ಇನ್ನು ಕೆಎಸ್ಸಾರ್ಟಿಸಿ ಬಸ್‌ ಸಂಚಾರದ ಲೈವ್‌ ಟ್ರ್ಯಾಕಿಂಗ್‌? ಸಾರಿಗೆ ಇಲಾಖೆಯಿಂದ ರೈಲ್ವೆ ಮಾದರಿ ಪ್ರಯತ್ನ!

| N/A | Published : Apr 07 2025, 12:31 AM IST / Updated: Apr 07 2025, 08:32 AM IST

ಇನ್ನು ಕೆಎಸ್ಸಾರ್ಟಿಸಿ ಬಸ್‌ ಸಂಚಾರದ ಲೈವ್‌ ಟ್ರ್ಯಾಕಿಂಗ್‌? ಸಾರಿಗೆ ಇಲಾಖೆಯಿಂದ ರೈಲ್ವೆ ಮಾದರಿ ಪ್ರಯತ್ನ!
Share this Article
  • FB
  • TW
  • Linkdin
  • Email

ಸಾರಾಂಶ

 ಕೆಎಸ್ಸಾರ್ಟಿಸಿ ಬಸ್‌ ಸೇವೆಯನ್ನು ಮತ್ತಷ್ಟು ನಿಖರ ಮತ್ತು ಉತ್ತಮಗೊಳಿಸುವ ಉದ್ದೇಶದೊಂದಿಗೆ ‘ಕಮಾಂಡ್‌ ಕಂಟ್ರೋಲ್‌ ಸೆಂಟರ್‌’ ಸ್ಥಾಪನೆಗೆ ಯೋಜಿಸಲಾಗುತ್ತಿದ್ದು, ಆ ಮೂಲಕ ನಿಗಮದ ಏಳು ಸಾವಿರಕ್ಕೂ ಹೆಚ್ಚಿನ ಬಸ್‌ಗಳ ನಿಖರ ಮಾಹಿತಿ ಪ್ರಯಾಣಿಕರಿಗೆ ಕ್ಷಣಕ್ಷಣಕ್ಕೂ ದೊರೆಯುವಂತೆ ಮಾಡುವ ಗುರಿ ಹೊಂದಲಾಗಿದೆ.

ಗಿರೀಶ್‌ ಗರಗ

 ಬೆಂಗಳೂರು : ರೈಲ್ವೆಯ ರೀತಿಯಲ್ಲೇ ಕೆಎಸ್ಸಾರ್ಟಿಸಿ ಬಸ್‌ ಸೇವೆಯನ್ನು ಮತ್ತಷ್ಟು ನಿಖರ ಮತ್ತು ಉತ್ತಮಗೊಳಿಸುವ ಉದ್ದೇಶದೊಂದಿಗೆ ‘ಕಮಾಂಡ್‌ ಕಂಟ್ರೋಲ್‌ ಸೆಂಟರ್‌’ ಸ್ಥಾಪನೆಗೆ ಯೋಜಿಸಲಾಗುತ್ತಿದ್ದು, ಆ ಮೂಲಕ ನಿಗಮದ ಏಳು ಸಾವಿರಕ್ಕೂ ಹೆಚ್ಚಿನ ಬಸ್‌ಗಳ ನಿಖರ ಮಾಹಿತಿ ಪ್ರಯಾಣಿಕರಿಗೆ ಕ್ಷಣಕ್ಷಣಕ್ಕೂ ದೊರೆಯುವಂತೆ ಮಾಡುವ ಗುರಿ ಹೊಂದಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ದೇಶನದಂತೆ ಎಲ್ಲ ಸಾರ್ವಜನಿಕ ಸೇವೆ ನೀಡುವ ವಾಹನಗಳಲ್ಲಿ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿಡಿ) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಈಗಾಗಲೇ ಖಾಸಗಿ ವಾಹನಗಳಲ್ಲಿ ವಿಎಲ್‌ಟಿಡಿ ಅಳವಡಿಕೆಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಅದರ ಜತೆಗೆ ಇದೀಗ ಕೆಎಸ್ಸಾರ್ಟಿಸಿಯ ಬಸ್‌ಗಳಲ್ಲೂ ವಿಎಲ್‌ಟಿಡಿ ಅಳವಡಿಕೆ ಮಾಡಲಾಗುತ್ತಿದೆ. ಶೀಘ್ರದಲ್ಲಿ ಅನುಷ್ಠಾನ ಕಾರ್ಯ ಆರಂಭಿಸಲಾಗುತ್ತಿದೆ.

7 ಸಾವಿರ ಬಸ್‌ಗಳ ಟ್ರ್ಯಾಕಿಂಗ್‌: ಕೆಎಸ್ಸಾರ್ಟಿಸಿಯಲ್ಲಿ 83 ಘಟಕಗಳು, 17 ವಿಭಾಗಗಳು, 177 ಬಸ್‌ ನಿಲ್ದಾಣಗಳಿವೆ. ಅದರೊಂದಿಗೆ 8,837 ಬಸ್‌ಗಳಿದ್ದು, 8,044 ಶೆಡ್ಯೂಲ್‌ಗಳಿವೆ. ಹಾಗೆಯೇ, ಪ್ರತಿನಿತ್ಯ 34.85 ಲಕ್ಷ ಪ್ರಯಾಣಿಕರಿಗೆ, 28.89 ಲಕ್ಷ ಕಿ.ಮೀ. ಸೇವೆ ನೀಡಲಾಗುತ್ತಿದೆ. ಹೀಗೆ ಸೇವೆ ನೀಡುತ್ತಿರುವ ಕೆಎಸ್ಸಾರ್ಟಿಸಿ ಬಸ್‌ಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ ಎಂಬುದೂ ಸೇರಿ ಇನ್ನಿತರ ಮಾಹಿತಿಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಹೀಗಾಗಿಯೇ ಇದೀಗ ಕೆಎಸ್ಸಾರ್ಟಿಸಿ ನಿತ್ಯ ಸೇವೆ ನೀಡುವ 7,207 ಬಸ್‌ಗಳಲ್ಲಿ ವಿಎಲ್‌ಟಿಡಿ ಅಳವಡಿಸಿದ ನಂತರ ಆ ಬಸ್‌ಗಳ ನಿಖರ ಮಾಹಿತಿಯನ್ನು ಮೇಲ್ವಿಚಾರಣೆ ಮಾಡಲು ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಿದೆ ನಿಮ್‌ ಬಸ್‌?:

