ಸಾರಾಂಶ
ಕೊಟ್ಟೂರು: ರಾಮಸೇತು ಮಾನವ ನಿರ್ಮಿತ ಅಲ್ಲ ಎಂದು ಮೊಂಡುವಾದ ಮಾಡುತ್ತಿದ್ದವರೇ ಇತ್ತೀಚೆಗೆ ರಾಮಸೇತು ಖಂಡಿತ ಮಾನವ ನಿರ್ಮಿತ ಎಂದು ಹೇಳುತ್ತಿದ್ದಾರೆ. ಈ ಮೂಲಕ ರಾಮಾಯಣ ಕಾಲದ ವಾನರ ಸೇನೆಯ ನಾಯಕ ಆಂಜನೇಯ ನಿರ್ಮಾಣ ಮಾಡಿದ ಸೇತುವೆಯನ್ನು ಸದ್ದಿಲ್ಲದೆ ಒಪ್ಪಿಕೊಳ್ಳುತ್ತಿರುವುದು ಆಂಜನೇಯನ ತಾಂತ್ರಿಕ ಶಕ್ತಿಗೆ ಸಂದ ದೊಡ್ಡ ಗೌರವ ಎಂದು ಉಜ್ಜಯನಿ ಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕೆ. ಅಯನಹಳ್ಳಿ ಗ್ರಾಮದಲ್ಲಿನ ಅಭಯ ಆಂಜನೇಯ ದೇವಸ್ಥಾನ ಮತ್ತು ಮೂರ್ತಿಯ ಪುನರ್ ಪ್ರಾಣ ಪ್ರತಿಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇವರನ್ನು ನಂಬದ ಕೆಲವರು ಆಂಜನೇಯ ಸ್ವಯಂ ನಿರ್ಮಿಸಿದ ಕನ್ಯಾಕುಮಾರಿಯಿಂದ ಶ್ರೀಲಂಕಾದಲ್ಲಿನ ಸೇತು ನಿರ್ಮಾಣದ ಬಗ್ಗೆ ಅನಗತ್ಯ ಅನುಮಾನ ವ್ಯಕ್ತಪಡಿಸುತ್ತಿದ್ದರು. ಆದರೆ ದಾಖಲೆಗಳನು ದೃಢವಾಗುತ್ತಿದ್ದಂತೆ ಕೆಲವರು ಇದೀಗ ರಾಮಸೇತು ನಿರ್ಮಾಣವನ್ನು ಸದ್ದಿಲ್ಲದೆ ಒಪ್ಪಿಕೊಂಡು ಹಿಂದೆ ಸರಿಯುತ್ತಿದ್ದಾರೆ ಎಂದರು.
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವತ್ತ ಪ್ರತಿಯೊಬ್ಬರು ಮುಂದಾಗಬೇಕು. ಇದಾಗದಿದ್ದರೆ ಶಿಕ್ಷಣ ಮತ್ತು ಸಂಸ್ಕೃತಿ ರಹಿತ ಬದುಕು ಕಟ್ಟಿಕೊಂಡು ಅಬ್ಬೇಪಾರಿ ಬದುಕಿನಿಂದ ಬಳಲುವಂತಾಗುವ ಅಪಾಯ ಇದೆ ಎಂದು ಹೇಳಿದರು.ಎಡೆಯೂರಿನ ರೇಣುಕ ಶಿವಾಚಾರ್ಯ, ಕೆ.ಅಯ್ಯನಹಳ್ಳಿಯ ಡಾ.ಮಹೇಶ್ವರ ಶಿವಾಚಾರ್ಯ, ನಂದಿಪುರದ ಮಹೇಶ್ವರ ಶಿವಾಚಾರ್ಯ, ಕೂಡ್ಲಿಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಮುಖಂಡ ಪಿ. ಎಚ್. ದೊಡ್ಡರಾಮಣ್ಣ ಮಾತನಾಡಿದರು.
ಮುಖ್ಯಅತಿಥಿಗಳಾಗಿ ಬೆಣ್ಣಿಹಳ್ಳಿಯ ಪಂಚಾಕ್ಷರಿ ಶಿವಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಹೇಮಾಕ್ಷಿ ರೇಣುಕಪ್ಪ, ಎಂ.ಯು. ಪರಮೇಶ್ವರಯ್ಯ, ಎಂ.ಜಿ. ಕೊಟ್ರೇಶ್, ಎ.ಎಂ. ಕೊಟ್ರೇಶ್, ಕೆ.ನಾಗಪ್ಪ ಮತ್ತಿತರರು ಭಾಗವಹಿಸಿದ್ದರು.ಎ.ಎಂ.ಶಿವಪ್ರಕಾಶ್ ಪ್ರಸ್ತಾಪಿಕವಾಗಿ ಮಾತನಾಡಿದರು. ವಿನಾಯಕ ಎಂ.ಜಿ. ಸ್ವಾಗತಿಸಿದರು. ಎ.ಎಂ.ಜೆ. ಮಲ್ಲಿಕಾರ್ಜುನ ವಂದಿಸಿದರು. ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ನಿರೂಪಿಸಿದರು.