ವಿಎಒ ಪರೀಕ್ಷಾ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮೊಬೈಲ್ ಬಳಸಿ ಪರೀಕ್ಷೆ ಬರೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಶಂಕರ್ ಬನ್ನೂರು ಅಂದು ಪರೀಕ್ಷಾ ಕೇಂದ್ರಕ್ಕೆ ಬಂದೇ ಇರಲಿಲ್ಲ ಎಂದು ಸಹಪರೀಕ್ಷಾರ್ಥಿಯೊಬ್ಬ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ.

ಹಾವೇರಿ: ವಿಎಒ ಪರೀಕ್ಷಾ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮೊಬೈಲ್ ಬಳಸಿ ಪರೀಕ್ಷೆ ಬರೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಶಂಕರ್ ಬನ್ನೂರು ಅಂದು ಪರೀಕ್ಷಾ ಕೇಂದ್ರಕ್ಕೆ ಬಂದೇ ಇರಲಿಲ್ಲ ಎಂದು ಸಹಪರೀಕ್ಷಾರ್ಥಿಯೊಬ್ಬ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ.

ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದೇವೆ ಎನ್ನುವ ಸತೀಶ್ ಲಮಾಣಿ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಈ ಗಂಭೀರ ಆರೋಪ ಮಾಡಿದ್ದಾನೆ. ಶಂಕರ್ ಬನ್ನೂರು ಹೆಸರಿನಲ್ಲಿ ನಿಗದಿಯಾಗಿದ್ದ ರಿಜಿಸ್ಟರ್ ಸಂಖ್ಯೆಯ ಆಸನ ಪರೀಕ್ಷಾ ಕೊಠಡಿಯಲ್ಲಿ ಖಾಲಿ ಇತ್ತು. ಅಂದು ಶಂಕರ್ ಬನ್ನೂರು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರೆ, ಅದಕ್ಕೆ ಸಾಕ್ಷಿಯಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾನೆ.

ಕರ್ನಾಟ ಪರೀಕ್ಷಾ ಪ್ರಾಧಿಕಾರ (ಕೆಇಎ) ನೀಡಿರುವ ಮಾಹಿತಿಯಲ್ಲಿ ಶಂಕರ್ ಬನ್ನೂರು ಪರೀಕ್ಷಾ ವೇಳೆ ಮೊಬೈಲ್ ಬಳಸಿ ಅಕ್ರಮವಾಗಿ ಉತ್ತರ ಬರೆದಿದ್ದಾರೆ ಎಂಬ ಆರೋಪವಿದೆ. ಜಿಲ್ಲಾಡಳಿತದ ಮಾಹಿತಿಯಲ್ಲಿಯೂ ಇದೇ ಅಂಶ ಉಲ್ಲೇಖಿಸಿ ಪ್ರಕರಣ ದಾಖಲಿಸಿದೆ. ಆದರೆ, ಇದೀಗ ಅದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾಗಿ ಹೇಳುತ್ತಿರುವ ಅಭ್ಯರ್ಥಿಯೇ ಶಂಕರ್ ಬನ್ನೂರು ಅಂದು ಕೊಠಡಿಯಲ್ಲಿ ಇರಲಿಲ್ಲ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಎಒ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಿರುವವರ ವಿರುದ್ಧವೂ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಆರೋಪಿ ಶಂಕರ್ ಬನ್ನೂರು ಪರೀಕ್ಷೆಗೆ ಹಾಜರಾಗಿದ್ದಾನೋ ಇಲ್ಲವೋ ಎಂಬ ಬಗ್ಗೆ ಸಿಸಿಟಿವಿ ದೃಶ್ಯಾವಳಿ, ಪರೀಕ್ಷಾರ್ಥಿಗಳ ಸಹಿ ಹಾಗೂ ಮುಖಚಹರೆ ಗುರುತಿಸುವಿಕೆ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆ. ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಸಹಪರೀಕ್ಷಾರ್ಥಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಶಂಕರ ಬನ್ನೂರ ಪರೀಕ್ಷೆಗೆ ಬಂದೇ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದೆ. ಆರೋಪ ಮಾಡಿದವರನ್ನು ವಿಚಾರಣೆಗೆ ಕರೆಯಲಾಗುವುದು. ಅವರು ತಮ್ಮ ಆರೋಪಕ್ಕೆ ಪೂರಕವಾದ ಸೂಕ್ತ ಸಾಕ್ಷ್ಯ ಒದಗಿಸಿದರೆ ತನಿಖೆ ನಡೆಸಲಾಗುವುದು. ಇಲ್ಲವಾದಲ್ಲಿ ಸುಳ್ಳು ಆರೋಪ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು ಎಂದರು.

ನಾಲ್ವರಿಗೆ ನೋಟಿಸ್‌: ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಪ್ರಾಂಶುಪಾಲರು ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಲಾಗಿದೆ. ಪ್ರಾಂಶುಪಾಲರಾದ ರಮಾಕಾಂತ ಭಟ್, ಬಸವರಾಜ ಸವದಿ, ರಾಜು ದೆಂಡೆಪ್ಪನವರ ಸೇರಿದಂತೆ ನಾಲ್ವರು ಕರ್ತವ್ಯಲೋಪ ಎಸಗಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ. ಸಂಬಂಧಪಟ್ಟ ಆಡಳಿತ ಮಂಡಳಿಯು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸರ್ಕಾರವೇ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅವರನ್ನು ಅಮಾನತುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು: ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿ, ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವಕಾಶ ನೀಡಿದ ಪೊಲೀಸ್ ಸಿಬ್ಬಂದಿಯ ಕರ್ತವ್ಯಲೋಪದ ಕುರಿತು ಡಿವೈಎಸ್ಪಿ ವರದಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇತರ ಇಬ್ಬರ ವಿರುದ್ಧ ಶಿಸ್ತುಕ್ರಮ ಆರಂಭಿಸಲಾಗಿದೆ. ಶಿಗ್ಗಾಂವಿ ಪೊಲೀಸ್ ಠಾಣೆಯ ಸಿ.ಎ. ಮರೆಣ್ಣನವರ, ವಿ.ಸಿ. ಹೊನ್ನಾಳ್ಳಿ, ಸವಣೂರು ಪೊಲೀಸ್ ಠಾಣೆಯ ಆರ್.ಎಂ. ಮಣಕವಾಡ, ಆಡೂರು ಪೊಲೀಸ್ ಠಾಣೆಯ ಎಸ್.ಆರ್. ನಾಗನೂರು ಎಂಬ ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ ಎಂದರು.

ಶಂಕರ ಬನ್ನೂರ ಪರೀಕ್ಷಾ ಕೊಠಡಿಗೆ ಬಂದಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅನಿಲ್ ಕಾಂಬ್ಳೆ ಹಾಗೂ ಸತೀಶ್ ಲಮಾಣಿ ಅವರನ್ನು ವಿಚಾರಣೆ ನಡೆಸಲಾಗುವುದು ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯೊಳಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಪರೀಕ್ಷಾ ಕೊಠಡಿಯ ಸಿಸಿಟಿವಿ ಪೂರೈಕೆದಾರ ಸಂಸ್ಥೆಗೆ ಪತ್ರ ಬರೆಯಲಾಗುವುದು. ತಾಂತ್ರಿಕ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕವೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.