ಮೈಸೂರು ರೇಲ್ವೆ ವಿಭಾಗವು ಅತ್ಯಧಿಕ ಆದಾಯ1,451.9 ಕೋಟಿ ಗಳಿಕೆಯ ಐತಿಹಾಸಿಕ ಸಾಧನೆ

| N/A | Published : Feb 13 2025, 12:50 AM IST / Updated: Feb 13 2025, 12:44 PM IST

ಸಾರಾಂಶ

ಬೆಂಗಳೂರು ವಿಭಾಗದೊಂದಿಗೆ ಒಟ್ಟಾರೆ ಕಾರ್ಯಕ್ಷಮತೆಯ ಫಲಕ ಹಂಚಿಕೊಂಡ ಮೈಸೂರು ವಿಭಾಗವು ಹಣಕಾಸು, ವಾಣಿಜ್ಯ, ವೈದ್ಯಕೀಯ ಮತ್ತು ಕಾರ್ಯನಿರ್ವಹಣಾ (ಆಪರೇಟಿಂಗ್) ವಿಭಾಗಗಳಲ್ಲೂ ಸಹ ಕಾರ್ಯಕ್ಷಮತೆ ಪ್ರಶಸ್ತಿಗಳನ್ನು ಗೆದ್ದಿದೆ

 ಮೈಸೂರು : ಮೈಸೂರು ರೇಲ್ವೆ ವಿಭಾಗವು 2023-24 ಆರ್ಥಿಕ ವರ್ಷದಲ್ಲಿ ಅತ್ಯಧಿಕ ಆದಾಯವಾದ 1,451.9 ಕೋಟಿ ರು. ಗಳಿಕೆಯ ಐತಿಹಾಸಿಕ ಸಾಧನೆ

ಸಾಧಿಸಿ, ವಲಯದ ಒಟ್ಟಾರೆ ಕಾರ್ಯಕ್ಷಮತೆ ಫಲಕವನ್ನು ಜಂಟಿಯಾಗಿ ವಿಜೇತರಾಗಿ ಗಳಿಸಿದೆ. ಜೊತೆಗೆ ವಿಭಾಗದ ಹಲವಾರು ಶಾಖೆಗಳು ಕಾರ್ಯಕ್ಷಮತೆಗಾಗಿ ಪ್ರತ್ಯೇಕ ಫಲಕಗಳನ್ನು ಸಹ ಗಳಿಸಿವೆ.

ಒಟ್ಟಾರೆ ಕಾರ್ಯಕ್ಷಮತೆಯ ಫಲಕವನ್ನು ನೈಋತ್ಯ ರೇಲ್ವೆಯ ಮಹಾಪ್ರಬಂಧಕರಾದ ಅರವಿಂದ್ ಶ್ರೀವಾಸ್ತವ ಅವರು ಸೋಮವಾರ ಹಬ್ಬಳ್ಳಿಯಲ್ಲಿ ನಡೆದ ವಿಶಿಷ್ಟ ರೈಲ್ವೆ ಸೇವಾ ಪುರಸ್ಕಾರ ಸಮಾರಂಭದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೇಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಅವರಿಗೆ ಪ್ರದಾನ ಮಾಡಿದರು.

ಬೆಂಗಳೂರು ವಿಭಾಗದೊಂದಿಗೆ ಒಟ್ಟಾರೆ ಕಾರ್ಯಕ್ಷಮತೆಯ ಫಲಕ ಹಂಚಿಕೊಂಡ ಮೈಸೂರು ವಿಭಾಗವು ಹಣಕಾಸು, ವಾಣಿಜ್ಯ, ವೈದ್ಯಕೀಯ ಮತ್ತು ಕಾರ್ಯನಿರ್ವಹಣಾ (ಆಪರೇಟಿಂಗ್) ವಿಭಾಗಗಳಲ್ಲೂ ಸಹ ಕಾರ್ಯಕ್ಷಮತೆ ಪ್ರಶಸ್ತಿಗಳನ್ನು ಗೆದ್ದಿದೆ. ಜೊತೆಗೆ, ಅಂತರ-ವಿಭಾಗೀಯ ಸುರಕ್ಷತಾ ಫಲಕ ಮತ್ತು ವಿದ್ಯುತ್ ಟ್ರಾಕ್ಷನ್ ವಿತರಣಾ ಫಲಕ ಸಹ ಪಡೆದುಕೊಂಡಿದೆ. ಅಷ್ಟೆ ಅಲ್ಲದೆ, ರೈಲು ಗಾಡಿ ಸಂಖ್ಯೆ 16217 ಮತ್ತು 16218 (ಮೈಸೂರು-ಶಿರಡಿ ಸಾಯಿನಾಗರ್-ಮೈಸೂರು) ರೈಲಿನ ರೇಕ್ ಅನ್ನು ನೈಋತ್ಯ ರೇಲ್ವೆಯಲ್ಲಿ ಅತ್ಯುತ್ತಮವಾಗಿ ನಿರ್ವಹಿಸಿದ ರೇಕ್ ಎಂದು ಗುರುತಿಸಲಾಗಿದೆ.

