲದೆ ಓರ್ವ ಡಾಕ್ಟರ್ ಕಲಿಯುವ ವಿದ್ಯಾರ್ಥಿಗೆ ಸಹಾಯ ಮಾಡುವ ಆಶ್ವಾಸನೆ ನೀಡಿದರು.

ಫಲಾನುಭವಿಗಳಿಂದಲೇ ಬಂದ ದೇಣಿಗೆ ಈ ವರ್ಷ ರೂ. ಹತ್ತು ಲಕ್ಷವನ್ನು ಮೀರಿದೆ. ಫಲಾನುಭವಿಗಳು ತಮ್ಮ ವಿದ್ಯಾ ಪ್ರಗತಿ ಉಲ್ಲೇಖಿಸಿ ದಾನಿಗಳಿಗೆ ವರ್ಷಕ್ಕೆ ೪ ಪತ್ರ ಬರೆಯುತ್ತಾರೆ. ಉದ್ಯೋಗದ ನಂತರ ತಮ್ಮ ಪ್ರಥಮ ಸಂಬಳವನ್ನು ವಿದ್ಯಾಪೋಷಕ್‌ಗೆ ನೀಡಿ ಕೃತಜ್ಞತಾ ಭಾವ ವ್ಯಕ್ತಪಡಿಸಿದ ಕ್ಷಣಗಳು ಹೃದಯಸ್ಪರ್ಶಿ.‘ಮುಖ ಚೆಂದವಾಗಿದ್ದರೆ ಕನ್ನಡಿಯಲ್ಲೂ ಮುಖ ಚೆನ್ನಾಗಿ ಕಾಣುತ್ತದೆ. ನಾವು ಪಾರದರ್ಶಕವಾಗಿ ಸಂಪನ್ಮೂಲವನ್ನು ಸದುಪಯೋಗಪಡಿಸಿದರೆ ಜನ ಸರಿಯಾಗಿ ಸ್ಪಂದಿಸುತ್ತಾರೆ’ ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ಕೃತಜ್ಞತಾ ಭಾವ ವ್ಯಕ್ತಪಡಿಸುತ್ತಾರೆ. ೩) ಯಕ್ಷ ಶಿಕ್ಷಣ : ಪರ್ಯಾಯ ಶ್ರೀ ಪಾದರ ಗೌರವ ಅಧ್ಯಕ್ಷತೆಯಲ್ಲಿ, ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಟ್ರಸ್ಟ್ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಲಾಗುತ್ತಿದೆ. ಮೂಲತಃ ಉಡುಪಿ ತಾಲೂಕಿಗೆ ಸೀಮಿತವಾಗಿದ್ದ ಈ ತರಬೇತಿ, ಕಾಪು, ಕುಂದಾಪುರ ಮತ್ತು ಬೈಂದೂರು ಶಾಸಕರ ಆಶಯದಂತೆ ಆ ತಾಲೂಕುಗಳಿಗೂ ವಿಸ್ತರಿಸಲ್ಪಟ್ಟಿದೆ. ಈ ಯೋಜನೆಯಲ್ಲಿ ಇದೀಗ ೯೨ ಶಾಲೆಗಳಲ್ಲಿ ೩೦೦೦ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿಯನ್ನು ಕಲಾರಂಗ ನಿರ್ವಹಿಸುತ್ತಿದೆ. ಯಕ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪ್ರದರ್ಶನಗಳು ಡಿಸೆಂಬರ್ ತಿಂಗಳಲ್ಲಿ ಉಡುಪಿಯ ರಾಜಾಂಗಣ, ಬ್ರಹ್ಮಾವರ, ಕಾಪು, ಶಿರ್ವ, ಕುಂದಾಪುರ. ಬೈಂದೂರುಗಳಲ್ಲಿ ನಡೆಯಲಿದೆ. ಈ ಯೋಜನೆ ಆರಂಭದಿಂದ ಸಾವಿರಾರು ವಿದ್ಯಾರ್ಥಿಗಳು ಯಕ್ಷ ತರಬೇತಿ ಪಡೆದಿದ್ದಾರೆ. ಕಲಾರಂಗಕ್ಕೆ ಯಾವುದೇ ಸ್ವಂತ ಸಂಪನ್ಮೂಲಗಳಿಲ್ಲ. ಅದರ ಸಮಾಜಮುಖಿ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದ ಜನತೆ ಸ್ವಯಂ ಪ್ರೇರಿತರಾಗಿ ಕಲಾರಂಗದ ಖಾತೆಗೆ ಹಣ ಜಮಾಯಿಸುತ್ತಾರೆ.