ಶಿರಸಂಗಿ ಲಿಂಗರಾಜರಿಂದ ಸಮಾಜಕ್ಕೆ ಅದ್ವಿತೀಯ ಕೊಡುಗೆ-ಮಾಳವಾಡ

| Published : Jan 12 2025, 01:17 AM IST

ಶಿರಸಂಗಿ ಲಿಂಗರಾಜರಿಂದ ಸಮಾಜಕ್ಕೆ ಅದ್ವಿತೀಯ ಕೊಡುಗೆ-ಮಾಳವಾಡ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಐತಿಹಾಸಿಕ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲಬಲ್ಲ ಶ್ರೇಷ್ಠ ವ್ಯಕ್ತಿತ್ವವಾಗಿರುವ ಶಿರಸಂಗಿ ಲಿಂಗರಾಜರಿಂದ ಸಮಾಜಕ್ಕೆ ಅದ್ವಿತೀಯ ಕೊಡುಗೆ ಸಮರ್ಪಿತವಾಗಿರುವುದು ದಾಖಲೆಯ ವಿಷಯವಾಗಿದೆ ಎಂದು ಹುಬ್ಬಳ್ಳಿ ಕೆಎಲ್‌ಇ ಪಿ.ಸಿ. ಜಾಬೀನ್ ಕಾಲೇಜಿನ ನಿವೃತ್ತ ಗ್ರಂಥಪಾಲಕ ಬಿ. ಎಸ್. ಮಾಳವಾಡ ಹೇಳಿದರು.

ಹಾವೇರಿ: ದೇಶದ ಐತಿಹಾಸಿಕ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲಬಲ್ಲ ಶ್ರೇಷ್ಠ ವ್ಯಕ್ತಿತ್ವವಾಗಿರುವ ಶಿರಸಂಗಿ ಲಿಂಗರಾಜರಿಂದ ಸಮಾಜಕ್ಕೆ ಅದ್ವಿತೀಯ ಕೊಡುಗೆ ಸಮರ್ಪಿತವಾಗಿರುವುದು ದಾಖಲೆಯ ವಿಷಯವಾಗಿದೆ ಎಂದು ಹುಬ್ಬಳ್ಳಿ ಕೆಎಲ್‌ಇ ಪಿ.ಸಿ. ಜಾಬೀನ್ ಕಾಲೇಜಿನ ನಿವೃತ್ತ ಗ್ರಂಥಪಾಲಕ ಬಿ. ಎಸ್. ಮಾಳವಾಡ ಹೇಳಿದರು.ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಪದವಿ, ಪದವಿಪೂರ್ವ, ಬಿಸಿಎ ಮತ್ತು ಎಂ.ಕಾಂ. ಸ್ನಾತಕೋತ್ತರ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೃಷಿ, ಸಮಾಜ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸಾರಕ್ಕಿಂತ ಸಂಸ್ಕಾರ ದೊಡ್ಡದು. ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬುದನ್ನು ಮನಗಂಡ ಲಿಂಗರಾಜರು ತಮ್ಮ ಸರ್ವಸ್ವವನ್ನೂ ಸಮಾಜಕ್ಕರ್ಪಿಸಿ ಚಿರಸ್ಥಾಯಿಯಾಗುಳಿದವರು. ಸಮಾಜದ ಆಶೋತ್ತರಗಳಿಗೆ ಸ್ಪಂದಿಸಿ ಜನೋಪಯೋಗಿ ಕಾರ್ಯಯೋಜನೆಗಳನ್ನು ನಿರೂಪಿಸಿ ಕೃಷಿ ಸಂಶೋಧನೆ, ಕೆರೆ-ಕಟ್ಟೆಗಳ ನಿರ್ಮಾಣ, ಕಂದಾಯ ಸಂಗ್ರಹಣೆ, ಕಲಿಕಾರ್ಥಿಗಳಿಗೆ ಪ್ರೋತ್ಸಾಹ ಧನ, ಬಡವರಿಗೆ-ನಿರ್ಗತಿಕರಿಗೆ ಅನ್ನ-ಆಹಾರಗಳನ್ನು ನೀಡಿದ್ದಲ್ಲದೇ ಕೆಎಲ್‌ಇ ಸಂಸ್ಥೆಯ ಮಹಾದಾನಿಗಳಾಗಿರುವುದು ಆದರ್ಶನೀಯವಾದುದು. ದೂರದೃಷ್ಠಿ, ಅಭಿವೃದ್ಧಿಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಲಿಂಗರಾಜರು ಅಖಂಡ ವೀರಶೈವ ಸಮಾಜವನ್ನು ಸಂಘಟನೆಗೊಳಿಸುವಲ್ಲಿ ಹಗಲಿರುಳು ಶ್ರಮಿಸಿದವರು. ಅವರ ನೆನಹು-ನಮನ ಪ್ರಸ್ತುತ ಎಂದರು. ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ ಮಾತನಾಡಿ, ಶಿರಸಂಗಿ ಲಿಂಗರಾಜರು ತಮ್ಮ ವಯಕ್ತಿಕ ಜೀವನವನ್ನು ಬದಿಗಿಟ್ಟು ಸಮಾಜದ ಬಗ್ಗೆ ಅಪಾರವಾದ ಕಳಕಳಿಯುಕ್ತ ಕಾರ್ಯಗಳನ್ನು ಸಾಕಾರಗೊಳಿಸಿದ್ದು ಎಂದಿಗೂ ಸ್ಮರಣೀಯವಾದುದು. ತ್ಯಾಗ ಮತ್ತು ದಾನದಿಂದಲೇ ಹೆಸರಾಗಿರುವ ಅವರು ಸಮಾಜದ ಅಭ್ಯುದಯ ಬಯಸಿದವರು. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯಸಾಧನೆ ಮಾಡಿದ್ದು ಅವರ ಜೀವತ ಕಾಲದ ಮಹತ್ತರ ಕೊಡುಗೆ. ಅವರ ಅಗಲಿಕೆಯ ನಂತರವೂ ಸಾಕಷ್ಟು ಕಾರ್ಯಗಳು ಪ್ರಗತಿಗೆ ಬಂದಿರುವುದು ಸ್ತುತ್ಯಾರ್ಹ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಜೆ.ಎಸ್. ಅರಣಿ ವಹಿಸಿದ್ದರು. ಪದವಿಪೂರ್ವ ಪ್ರಾಚಾರ್ಯ ಡಾ. ಜೆ. ಆರ್. ಶಿಂಧೆ ಸ್ವಾಗತಿಸಿದರು. ಪ್ರೊ. ಡಿ.ಎ. ಕೊಲ್ಲಾಪುರೆ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಎಸ್.ಜಿ. ಹುಣಸಿಕಟ್ಟಿಮಠ ನಿರ್ವಹಿಸಿದರು. ಕಾಲೇಜು ಸಾಂಸ್ಕೃತಿಕ ಒಕ್ಕೂಟದ ಪ್ರೊ. ಜಿ.ಕೆ. ಮಂಕಣಿ ವಂದಿಸಿದರು.