ಮೈಸೂರು ನಿಯಂತ್ರಣ ಕಚೇರಿಯಲ್ಲಿ ಪ್ರಯಾಣಿಕರ ಅನುಭವ ಉನ್ನತೀಕರಣಕ್ಕಾಗಿ ಆರಂಭಿಸಲಾದ ವಿನೂತನ ಯೋಜನೆಯಾದ ರೈಲು ಸಹಾಯವಾಣಿಗಾಗಿ ಸ್ಥಾಪಿತವಾದ ರೈಲ್ ಮದದ್ ವಾರ್ ರೂಮ್’ ಶ್ಲಾಘನೀಯ ಪ್ರಶಂಸೆಗೆ ಪಾತ್ರವಾಯಿತು. ಇದನ್ನು ಪ್ರಯಾಣಿಕರ ದೂರುಗಳ ತ್ವರಿತ ಪರಿಹಾರಕ್ಕೆ ಹಾಗೂ ಕಾಯ್ದಿರಿಸಲಾದ ಕೋಚ್‌ ಗಳಲ್ಲಿ ಆಗುವ ಗೊಂದಲ ತಪ್ಪಿಸಲು ಸ್ಥಾಪಿಸಲಾಗಿದೆ. ಅಶೋಕಪುರಂನ ಮೈಸೂರು ಕೇಂದ್ರೀಯ ರೈಲು ಕಾರ್ಯಗಾರವು ಸಿಬ್ಬಂದಿ ತರಬೇತಿಯ ಉತ್ಕೃಷ್ಟ ಸಾಧನೆಗಾಗಿ ಪ್ರಶಸ್ತಿಯನ್ನು ಗಳಿಸಿದೆ.

ನೂತನ ಅನ್ವೇಷಣಾ ವಿಭಾಗದಲ್ಲಿ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ರಾದ ಭೇಶ್ ದತ್ ಅವರು ರೈಲಿನ ಶೌಚಾಲಯದಲ್ಲಿ ಕಡಿಮೆ ವೆಚ್ಚದ ಸಿಂಗಲ್ ಬ್ಯಾರಲ್ ಪ್ರೆಷರ್ ಸಿಲಿಂಡರ್ ಫ್ಲಷಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಕ್ಕಾಗಿ ಪ್ರಶಸ್ತಿ ಪಡೆದರು.

ಇದರೊಂದಿಗೆ, ಇಬ್ಬರು ಅಧಿಕಾರಿಗಳು ಮತ್ತು ಹದಿಮೂರು ಸಿಬ್ಬಂದಿ 2023-24 ಆರ್ಥಿಕ ವರ್ಷದಲ್ಲಿ ಅದ್ಬುತ ಸೇವೆಗಾಗಿ ಗೌರವಿಸಲಾಯಿತು.

ಸರಕು ಆದಾಯದಲ್ಲಿ 993.52 ಕೋಟಿಗಳಿಕೆ

ಹಲವಾರು ಸವಾಲುಗಳ ಹೊರತಾಗಿಯೂ, ಮೈಸೂರು ವಿಭಾಗವು 2023-24ನೇ ಆರ್ಥಿಕ ವರ್ಷದಲ್ಲಿ ಸರಕು ಆದಾಯದಲ್ಲಿ 993.52 ಕೋಟಿ ರು. ಗಳಿಸಿ ಅತ್ಯುತ್ತಮ ವರ್ಷಾನುಗತ ಬೆಳವಣಿಗೆ ತೋರಿಸಿತು. ವಿಭಾಗವು 11.649 ಮಿಲಿಯನ್ ಟನ್ ಸರಕನ್ನು ಸಾಗಾಣೆ ಮಾಡಿದ್ದು, ಇದರ ಹಿಂದೆ ವ್ಯಾಪಾರ ಅಭಿವೃದ್ಧಿ ಘಟಕದ (ಬಿಡಿಯು) ನಿರಂತರ ದುಡಿಮೆ ಮತ್ತು ಮಾರುಕಟ್ಟೆ ತಂತ್ರಜ್ಞಾನಗಳ ಉಪಯೋಗದ ಪಾತ್ರ ಪ್ರಮುಖವಾಗಿದೆ. ಕಬ್ಬಿಣದ ಅದಿರು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಮೆಕ್ಕೆಜೋಳವನ್ನು ದೂರದ ಸ್ಥಳಗಳಿಗೆ ಸಾಗಿಸುವ ಮೂಲಕ, 2022-23 ರ ಸಾಲಿನ ಸರಕು ಆದಾಯವನ್ನು ಮೀರಿಸಿ ಈ ದಾಖಲೆಯನ್ನು ಸಾಧಿಸುವುದು ಸಾಧ್ಯವಾಯಿತು.