ಗೃಹ ನಿರ್ಮಾಣ ಯೋಜನೆ: ವಿದ್ಯಾಪೋಷಕ್ ವಿದ್ಯಾರ್ಥಿಗಳ ಮನೆ ಭೇಟಿ ಸಂದರ್ಭದಲ್ಲಿ ದುಃಸ್ಥಿತಿಯಲ್ಲಿದ್ದ ಮನೆಗಳನ್ನು ಕಂಡು ಅವರಿಗೆ ಹೊಸತಾಗಿ ಗೃಹ ನಿರ್ಮಾಣ ಮಾಡುವ ಯೋಜನೆಯಲ್ಲಿ ಯಕ್ಷಗಾನ ಕಲಾವಿದರೂ ಒಳಗೊಂಡಿದ್ದಾರೆ. ಮನೆ ನಿರ್ಮಾಣದ ಸ್ಥಳವನ್ನು ಮಾತ್ರ ಫಲಾನುಭವಿಗಳು ಒದಗಿಸುತ್ತಾರೆ. ಕಟ್ಟಡ ಸಾಮಾಗ್ರಿಗಳು, ಕಾರ್ಮಿಕರು, ವಿದ್ಯುತ್ ಸರಬರಾಜು, ದೀಪ ಬೆಳಗಿಸಿ ಮನೆ ಉದ್ಘಾಟಿಸುವ ಸಮಾರಂಭ, ಪ್ರಾಯೋಜಕರ ಉಪಸ್ಥಿತಿ, ಉಪಾಹಾರದ ವ್ಯವಸ್ಥೆ ಎಲ್ಲವನ್ನೂ ಕಲಾರಂಗವೇ ಆಯೋಜಿಸುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಪೂರ್ಣಗೊಂಡ ಮನೆಯನ್ನು ಪ್ರಾಯೋಜಕರ ಮೂಲಕವೇ ಫಲಾನುಭವಿಗಳಿಗೆ ಹಸ್ತಾಂತರಿಸುವ ಕ್ಷಣ ಹೃದಯಸ್ಪರ್ಶಿ. ಫಲಾನುಭವಿಗಳ ಕಣ್ಣಂಚಿನಲ್ಲಿ ಮಿನುಗುವ ಆನಂದಭಾಷ್ಪ ನಮಗೆ ನೀಡುವ ಸಂತೃಪ್ತಿಯನ್ನು ಶಬ್ದದಲ್ಲಿ ವರ್ಣಿಸಲು ಅಸದಳ ಎಂದು ೩೫ ವರ್ಷದಿಂದ ಕಲಾರಂಗದ ಕಾರ್ಯದರ್ಶಿ, ಎಲ್ಲ ಯೋಜನೆಗಳ ರೂವಾರಿ, ಚಾಲನಶಕ್ತಿ, ಮುರಳಿ ಕಡೆಕಾರ್ ಹೇಳುತ್ತಾರೆ.ಈಗಾಗಲೇ ೭೩ ಮನೆ ನಿರ್ಮಿಸಿದ್ದು ಇನ್ನು ೨೦ ಮನೆಗಳು ವಿವಿಧ ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಸುಮಾರು ೬ ರಿಂದ ೭ ಲಕ್ಷಕ್ಕೆ ಸೀಮಿತವಾದ ಖರ್ಚಿನಲ್ಲಿ ಈ ಮನೆಗಳ ನಿರ್ಮಾಣದ ಪೂರ್ತಿ ಜವಾಬ್ದಾರಿಯನ್ನು ಕಲಾರಂಗ ನಿರ್ವಹಿಸುತ್ತಿದೆ. ಸ್ವತಃ ಇಂಜಿನಿಯರ್ ಆಗಿರುವ ಕಲಾರಂಗದ ಅಧ್ಯಕ್ಷ ಗಂಗಾಧರ ರಾಯರು ಮನೆ ನಿರ್ಮಾಣದ ಸ್ಥಳಕ್ಕೆ ಹಲವು ಬಾರಿ ಭೇಟಿ ನೀಡಿ. ಗುಣಮಟ್ಟವನ್ನು