ಸಾರಾಂಶ
ಇಂದು ಬೆಂಗಳೂರು ಮೂಲಕ ಪ್ರಯಾಣ । ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‍ನಲ್ಲಿ ನಡೆಯುವ ಸ್ಕೌಟ್ ಕಾರ್ಯಕ್ರಮದಲ್ಲಿ ಭಾಗಿ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಂಗ್ಲೆಂಡಿನ ಬ್ರಿಟೀಷ ಕೌನ್ಸಿಲ್ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಹಯೋಗದೊಂದಿಗೆ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‍ನಲ್ಲಿ ನಡೆಯುವ ಸ್ಕೌಟ್ (Scholar for outstanding undergraduate talent)ಕಾರ್ಯಕ್ರಮದಲ್ಲಿ ಭಾಗಿಯಾಗಲು ಗುಲಬರ್ಗಾ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದೇ ನ.9 ರಂದು ಬೆಂಗಳೂರು ಮೂಲಕ 15 ದಿನಗಳ ಕಾಲ ಲಂಡನ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ್ ಅಗಸರ್ ತಿಳಿಸಿದ್ದಾರೆ.ವಿಶ್ವವಿದ್ಯಾಲಯದ ಕೈಲಾಶ್ ಅತಿಥಿ ಗೃಹದಲ್ಲಿ ಸುದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 31 ಸಾರ್ವಜನಿಕ ವಿವಿಗಳ ಪೈಕಿ ಗುಲಬರ್ಗಾ ವಿವಿ, ರಾಯಚೂರು ವಿವಿ, ತುಮಕೂರ ವಿವಿ, ರಾಣಿ ಚನ್ನಮ್ಮ ವಿವಿ, ಮೈಸೂರು ವಿವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ತಲಾ 5 ವಿದ್ಯಾರ್ಥಿಗಳು ಲಂಡನ್ ಪ್ರವಾಸ ಕೈಗೊಳ್ಳಲಿದ್ದಾರೆ.
ಶೈಕ್ಷಣಿಕೆ ಚಟುವಟಿಕೆ ವಿನಿಮಯ, ಅಲ್ಲಿನ ಪದವಿ, ಸ್ನಾತಕ ಪದವಿ ಹಾಗೂ ಉನ್ನತ ಶಿಕ್ಷಣದ ಕಾರ್ಯಚಟುವಟಿಕೆ, ಪಠ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಕುರಿತು ಅರಿಯುವ ಕಾರ್ಯಕ್ರಮ ಇದಾಗಿದ್ದು, ಈ ಅವಧಿಯಲ್ಲಿ ಯೂನೈಟೆಡ್ ಕಿಂಗಡಮ್‍ನ ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ನ.23 ರಂದು ಲಂಡನ್‍ದಿಂದ ಹಿಂತಿರುಗಲಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿನಿಗಳಾದ ಬಂದೇನಮಾಜ್ ಜಮಾದಾರ್, ಭಾಗೇಶ್, ಅಮನ್ ಮಲ್ಲಿಕಾರ್ಜುನ, ಕಾವೇರಿ ಅಶೋಕ, ಪಾರ್ವತಿ ಮಳೇಂದ್ರ ಅವರು ಲಂಡನ್ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಇವರೊಂದಿಗೆ ವಿವಿಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ರಮೇಶ ಲಂಡನ್ಕರ್ ಇರಲಿದ್ದಾರೆ. ಇವರ ಪ್ರವಾಸದ ಸಂಪೂರ್ಣ ವೆಚ್ಚವನ್ನು ಬ್ರಿಟೀಷ್ ಕೌನ್ಸಿಲ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಗುಲಬರ್ಗಾ ವಿವಿ ಜಂಟಿಯಾಗಿ ಭರಿಸಲಿವೆ ಎಂದು ಪ್ರೊ.ದಯಾನಂದ್ ಅಗಸರ್ ಸ್ಪಷ್ಟಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿವಿಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ರಮೇಶ ಲಂಡನ್ಕರ್, ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಶೈಕ್ಷಣಿಕ ಚಟುವಟಿಕೆ ಅಧಿಕಾರಿ ಪ್ರೊ. ಆನಂದ ನಾಯ್ಕ್ ಸೇರಿದಂತೆ ಪ್ರವಾಸಕ್ಕೆ ಅಣಿಯಾಗಿರುವ ವಿದ್ಯಾರ್ಥಿಗಳಿದ್ದರು.