ನೂತನ ಯೋಜನೆಯಂತೆ ತಂತ್ರಜ್ಞಾನದ ಮೂಲಕ (ವಿಎಲ್‌ಟಿಡಿ) ಕಮಾಂಡ್ ಕಂಟ್ರೋಲ್‌ ಸೆಂಟರ್‌ಗೆ ಎಲ್ಲ 7207 ಬಸ್‌ಗಳ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯಲಿದೆ. ಯೋಜನೆ ಭಾಗವಾಗಿ ಪ್ರಯಾಣಿಕರಿಗಾಗಿ ಹೊಸ ಮೊಬೈಲ್‌ ಅಪ್ಲಿಕೇಷನ್‌ವೊಂದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕಮಾಂಡ್‌ ಕಂಟ್ರೋಲ್‌ ಸೆಂಟರ್‌ಗೆ ಬರುವ ಮಾಹಿತಿಯನ್ನು ಈ ಮೊಬೈಲ್‌ ಆ್ಯಪ್‌ಗೆ ರವಾನಿಸಲಾಗುತ್ತದೆ. ಅದರಿಂದ ಪ್ರಯಾಣಿಕರು ತಾವು ಸಂಚರಿಸಬೇಕಾದ ಬಸ್‌ ಯಾವ ಮಾರ್ಗದಲ್ಲಿದೆ, ಎಷ್ಟು ಸಮಯಕ್ಕೆ ಬಸ್‌ ನಿಲ್ದಾಣಕ್ಕೆ ಬರುತ್ತದೆ ಎಂಬ ನಿಖರ ಮಾಹಿತಿ ದೊರೆಯುವಂತಾಗುತ್ತದೆ. ಅದರೊಂದಿಗೆ ಬಸ್‌ನಲ್ಲಿನ ಚಾಲಕ, ನಿರ್ವಾಹಕರ ವಿವರ, ಬಸ್‌ ಯಾವಾಗ? ಯಾವ ನಿಲ್ದಾಣದಿಂದ ಎಷ್ಟು ಗಂಟೆಗೆ ಹೊರಟಿತು ಎಂಬ ಮಾಹಿತಿಯೂ ಸಿಗುತ್ತದೆ. ಇದರಿಂದಾಗಿ ಪ್ರಯಾಣಿಕರು ಉತ್ತಮ ರೀತಿಯಲ್ಲಿ ಬಸ್‌ ಸೇವೆ ಪಡೆಯಲು ಸಾಧ್ಯವಾಗಲಿದೆ.

ಮೈಸೂರು ನಗರಕ್ಕೆ ಸೀಮಿತವಾಗಿ ಜಾರಿ:

ಬಸ್‌ ಮಾನಿಟರಿಂಗ್ ವ್ಯವಸ್ಥೆಯನ್ನು ಕೆಎಸ್ಸಾರ್ಟಿಸಿ ಸದ್ಯ ಮೈಸೂರಿನಲ್ಲಿ ಜಾರಿಗೊಳಿಸಿದೆ. ಇಂಟೆಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಂ ಅಡಿ ಈ ವ್ಯವಸ್ಥೆ ಜಾರಿಯಲ್ಲಿದ್ದು, ಕೇವಲ 2 ಸಾವಿರ ಬಸ್‌ಗಳನ್ನು ಮಾತ್ರ ಮಾನಿಟರ್‌ ಮಾಡುವ ವ್ಯವಸ್ಥೆ ಅಲ್ಲಿದೆ. ಅದು ಕೂಡ ವೇಗದೂತ ಬಸ್‌ಗಳ ಮೇಲೆ ನಿಗಾವಹಿಸಲಾಗುತ್ತಿದೆ. ಆದರೆ, ಜಾರಿಗೊಳಿಸಲು ಉದ್ದೇಶಿಸಲಾಗಿರುವ ನೂತನ ವ್ಯವಸ್ಥೆಯಿಂದ ಸಾಮಾನ್ಯ ಸಾರಿಗೆಯಿಂದ ಲಕ್ಷುರಿ ಬಸ್‌ಗಳ ಮೇಲೂ ನಿಗಾವಹಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ.

ಈಗಾಗಲೇ ರೈಲ್ವೆ ಇಲಾಖೆಯು ರೈಲು ಯಾವ ನಿಲ್ದಾಣದಲ್ಲಿದೆ ಎಂಬ ಕುರಿತು ನಿಖರ ಮಾಹಿತಿ ನೀಡುವ ಪ್ಯವಸ್ಥೆ ಜಾರಿಗೆ ತಂದಿದೆ. ಇದು ಅನಗತ್ಯವಾಗಿ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುವುದನ್ನು ತಪ್ಪಿಸುತ್ತದೆ.