ಖಾತರಿಪಡಿಸುತ್ತಾರೆ. ಗೃಹ ಪ್ರವೇಶದ ಶುಭ ಸಂದರ್ಭದಲ್ಲಿ ಮನೆ ನಿರ್ಮಾಣದ ಪ್ರಾಯೋಜಕರು ಉಪಸ್ಥಿತರಿದ್ದು ತಮ್ಮ ಮನಸ್ಸಿನ ಇಚ್ಛೆ ಪರಿಪೂರ್ಣವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. ಕಲಾರಂಗದ ಮನೆ ಪ್ರಾಯೋಜಿಸಿದವರ ಪಟ್ಟಿ ನೋಡಿದರೆ ಸಂತಸ ಮತ್ತು ಆಶ್ಚರ್ಯ ಏಕಕಾಲದಲ್ಲಿ ಉಂಟಾಗುತ್ತದೆ. ಪೇಜಾವರ ಹಿರಿಯ ಸ್ವಾಮೀಜಿ ವಿಶ್ವೇಶತೀರ್ಥರು, ಕಿರಿಯ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥರು, ಪಲಿಮಾರು ಮಠಾಧೀಶರು, ಕರ್ನಾಟಕ ಬ್ಯಾಂಕ್, ಹೆಚ್.ಎಸ್. ಶೆಟ್ಟಿ ಮೊದಲಾದವರಿದ್ದಾರೆ. ನಿವೃತ್ತಿಯ ದಿನವೇ ಮುರಳಿ ಕಡೆಕಾರರು ತಮ್ಮ ಶಾಲೆಯ ಕೊರಗ ವಿದ್ಯಾರ್ಥಿನಿ ನಯನಳಿಗೆ ‘ವಿಶ್ವೇಶ’ವೆಂಬ ಹೆಸರಿನ ಮನೆ ಕಟ್ಟಿಸಿ ದಾನ ಮಾಡಿದ್ದಾರೆ. ಅಧ್ಯಕ್ಷರಾದ ಗಂಗಾಧರ ರಾಯರು ೪ ಮನೆ ಪ್ರಾಯೋಜಿಸಿದ್ದಾರೆ. ಕಲಾರಂಗದ ಬದ್ಧತೆ, ಪಾರದರ್ಶಕತೆ ಮತ್ತು ಕ್ಲಪ್ತತೆಗಳನ್ನು ಮನಸಾರೆ ಮೆಚ್ಚಿದ ಹಲವಾರು ಪ್ರಾಯೋಜಕರು ‘ತಮಗೊಂದು ಅವಕಾಶ ಕೊಡಿ’ ಎಂದು ಆಗ್ರಹಿಸುತ್ತಿದ್ದು, ಪ್ರಾಯೋಜಕರ ಸಂಖ್ಯೆ ಜಾಸ್ತಿಯಾದುದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ, ನಿವೃತ್ತ ಶಿಕ್ಷಕ ರಾಜಗೋಪಾಲ ಆಚಾರ್ಯರು ತಮ್ಮ ವಿವಾಹದ ೫೦ನೇ ವರ್ಷಾಚರಣೆಯನ್ನು ಆಚರಿಸಿದ ಪರಿ ವಿಶಿಷ್ಟವಾದುದು. ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಾಲು ಬೆಟ್ಟಿನಲ್ಲಿ ಕಲಾರಂಗ ನಿರ್ಮಿಸಿದ ೫೦ನೇ ಮನೆಯನ್ನು ಆಚಾರ್ಯರು ಪ್ರಾಯೋಜಿಸಿ ತಮ್ಮ ಮದುವೆಯ ೫೦ನೇ ವರ್ಷವನ್ನು ಸಂಭ್ರಮಿಸಿದರು. ೧೯೯೦ರಲ್ಲಿ ಡಾ.ಬಿ.ಬಿ.ಶೆಟ್ಟರ ನೆನಪಿನಲ್ಲಿ ರು.೧೦೦೦ದ ಪುರಸ್ಕಾರದಿಂದ ಹಿರಿಯ ಕಲಾವಿದರೊಬ್ಬರಿಗೆ ನೀಡುತ್ತಿದ್ದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’, ಈಗ ೨೪ ಪ್ರಶಸ್ತಿಗಳ ಮೂಲಕ ೪ ಲಕ್ಷ ರು.