ಸಾರಾಂಶ
ರಾಯಚೂರು: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯ ಸಮಿತಿಯಿಂದ ಅ.26 ಮತ್ತು 27 ರಂದು ಮೈಸೂರಿನಲ್ಲಿ 4 ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಯಾದಗಿರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ನಡೆಸುತ್ತಿರುವ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳು, ಬಂಡವಾಳ ಶಾಹಿಪರ ಆಡಳಿತದಿಂದಾಗಿ ಕಾರ್ಮಿಕರ ಬದುಕು ದಿನೇ ದಿನೆ ದುಸ್ತರಗೊಳ್ಳುತ್ತ ಸಾಗಿದೆ. ಬೆಲೆ ಏರಿಕೆಯ ಸಮಾಜದಲ್ಲಿ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ, ಭದ್ರತೆ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿದ್ದು ಈ ಎಲ್ಲ ವಿಷಯಗಳನ್ನು ಎರಡು ದಿನಗಳ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು.ಸಮ್ಮೇಳನವನ್ನು ಎಐಯುಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಕೆ.ರಾಧಾಕೃಷ್ಣ ಉದ್ಘಾಟಿಸಲಿದ್ದು, ಪ್ರಧಾನ ಕಾರ್ಯದರ್ಶಿ ಶಂಕರ ವಾಸ್ ಮುಖ್ಯ ಭಾಷಣವನ್ನು ನೆರವೇರಿಸಲಿದ್ದಾರೆ. ಸಂಘಟನೆ ರಾಜ್ಯಾಧ್ಯಕ್ಷ ಕೆ.ಸೋಮಶೇಖರ, ಮುಖಂಡರಾದ ಚಂದ್ರಶೇಖರ, ಉಗ್ರನರಸಿಂಹೇಗೌಡ, ಪ್ರೊ.ಕಾಳಚನ್ನೇಗೌಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಮಹೇಶ ಚೀಕಲಪರ್ವಿ, ಅಣ್ಣಪ್ಪ, ಇತರರು ಇದ್ದರು.