ಸಾರಾಂಶ
ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ: ದೀಪಾವಳಿ ಅಂದರೆ ಅದು ಬರೀ ಪಟಾಕಿ, ಬಾಣ, ಬಿರುಸುಗಳ ಸದ್ದಲ್ಲ. ಅದರಾಚೆಯೂ ಸಾಂಪ್ರದಾಯಿಕ ವಿಶಿಷ್ಟ ಆಚರಣೆ ಇದೆ. ಬಂಜಾರ ಸಮುದಾಯದವರು ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ದೀಪಾವಳಿಯು ಬಂಜಾರ ಸಮುದಾಯದ ಯುವತಿಯರ ಹಬ್ಬವೆಂದೂ ಕರೆಯುತ್ತಾರೆ.ದೀಪಾವಳಿ ಹಬ್ಬಕ್ಕೆ ಬಂಜಾರ ಸಮುದಾಯದಲ್ಲಿ ಅದರದೇ ಆದ ವಿಶಿಷ್ಟ ಸಂಪ್ರದಾಯವಿದೆ. ಲಂಬಾಣಿ ಭಾಷೆಯಲ್ಲಿ ಈ ಹಬ್ಬಕ್ಕೆ ‘ಮೇರಾ’ ಎನ್ನುತ್ತಾರೆ. ತಾಂಡಾದ ಯುವತಿಯರು ಸೇರಿಕೊಂಡು ಮನೆಮನೆಗೆ ಹೋಗಿ ಹಾಡಿನ ಮೂಲಕ ಹಾರೈಸುತ್ತಾರೆ. ಅಪ್ಪ, ಅಣ್ಣ, ಅಕ್ಕ, ಚಿಕ್ಕಪ್ಪ, ತಾಂಡಾದ ನಾಯಕ, ಕುಲದೇವರು... ಹೀಗೆ ಎಲ್ಲರ ಹೆಸರನ್ನು ಹೇಳಿ ‘ತೋನ ಮೇರಾ’ ಎಂದು ಹೇಳುತ್ತಾರೆ.ಸಂಪ್ರದಾಯ ಹೇಗೆ?: ತಮ್ಮ ಪೂರ್ವಜರನ್ನು ಸ್ಮರಿಸುವ ಪೂಜಿಸುವ ಸಂಪ್ರದಾಯವು ಜಗತ್ತಿನ ಎಲ್ಲ ಸಮುದಾಯಗಳಲ್ಲೂ ಇದೆ. ಆದರೆ ಬಂಜಾರ ಸಮುದಾಯದಲ್ಲಿ ಇದಕ್ಕೆ ದೊಡ್ಡ ಸ್ಥಾನವಿದೆ. ಲಂಬಾಣಿಗರು ಸುಮಾರು 500 ವರ್ಷಗಳ ಹಿಂದೆ ದೇಶದ ವಿವಿಧ ಭಾಗಗಳಿಗೆ ಚೆದುರಿದ್ದಾರೆ. ಕರ್ನಾಟಕ ಭಾಗದಲ್ಲೇ ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಊರಿನಿಂದ ಹೊರಗೆ ಇರುವ ಈ ತಾಂಡಾಗಳೇ ಈಗ ಈ ಸಮುದಾಯ ಹಾಗೂ ಸಂಪ್ರದಾಯದ ಜೀವಂತ ಪುಟಗಳಾಗಿವೆ.
ಕಾಳಿ ಮಾಸ್: ದೀಪಾವಳಿಯ ಮೊದಲನೆಯ ದಿನವಾದ ಅಮಾವಾಸ್ಯೆಯಂದು "ಕಾಳಿ ಮಾಸ್ " ಎಂದು ಕರೆಯುವುದರಿಂದ ಮರಿಯಮ್ಮ ದೇವಿಯ ಅವತಾರಗಳಲ್ಲಿ ಒಂದಾದ ಕಾಳಿ ದೇವಿಗೆ ಬಲಿ ಕೊಡುವುದು ಪಾರಂಪರಿಕ ರೂಢಿ. ಕಾಳಿ ದೇವಿಗೆ ಹಾಗೂ ಲಂಬಾಣಿ ಸಮುದಾಯವನ್ನು ರಕ್ಷಿಸುತ್ತಿರುವ ಅನೇಕ ದೈವಗಳಿಗೂ ಬಲಿ ಅರ್ಪಿಸುವುದು ವಾಡಿಕೆ.ಮೇರಾ ಸಂಭ್ರಮ: ತಾಂಡಾದ "ನಾಯಕ್ " ಮನೆಗೆ ಹೋಗಿ ದೀಪಗಳನ್ನು ಹಿಡಿದು ಹಾಡುತ್ತಾ "ನಾಯಕ್ " ಅವರ ಅಪ್ಪಣೆ ಪಡೆದು ನಂತರ ಬೇರೆ ಮನೆಗಳಿಗೆ ಹೋಗುತ್ತಾರೆ. ಬಂಜಾರ ಸಮುದಾಯ ಕನ್ಯೆಯರನ್ನು ತಮ್ಮ ಮನೆಯ ಬೆಳದಿಂಗಳು ಎಂದು ಪರಿಗಣಿಸುತ್ತಾರೆ. ಯುವತಿಯರು ಹಾಡು ಹೇಳುತ್ತಾ ಹೋಗುವಾಗ ಮನೆಯ ಹಿರಿಯರು ಅವರನ್ನು ಸ್ವಾಗತಿಸುತ್ತಾರೆ. ಕತ್ತಲೆಯಿಂದ ಬೆಳಕಿನೆಡೆಗೆ ಬರುವ ಪ್ರಕ್ರಿಯೆಯನ್ನೇ ಲಂಬಾಣಿ ಭಾಷೆಯಲ್ಲಿ ಮೇರಾ ಎನ್ನುತ್ತಾರೆ.ಧಬುಕಾರ್ ಕಾರ್ಯಕ್ರಮ: ದೀಪಾವಳಿಯ 2ನೇ ದಿನವನ್ನು ಹಿರಿಯರ ಹಬ್ಬ ಎಂದೇ ಕರೆಯಲಾಗುತ್ತದೆ. ಒಲೆಯನ್ನು ಸ್ವಚ್ಛಗೊಳಿಸಿ ಅದರಲ್ಲಿ ಕೆಂಡ ಹಾಕಿ ಸಿಹಿ ಖಾದ್ಯದ ಜತೆಗೆ ತುಪ್ಪ ಹಾಕಿ ಮನೆ ಮಂದಿಯೆಲ್ಲ ಪ್ರಾರ್ಥಿಸುತ್ತಾ ಅಗಲಿದ ಹಿರಿಯರನ್ನು ಅಂದರೆ ಮೃತರಾದ ಹತ್ತಾರು ತಲೆಮಾರಿನವರನ್ನು ಸ್ಮರಿಸಿ ಆಶೀರ್ವಾದ ಪಡೆಯುತ್ತಾರೆ. ಅವರು ಇಷ್ಟಪಡುತ್ತಿದ್ದ ಪದಾರ್ಥಗಳನ್ನು ತಯಾರಿಸಿ ನೈವೇದ್ಯ ಇಟ್ಟು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಲಂಬಾಣಿ ಭಾಷೆಯಲ್ಲಿ “ಧಬುಕಾರ್” ಎಂದು ಕರೆಯುತ್ತಾರೆ.
ಬಲಿಪಾಡ್ಯ ದಿನದಂದು ತಾಂಡಾದ ಯುವತಿಯರು ಬಣ್ಣ ಬಣ್ಣದ ಹೂವುಗಳನ್ನು ಬಿದಿರಿನ ಬುಟ್ಟಿಯಲ್ಲಿ ತಂದು ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಾಲಯ, ಮರಿಯಮ್ಮದೇವಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ಅರ್ಪಿಸುತ್ತಾರೆ. ಬಂಜಾರ ಸಮುದಾಯ ಇಂದಿಗೂ "ದವಾಳಿ " ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನ ಮಕ್ಕಳಿಗೆ ಬಂಜಾರ ಸಂಸ್ಕೃತಿಯ ಕುರಿತು ಮನವರಿಕೆ ಮಾಡುವುದರೊಂದಿಗೆ ಈ ಪರಂಪರೆ ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡಲಾಗುತ್ತದೆ ಎನ್ನುತ್ತಾರೆ ಲಂಬಾಣಿ ಸಮುದಾಯ ಹಿರಿಯರು.