ಗೆ ವಿಸ್ತರಿಸಲ್ಪಟ್ಟಿದ್ದು, ಸಂಸ್ಥೆಯ ಇನ್ನೊಂದು ಹಿರಿಮೆ. ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಹೆಸರಿನಲ್ಲಿ ವಾರ್ಷಿಕ ಒಂದು ಲಕ್ಷ ರೂಪಾಯಿಯ ‘ವಿಶ್ವೇಶ ಪ್ರಶಸ್ತಿ’ಯನ್ನು ಯಕ್ಷಗಾನದಲ್ಲಿ ಗಣನೀಯ ಸಾಧನೆ ಮಾಡಿದ ಸಂಸ್ಥೆಗೆ ನೀಡಲಾಗುತ್ತಿದೆ. ಯಾವುದೇ ಸಂಪನ್ಮೂಲ ಇಲ್ಲದ ಈ ಸಂಸ್ಥೆ ವಾರ್ಷಿಕ ೫ ಕೋಟಿಯಷ್ಟು ವ್ಯವಹಾರವನ್ನು ದಾಖಲಿಸುತ್ತಿದೆ. ಪ್ರತಿವರ್ಷ ಕಲಾವಿದರಿಗೆ ಸನ್ಮಾನ, ತಾಳಮದ್ದಲೆ ಸಪ್ತಾಹ, ಸಾಧಕರ ಬಗ್ಗೆ ಪುಸ್ತಕ ಪ್ರಕಟಣೆ, ಬಣ್ಣಗಾರಿಕೆಯ ಶಿಬಿರ, ಕೋವಿಡ್ ಸಮಯದಲ್ಲಿ ಕಿಟ್ ವಿತರಣೆ, ಡಾ. ಶೈಲಜಾ ಭಟ್ ಪ್ರಾಯೋಜಿತ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಗಳಿಗೆ ವಿಸ್ತರಿಸಿದೆ.

ಯಕ್ಷಗಾನದ ಪ್ರಸಿದ್ದ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರ ೯೦ನೇ ಜನ್ಮ ದಿನವನ್ನು ಬಹಳ ವೈಶಿಷ್ಟ್ಯ ಪೂರ್ಣವಾಗಿ ೩ ತಿಂಗಳ ಕಾಲ ನಿರಂತರ ಕಾರ್ಯಕ್ರಮಗಳ ಮೂಲಕ ಆಯೋಜಿಸುವ ಜವಾಬ್ದಾರಿಯನ್ನು ಅವರ ಕುಟುಂಬಿಕರು ನೀಡಿರುವುದು ಕಲಾರಂಗಕ್ಕೆ. ೨೦೨೨ನೇ ಇಸವಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಇದಕ್ಕೆ ಚಾಲನೆ ನೀಡಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು ೩೦ಕ್ಕೂ ಹೆಚ್ಚು ಕಾರ್ಯಕ್ರಮಗಳು ಯಕ್ಷ ಸಾಧಕರ ಸಂಸ್ಮರಣೆಯೊಂದಿಗೆ ನಡೆದು ಸಮಾರೋಪ ಸಮಾರಂಭದಂದು ತೆಂಕು ಬಡಗಿನ ೧೨೦ ಸ್ತ್ರೀ ವೇಷಧಾರಿಗಳಿಗೆ ಸನ್ಮಾನ ಮತ್ತು ಆರ್ಥಿಕ ಸಹಾಯವನ್ನು ನೀಡುವ ಮೂಲಕ ಬಹಳ ಆರ್ಥಪೂರ್ಣವಾಗಿ ಆಚರಿಸಲಾಯಿತು. ಸೂರಿಕುಮೇರು ಗೋವಿಂದ ಭಟ್ಟರಿಗೆ ೭೫ ವರ್ಷ ತುಂಬಿದ ಸಂದರ್ಭದಲ್ಲಿ ಅವರು ಪಾತ್ರ ವಹಿಸುವುದರೊಂದಿಗೆ ೭ ದಿನದ ‘ಗೋವಿಂದ ವೈಭವ’ವನ್ನು ಕಲಾರಂಗ ಆಯೋಜಿಸಿದೆ. ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ಕಲಾರಂಗ ನೀಡುತ್ತಿದೆ. ಕಟೀಲು ಮೇಳದಲ್ಲಿ ೩ ದಶಕಗಳ ಕಾಲ ದೇವಿ ಪಾತ್ರ ನಿರ್ವಹಿಸಿದ ಕಡಂದೇಲು ಪುರುಷೋತ್ತಮ ಭಟ್ಟರ ಶತಮಾನ ಸಂಭ್ರಮವನ್ನು ಆಚರಿಸಿ ‘ಮರ್ಯಾದಾ ಪುರುಷೋತ್ತಮ’ ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದೆ. ತಾಳಮದ್ದಲೆ ಸಪ್ತಾಹ ದಶಮಾನ ಸಂದರ್ಭ, ಡಾ. ಪಾದೆಕಲ್ಲು ವಿಷ್ಣುಭಟ್ಟ, ಡಾ. ಪ್ರಭಾಕರ್ ಜೋಶಿಯವರ ಸಂಪಾದಕತ್ವದಲ್ಲಿ, ತಾಳಮದ್ದಲೆ ಕುರಿತಾದ ಆಕರ ಗ್ರಂಥ ‘ವಾಚಿಕ'''' ಪ್ರಕಟವಾಗಿದೆ. ೨೦೨೨ನೇ ಇಸವಿಯಲ್ಲಿ ಉಡುಪಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಯಕ್ಷಗಾನ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸುವಲ್ಲಿ ಯಕ್ಷಗಾನ ಕಲಾರಂಗದ ಪಾತ್ರ ಮಹತ್ತರವಾದದ್ದು.೪೦ ಜನ ಪದಾಧಿಕಾರಿಗಳು ಕಲಾರಂಗದ ಸೇವೆ ಗೈಯುವುದು ತಮ್ಮ ಜೀವನದಲ್ಲಿ ದೊರೆತ ಭಾಗ್ಯವೆಂದು ಪರಿಗಣಿಸಿದ್ದಾರೆ.

ವರ್ಷಂಪ್ರತಿ ಮೇ ೩೧ರಂದು ಕಲಾರಂಗ, ಉಡುಪಿಯ ರಾಜಾಂಗಣದಲ್ಲಿ ವೃತ್ತಿ ಕಲಾವಿದರ ಸಮಾವೇಶ ಆಯೋಜಿಸುತ್ತಿದೆ. ಈ ಬಾರಿಯ ಸಮಾವೇಶದಲ್ಲಿ ‘ಸುವರ್ಣ ಸಡಗರ’ವನ್ನು ಸಂಯೋಜಿಸಿಕೊಂಡು ೫೦ ಹಿರಿಯ ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಸುವರ್ಣ ಪುರಸ್ಕಾರ’ವನ್ನು ಪ್ರತಿಯೊಬ್ಬರಿಗೆ ೫೦ ಸಾವಿರ ರು. ನೀಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದೆ.ಕಲಾರಂಗಕ್ಕೆ ತನ್ನ ಅಸ್ತಿತ್ವದ ೪೯ ವರ್ಷಗಳವರೆಗೂ ಸ್ವಂತ ಮನೆ ಇರಲಿಲ್ಲ. ಈ ಸಂದರ್ಭದಲ್ಲಿ, ಕಾಕತಾಳೀಯ ಎಂಬಂತೆ, ಬೆಂಗಳೂರಿನ ಇನ್‌ಫೋಸಿಸ್ ಫೌಂಡೇಶನ್ ಸಂಸ್ಥೆಯು, ೧೫.