ಪ್ರಯಾಣಿಕ ವಿಭಾಗದಲ್ಲಿ, 33.09 ದಶಲಕ್ಷ ಪ್ರಯಾಣಿಕರು ವಿಭಾಗದ ನಿಲ್ದಾಣಗಳಿಂದ ಪ್ರಯಾಣಿಸಿ ವಿಭಾಗವು ರು. 413.63 ಕೋಟಿ

ಆದಾಯ ಗಳಿಸಿದೆ. ನಿರಂತರ ಸುರಕ್ಷೆ ಉನ್ನತ್ತೀಕರಣ ಕಾರ್ಯಗಳು ಹಾಗೂ ವಿದ್ಯುದ್ದೀಕರಣ ಯೋಜನೆಗಳ ನಡುವೆಯೂ ಮೈಸೂರು

ವಿಭಾಗವು ಎಕ್ಸ್ ಪ್ರೆಸ್ ವಿಭಾಗದಲ್ಲಿ ಶೇ. 96.32 ಮತ್ತು ಪ್ರಯಾಣಿಕ ರೈಲುಗಳ ವಿಭಾಗದಲ್ಲಿ ಶೇ. 96.83 ಸಮಯಪಾಲನೆ ಕಾಯ್ದುಕೊಂಡ ಸಾಧನೆ ಮಾಡಿದೆ.

ಮೈಸೂರಿನ ವಿಭಾಗೀಯ ರೇಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರ ಕ್ರಿಯಾತ್ಮಕ ನೇತೃತ್ವದಲ್ಲಿ, ಪ್ರಯಾಣಿಕ ಅನುಭವ ಸುಧಾರಿಸಲು ಹಲವಾರು ಹೊಸ ಕಾರ್ಯಕ್ರಮಗಳು ಜಾರಿಗೆ ತರಲಾಯಿತು. ರೈಲು ಸಹಾಯವಾಣಿಯಾದ ‘ರೈಲ್ ಮದದ್ ವಾರ್ ರೂಮ್’ ಸ್ಥಾಪನೆ, ನಿರಂತರ ಪ್ರಯಾಣಿಕರ ಗೊಂದಲ ನಿವಾರಣಾ ಅಭಿಯಾನಗಳು, ಕಾಯ್ದಿರಿಸಿದ ಕೋಚ್ ಗಳಲ್ಲಿ ಜನಸಂದಣಿ ನಿವಾರಣೆ ಮತ್ತು ದೂರುಗಳ ತ್ವರಿತ ಪರಿಹಾರ ವ್ಯವಸ್ಥೆ ಮುಂತಾದ ಯೋಜನೆಗಳಿವೆ. ಈ ಪ್ರಯತ್ನಗಳಿಂದಾಗಿ ರೈಲು ಸಹಾಯವಾಣಿಗೆ ಬರುವ ದೂರುಗಳು, ರಜೆ ಸಮಯದ ಪ್ರಯಾಣಿಕರ ಹೆಚ್ಚಳದ ಹೊರತಾಗಿಯೂ 2024ರ ಜೂನ್‌ ನಲ್ಲಿದ್ದ 90ರ ಸಂಖ್ಯೆಯಿಂದ 2025ರ ಫೆಬ್ರವರಿ ವೇಳೆಗೆ 50ಕ್ಕೆ ಕಡಿಮೆಯಾಗಿವೆ ಮತ್ತು ಇದರಿಂದ ಪ್ರಯಾಣಿಕ ಸೇವೆ ಉತ್ತಮಗೊಂಡಿದೆ.

ಶಿಲ್ಪಿ ಅಗರವಾಲ್ ಅವರು ವಿಭಾಗವು ಪಡೆದಿರುವ ಹಲವಾರು ಕಾರ್ಯಕ್ಷಮತೆ ಫಲಕ ಮತ್ತು ಅನೇಕ ಇಲಾಖಾ ಫಲಕಗಳು ಪ್ರತಿಬಿಂಭಿಸಿರುವಂತೆ, ತಮ್ಮ ನಿರಂತರ ಪರಿಶ್ರಮಕ್ಕೆ ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಇನ್ನು ಮುಂದೆ ವಿದ್ಯುಧೀಕರಣ ಮತ್ತು ಉನ್ನತ್ತೀಕರಿಸಿದ ನಿಲ್ದಾಣಗಳಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪೂರ್ಣಗೊಳ್ಳುವಿಕೆಯಿಂದ ರೇಲ್ವೆ ವಿಭಾಗದ ಸಾಧನೆ ಮತ್ತಷ್ಟು ಮೇಲ್ಮಟ್ಟ ತಲುಪಲಿದೆ ಎಂದು ತಿಳಿಸಿ ಭವಿಷ್ಯದಲ್ಲಿನ ಶ್ರೇಷ್ಠತೆಗಾಗಿ ಮತ್ತಷ್ಟು ಹೊಸ ದಾಖಲಾತಿಗಳನ್ನು ನಿರ್ಮಿಸುವಂತೆ ಪ್ರೋತ್ಸಾಹಿಸಿದರು.