ಹೇಮಾವತಿ ಜಲಾಶಯವಾಗಲಿ, ಭದ್ರಾ ಜಲಾಶಯವಾಗಲಿ ಅಥವಾ ಕಾವೇರಿ ಜಲಾಶಯವಾಗಲಿ, ಯಾವುದೇ ಜಲಾಶಯದ ನೀರು ಹಂಚಿಕೆ ಮಾಡುವಾಗ ಮೊದಲು ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡಬೇಕು. ಜನರ ಮೂಲಭೂತ ಅಗತ್ಯವಾದ ಕುಡಿಯುವ ನೀರನ್ನು ಖಚಿತಪಡಿಸಿದ ನಂತರವೇ ಇತರ ಉದ್ದೇಶಗಳಿಗೆ ನೀರು ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದರು.
ಕನ್ನಡಪ್ರಭ ವಾರ್ತೆ ಶಿರಾ
ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಒತ್ತಾಯಿಸಿ ರೈತರ ಒಗ್ಗಟ್ಟಿನ ಹೋರಾಟ ವಿಧಾನಸೌಧದ ಕುರ್ಚಿಗಳನ್ನು ಅಲುಗಾಡಿಸುವಂತಿರಬೇಕು. ಹೋರಾಟದಲ್ಲಿ ಒಗ್ಗಟ್ಟು, ನಿರಂತರತೆ ಮತ್ತು ಬದ್ಧತೆ ಇದ್ದಾಗ ಮಾತ್ರ ಸರ್ಕಾರಗಳು ಎಚ್ಚೆತ್ತುಕೊಂಡು ರೈತರ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯ. ಕಾವೇರಿ ನೀರಿನ ವಿಚಾರ ಬಂದಾಗ ವಿಧಾನಸೌಧದ ಕುರ್ಚಿಗಳು ಅಲುಗಾಡುತ್ತವೆ. ಆದರೆ, ನೀರಿಲ್ಲದೆ ನರಳುತ್ತಿರುವ ಕೆರೆಗಳ ನೋವು ಆಡಳಿತ ವ್ಯವಸ್ಥೆಯನ್ನು ಅಲುಗಾಡಿಸುತ್ತಿಲ್ಲ. ಅದನ್ನು ಶಿರಾ ತಾಲೂಕಿನ ಜನತೆ ಅಲುಗಾಡುವಂತೆ ಮಾಡಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಒತ್ತಾಯಿಸಿ ಶಿರಾ ತಾಲೂಕು ಬರಗೂರು ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಹಾಗೂ ಹುಲಿಕುಂಟೆ ಹೋಬಳಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ವತಿಯಿಂದ ಭಾನುವಾರ ಬರಗೂರಿನ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ನಡೆದ ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟ ಕೇವಲ ರೈತರಿಗೆ ಸೀಮಿತವಾಗಬಾರದು. ರೈತರಲ್ಲದವರೂ ಸಹ ಈ ಹೋರಾಟಕ್ಕೆ ಧ್ವನಿಗೂಡಿಸಬೇಕು. ನೀರಿಗೆ ಯಾವುದೇ ಜಾತಿ, ಮತ, ಪಂಥಗಳಿಲ್ಲ. ನಿಜವಾದ ಅರ್ಥದಲ್ಲಿ ನೀರು ಜಾತ್ಯತೀತವಾದದ್ದು. ಹೀಗಾಗಿ ನೀರಿನ ಹಕ್ಕಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಹೋರಾಟಗಳಲ್ಲೂ ನಾನು ಸಕ್ರಿಯವಾಗಿ ಭಾಗವಹಿಸುತ್ತೇನೆಂದು ಭರವಸೆ ನೀಡಿದರು. ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮಾತನಾಡಿ ಸ್ವಾತಂತ್ರ್ಯ ಬಂದು ೮೦ ವರ್ಷ ಕಳೆದರೂ ದೇಶದ ಜನರಿಗೆ ಕುಡಿಯುವ ನೀರು ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಾಧ್ಯವಾಗಿಲ್ಲ. ದಶಕಗಳಿಂದ ಸರಕಾರಗಳು ತೋರಿರುವ ನಿರ್ಲಕ್ಷ್ಯದ ಪರಿಣಾಮ ಇಂದು ಬರದ ಪರಿಸ್ಥಿತಿ ತೀವ್ರಗೊಂಡಿದ್ದು, ಜನರು ಕುಡಿಯುವ ನೀರಿಗೂ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಜಲ ನೀತಿ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸ್ಪಷ್ಟ ನಿಲುವಿದೆ. ಆದರೆ, ವಾಸ್ತವದಲ್ಲಿ ಜನರಿಗೆ ಕುಡಿಯುವ ನೀರು ಒದಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು.ಹೇಮಾವತಿ ಜಲಾಶಯವಾಗಲಿ, ಭದ್ರಾ ಜಲಾಶಯವಾಗಲಿ ಅಥವಾ ಕಾವೇರಿ ಜಲಾಶಯವಾಗಲಿ, ಯಾವುದೇ ಜಲಾಶಯದ ನೀರು ಹಂಚಿಕೆ ಮಾಡುವಾಗ ಮೊದಲು ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡಬೇಕು. ಜನರ ಮೂಲಭೂತ ಅಗತ್ಯವಾದ ಕುಡಿಯುವ ನೀರನ್ನು ಖಚಿತಪಡಿಸಿದ ನಂತರವೇ ಇತರ ಉದ್ದೇಶಗಳಿಗೆ ನೀರು ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದರು.