೪೮ ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಕೊಟ್ಟಿದೆ. ಸುಮಾರು ೧೫ ಸಾವಿರ ಚದರಡಿ ವಿಸ್ತೀರ್ಣದ ನಾಲ್ಕು ಮಹಡಿಯ ಈ ಕಟ್ಟಡದಲ್ಲಿ ಅತ್ಯುತ್ತಮ ಧ್ವನಿವರ್ಧಕ, ಬೆಳಕು, ಹವಾನಿಯಂತ್ರಣ, ೩೮೮ ಜನರಿಗೆ ಆಧುನಿಕ ರೀತಿಯ ಆಸನ, ಲಿಫ್ಟ್, ವಿಶ್ರಾಂತಿ ಕೊಠಡಿಗಳು, ಕಚೇರಿ, ವೇದಿಕೆ, ಬಣ್ಣದ ಮನೆಗಳ ಸೌಲಭ್ಯಗಳಿವೆ. ಏಪ್ರಿಲ್ ೨೦೨೪ರಲ್ಲಿ ಉದ್ಘಾಟನೆಯಾದ ಕಟ್ಟಡದಲ್ಲಿ ಯಕ್ಷಗಾನ, ಸಂಗೀತ, ನಾಟಕ ಮೊದಲಾದ ನಿರಂತರ ಕಾರ್ಯಕ್ರಮಗಳ ಮೂಲಕ ‘ನಿತ್ಯೋತ್ಸವ’ ನಡೆಯುತ್ತಿದೆ.ವಿವಿಧ ರಂಗಗಳಲ್ಲಿ ಕಲಾರಂಗದ ಸಾಧನೆಗಳನ್ನು ಗಮನಿಸಿದ ಮಣಿಪಾಲದ ಮಾಹೆ ಸಂಸ್ಥೆ ರು. ಐವತ್ತು ಲಕ್ಷದ ಬೃಹತ್ ಮೊತ್ತದ ದೇಣಿಗೆ ನೀಡಿ ಪ್ರೋತ್ಸಾಹಿಸಿರುವುದು ನಮಗೆ ಹೆಮ್ಮೆ ತಂದಿದೆ. ಮಾತ್ರವಲ್ಲದೆ ಮುಂದಿನ ೫ ವರ್ಷ ಹತ್ತು ಲಕ್ಷದಂತೆ ನೀಡಿ ಸಹಕರಿಸಲಿದೆ.ವರ್ಷಗಳಿಂದ ಸಂಸ್ಥೆಯ ಸಾಧನೆಗಳನ್ನು ಬಿಂಬಿಸುವುದಕ್ಕಾಗಿ ಮತ್ತು ದಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸುವುದಕ್ಕಾಗಿ, ‘ಕಲಾಂತರಂಗ’ ಎಂಬ ಮೌಲಿಕ ವಾರ್ಷಿಕ ಸಂಚಿಕೆ ಪ್ರಕಟಿಸುತ್ತಿದೆ. ಸ್ಥಾಪನೆಯಾದ ಈ ೫೦ ವರ್ಷಗಳಿಂದ ನೂರಾರು ಪ್ರಶಸ್ತಿಗಳನ್ನು ನೀಡಿರುವ ಕಲಾರಂಗ ಎಂದೂ ತನ್ನ ಪ್ರಶಸ್ತಿಗಾಗಿ ಹಾತೊರೆಯಲಿಲ್ಲ. ಆದರೂ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಎನ್.ಎಸ್ ಕಿಲ್ಲೆ ಪ್ರಶಸ್ತಿ, ಕಾರ್ಕಳ ಬೆಳದಿಂಗಳ ಸಮ್ಮೇಳನ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಧ್ರುವ ಕಲಾಗೌರವ, ಭಟ್ಕಳದ ಮಹಿಷಾಸುರ ಮರ್ದಿನಿ ಯಕ್ಷ ಕಲಾ ಪ್ರತಿಷ್ಠಾನದ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.ಲೇಖನ: ಭುವನ್‌ ಪ್ರಸಾದ್‌ ಹೆಗ್ಡೆ ಉಡುಪಿ