ಕನಕದಾಸರು ಈ ನಾಡಿನ ಮೊದಲ ಸಾತ್ವಿಕ ಬಂಡಾಯದ ದನಿಯಾಗಿದ್ದಾರೆ. ವರ್ಗ, ಜಾತಿ ಅಸಮಾನತೆಯ ವಿರುದ್ಧ ಪ್ರತಿಪಾದಿಸಿದ ಅವರು, ಸಮರ್ಪಣಾ ಮನೋಭಾವದ ಭಕ್ತಿಯ ಮೂಲಕ ಮಹತ್ತನ್ನು ಸಾಧಿಸಿದ ವ್ಯಕ್ತಿತ್ವ. ಮೇಲು- ಕೀಳುಗಳ ಪರಿಕಲ್ಪನೆ ಧಿಕ್ಕರಿಸಿ ಶೋಷಿತ ಮತ್ತು ಧಮನಿತ ವರ್ಗದ ಪರ ನಿಂತ ದಾರ್ಶನಿಕರಾಗಿದ್ದಾರೆ. ನವಿರು ಭಾವದ ಮನೋವಿಲಾಸದ ಕವಿಯಾಗಿ, ನಾಡರಕ್ಷಣೆಯ ಹೊಣೆಯೊತ್ತ ಕಲಿಯಾಗಿ, ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ಸಮಾಜ ಸುಧಾರಕನಾಗಿ ಕನಕದಾಸರು ಮುಖ್ಯವಾಗುತ್ತಾರೆ ಎಂದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ಸಮಸಮಾಜ ನಿರ್ಮಾಣದ ಪ್ರತಿಪಾದಕರಾಗಿ ಎಲ್ಲ ವರ್ಗಗಳ ಹಿತವನ್ನು ಬಯಸಿದ ಅಪ್ರತಿಮ ದಾರ್ಶನಿಕ ಕನಕದಾಸರ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುವ ಅಗತ್ಯವಿದೆ. 5 ಶತಮಾನಗಳಷ್ಟು ಹಿಂದೆಯೇ ಸಾಮಾಜಿಕವಾಗಿ ಅನೇಕ ಪಿಡುಗುಗಳ ವಿರುದ್ಧ ದನಿಯೆತ್ತಿದ ಕನಕದಾಸರ ಕೀರ್ತನೆಗಳ ಸಾರವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆ ಮೂಲಕ ಬದಲಾವಣೆ ಸಾಧ್ಯ ಎಂದರು.

ಕನಕದಾಸರು ಈ ನಾಡಿನ ಮೊದಲ ಸಾತ್ವಿಕ ಬಂಡಾಯದ ದನಿಯಾಗಿದ್ದಾರೆ. ವರ್ಗ, ಜಾತಿ ಅಸಮಾನತೆಯ ವಿರುದ್ಧ ಪ್ರತಿಪಾದಿಸಿದ ಅವರು, ಸಮರ್ಪಣಾ ಮನೋಭಾವದ ಭಕ್ತಿಯ ಮೂಲಕ ಮಹತ್ತನ್ನು ಸಾಧಿಸಿದ ವ್ಯಕ್ತಿತ್ವ. ಮೇಲು- ಕೀಳುಗಳ ಪರಿಕಲ್ಪನೆ ಧಿಕ್ಕರಿಸಿ ಶೋಷಿತ ಮತ್ತು ಧಮನಿತ ವರ್ಗದ ಪರ ನಿಂತ ದಾರ್ಶನಿಕರಾಗಿದ್ದಾರೆ. ನವಿರು ಭಾವದ ಮನೋವಿಲಾಸದ ಕವಿಯಾಗಿ, ನಾಡರಕ್ಷಣೆಯ ಹೊಣೆಯೊತ್ತ ಕಲಿಯಾಗಿ, ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ಸಮಾಜ ಸುಧಾರಕನಾಗಿ ಕನಕದಾಸರು ಮುಖ್ಯವಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಎಇಇ ಐ.ಎಂ.ರಮೇಶ್‌ಕುಮಾರ್, ಪಾಲಿಟೆಕ್ನಿಕ್ ಕಾಲೇಜು ಉಪಪ್ರಾಂಶುಪಾಲ ಗುರುದೇವ್, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಡಿ.ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್ ಮತ್ತಿತರರು ಉಪಸ್ಥಿತರಿದ್ದರು.