ಪರಿಸರವಾದಿ ಡಿ.ವಿ.ಗುಂಡಪ್ಪ ಮಾತನಾಡಿ ಶಿರಾ ತಾಲೂಕು ಮಳೆ ಇಲ್ಲದೆ ಸತತ ಬರದಿಂದ ತತ್ತರಿಸಿದ್ದು, ಅಂತರ್ಜಲ ತೀವ್ರ ಕುಸಿತ ಕಂಡಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆದ್ದರಿಂದ ಶಿರಾ ತಾಲೂಕಿಗೆ ನೀರಾವರಿ ಸಮಸ್ಯೆಗೆ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಸೌಲಭ್ಯ ದೊರೆತಾಗ ಮಾತ್ರ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಲಿದೆ. ಈ ನಿಟ್ಟಿನಲ್ಲಿ ತಾಲೂಕಿನ ಜನತೆ ನೀರಿಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದು ಹೇಳಿದರು. ಹೃದಯ ರೋಗ ತಜ್ಞ ಡಾ. ಮುದ್ದರಂಗಪ್ಪ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಾರಂಭವಾಗಿ ೨೪ ವರ್ಷ ಕಳೆದಿದೆ. ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬವಾದರೆ ವೆಚ್ಚವೂ ಹೆಚ್ಚುತ್ತದೆ. ಆದ್ದರಿಂದ ಸರಕಾರಗಳು ನಿರ್ಲಕ್ಷ್ಯಮಾಡದೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.ಸಮಾವೇಶದಲ್ಲಿ ಕಸವನಹಳ್ಳಿ ರಮೇಶ್, ಡಾ. ಭವನಹಳ್ಳಿ ನಾಗರಾಜ್, ಆರ್. ಮುದ್ದಾರಂಗೇಗೌಡ ಮಹಾವಿದ್ಯಾಲಯ ಸಂಸ್ಥಾಪಕ ಅಧ್ಯಕ್ಷ ಎಂ. ರಂಗನಾಥ್, ಜೀನಿ ಸಂಸ್ಥೆ ಸಂಸ್ಥಾಪಕ ದಿಲೀಪ್ ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಹಲಗುಂಡೇಗೌಡ, ರೈತ ಮುಖಂಡ ಗೋವಿಂದರಾಜ್, ಅರುಣೋದಯ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಲಕ್ಕನಹಳ್ಳಿ ಮಂಜುನಾಥ್, ಜ್ಯೋತಿ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಿ.ಎನ್. ಪರಮೇಶ್ ಗೌಡ, ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ದಯಾನಂದ ಗೌಡ, ದೇವರಾಜ್, ಪ್ರಕಾಶ್ ಗೌಡ, ಬೂಪಣ್ಣ, ಕೃಷ್ಣೇಗೌಡ, ನಿಡಗಟ್ಟೆ ಮಂಜುನಾಥ್, ನಾದೂರು ಕೆಂಚಪ್ಪ, ತಿಮ್ಮಯ್ಯ, ಗುಜಾರಪ್ಪ, , ಪುನೀತ್ ಗೌಡ , ರಾಮಕೃಷ್ಣಪ್ಪ, ಚಿಕ್ಕಣ್ಣ, ರೈತ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ, ಜೆಸಿಬಿ ಈರಣ್ಣ, ದಿಲೀಪ್, ತಿಪ್ಪೇಸ್ವಾಮಿ ಮತ್ತು ಸಾವಿರಾರು ರೈತರು ಸಾರ್ವಜನಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು.