ಸಾರಾಂಶ
ಬಳ್ಳಾರಿ: ತೀವ್ರವಾಗಿ ಅನುಭವಿಸುವ ನೋವಿನಿಂದ ನಿಜವಾದ ಗಜಲ್ ಹುಟ್ಟಲು ಸಾಧ್ಯ ಎಂದು ಕೂಡ್ಲಿಗಿಯ ಹಿರಿಯ ಕವಿ ಸಿದ್ದರಾಮ ಹಿರೇಮಠ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಜುನೇದ್ ಪ್ರಕಾಶನ ಕನ್ನಡ ಭವನದಲ್ಲಿ ಆಯೋಜಿಸಿದ್ದ ದಸ್ತಗೀರಸಾಬ್ ದಿನ್ನಿ ಅವರ ‘ಮಧು ಬಟ್ಟಲಿನ ಗುಟುಕು‘ ಗಜಲ್ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು. ಬಾಣಕ್ಕೆ ಸಿಲುಕಿ ಬದುಕಲು ಒದ್ದಾಡುವ ಜಿಂಕೆಯ ತಳಮಳದ ಸ್ಥಿತಿಯೇ ಗಜಲ್. ಪ್ರೇಮ ಎಂದರೆ ಔನತ್ಯ, ಅಧ್ಯಾತ್ಮವಾಗಿದೆ. ಗಜಲ್ ಎಂದರೆ ಅದೊಂದು ತುಡಿಯುವ ಅತೃಪ್ತ ಮನಸ್ಥಿತಿ. ಮೊದಲು ಭಾಷೆ ನಂತರ ವ್ಯಾಕರಣ. ಮೊದಲು ಭಾವ ನಂತರ ಛಂದಸ್ಸು. ಕಡಲಿನಂತೆ ಹೊಯ್ದಾಡುವ ಚಿಪ್ಪಿನೊಳಗಿನ ಮೃದ್ವಂಗಿ ಎಂದು ವಿಶ್ಲೇಷಿಸಿದರು.ಕವಿ ದಸ್ತಗೀರ್‌ಸಾಬ್ ದಿನ್ನಿಯವರ ಗಜಲುಗಳಲ್ಲಿ ಪ್ರೇಮ, ವ್ಯಥೆ, ಅಳಲು ತಳಮಳ, ಸುಡುವ ವರ್ತಮಾನ ಮಡುಗಟ್ಟಿದೆ. ಇಲ್ಲಿನ ಗಜಲುಗಳು ಓದುಗರಿಗೆ ನಿರಾಸೆಯನ್ನು ಉಂಟುಮಾಡುವುದಿಲ್ಲ ಎನ್ನುವುದೇ ಸಂಕಲನದ ಹೆಚ್ಚುಗಾರಿಕೆಯಾಗಿದೆ. ಇತ್ತೀಚಿಗೆ ಬಹುಪಾಲು ಬರಹಗಾರರು ಗಜಲಿನ ರಚನೆಗೆ ತೊಡಗಿದ್ದಾರೆ. ಆದರೆ ಅದರ ಛಂಧೋಲಯವನ್ನು ಸರಿಯಾಗಿ ತಿಳಿದುಕೊಳ್ಳದೆ ಬರೆಯುತ್ತಿರುವುದರಿಂದ ಗಜಲ್‌ನ ಮೂಲ ಆಶಯ ಬುಡಮೇಲಾಗುತ್ತಿದೆ. ಗಜಲ್ ಸಾಹಿತ್ಯವನ್ನು ಮೊದಲು ಅರ್ಥೈಸಿಕೊಂಡೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬಹುತೇಕ ಗಜಲ್‌ಗಳು ಪ್ರೇಮ, ಪ್ರೀತಿ, ಪ್ರಣಯ, ವಿರಹ ಗೀತೆಗಳಂತೆ ಕಂಡು ಬಂದರೂ ಅವು ಕರುಣಾರಸ ಪ್ರಧಾನವಾದ ದ್ವಿಪದಿಗುಚ್ಚಗಳಾಗಿವೆ ಎಂದು ವಿಶ್ಲೇಷಿಸಿದರು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ನಗರದ ಹಿರಿಯ ಮಕ್ಕಳ ವೈದ್ಯ ಹಾಗೂ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಗಜಲ್ ಅರಬಿನಲ್ಲಿ ಹುಟ್ಟಿ, ಇರಾನಿನಲ್ಲಿ ಬೆಳೆದು ಕನ್ನಡದ ನೆಲದಲ್ಲಿ ಅರಳಿ ಕಂಪು ಸೂಸುತ್ತಿರುವುದು ಸಂತೋಷದ ಸಂಗತಿ. ಮಧುರ ಮತ್ತು ಮೋಹಕವಾದ ಈ ಕಾವ್ಯರೂಪಕ್ಕೆ ಛಂದೋಲಯದ ಹಲವು ಬಂಧನಗಳಿವೆ. ಉರ್ದು ಕಾವ್ಯದ ಈ ರೂಪವನ್ನು ಕನ್ನಡ ಭಾಷೆಯ ಲಯಕ್ಕೆ ಒಗ್ಗಿಸಿಕೊಂಡು ಬರೆಯುತ್ತಿರುವುದು ಆಶಾದಾಯಕವಾದ ಬೆಳವಣಿಗೆ ಎಂದರು.ಇಟಿಗಿ ಭೀಮನಗೌಡ ಶಾಂತರಸ ಮಾತನಾಡಿ, ಹೆಂಬೇರಾಳರು ಕನ್ನಡ ಗಜಲ್ ಸಾಹಿತ್ಯಕ್ಕೆ ಒಂದು ಅಡಿಪಾಯವನ್ನು ಹಾಕಿ ಪರಂಪರೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಸ್ಮರಿಸಿದರು.
ಕವಿ ದಸ್ತಗೀರಬ್ ದಿನ್ನಿ ಗಜಲಿನ ರಚನೆಗೆ ಕಾರಣವಾದ ರಾಯಚೂರಿನ ಪರಿಸರವನ್ನು ನೆನಪಿಸಿಕೊಳ್ಳುತ್ತಲೇ ಇಲ್ಲಿನ ರಚನೆಗಳಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನವಿದೆ. ಆಸಕ್ತಿ ಮತ್ತು ಪ್ರೀತಿ ಇದೆ. ಇನ್ನೂ ಒಳ್ಳೆಯ ಗಜಲುಗಳನ್ನು ಬರೆಯಬೇಕೆಂಬ ಅತೃಪ್ತಿಯೂ ಇದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಟಿ ರುದ್ರಪ್ಪ, ‘ಮಧು ಬಟ್ಟಲಿನ ಗುಟುಕು’ ಸಹೃದಯರಿಗೆ ಖುಷಿ ನೀಡುವುದರೊಂದಿಗೆ ಹೊಸ ಆಲೋಚನೆಗೆ ಹಚ್ಚುವಂತಿದೆ ಎಂದರು.
ಲೇಖಕ ಡಾ. ಶಿವಲಿಂಗಪ್ಪ ಹಂದಿಹಾಳು ಹಾಗೂ ಉಪನ್ಯಾಸಕ ಡಾ. ಸಿ. ಕೊಟ್ರೇಶ ಉಪಸ್ಥಿತರಿದ್ದರು.ಲೇಖಕರಾದ ವೀರೇಂದ್ರ ರಾವಿಹಾಳ್, ಗಂಗಾಧರ ಪತ್ತಾರ, ವೆಂಕಟಯ್ಯ ಅಪ್ಪಗೆರೆ, ನಾಗಿರೆಡ್ಡಿ, ಅಜಯ ಬಣಕಾರ, ಅಬ್ದುಲ್ ಹೖ, ಪಿ.ಆರ್. ವೆಂಕಟೇಶ, ವೀರೇಶ ಸ್ವಾಮಿ, ತಿಪ್ಪೇರುದ್ರ ಸಂಡೂರು, ಮಲ್ಲಿಕಾರ್ಜುನ ಸ್ವಾಮಿ ಹಾಜರಿದ್ದರು.