ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಗರ್ಭಕೊರಳ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಲಭ್ಯವಿದೆ ಎಂದು ಹಾಸನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯೆ ಡಾ. ರಂಗಲಕ್ಷ್ಮಿ ತಿಳಿಸಿದರು.ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಮಹಿಳಾ ವಿಭಾಗ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಏರ್ಪಡಿಸಲಾಗಿದ್ದ ಗರ್ಭಕೊರಳ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಲಸಿಕಾ ಶಿಬಿರ ಉದ್ಘಾಟಿಸಿ ಮಾತನಾಡಿ, ೯ರಿಂದ ೧೪ ವಯೋಮಿತಿಯೊಳಗಿನ ಹೆಣ್ಣುಮಕ್ಕಳಿಗೆ ಗರ್ಭಕೊರಳ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ನೀಡುತ್ತಿರುವುದರಿಂದ ಮುಂದಿನ ಪೀಳಿಗೆಯಲ್ಲಿ ಗರ್ಭಕೊರಳ ಕ್ಯಾನ್ಸರ್ ತಡೆಯಬಹುದು. ಭಾರತ ದೇಶದಲ್ಲಿ ಗರ್ಭಕೊರಳ ಕ್ಯಾನ್ಸರ್‌ನಿಂದ ಒಂದು ವರ್ಷದಲ್ಲಿ ಸುಮಾರು ೭೫ ಸಾವಿರದಿಂದ ಒಂದು ಲಕ್ಷ ಮಹಿಳೆಯರು ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ದಾನಿಗಳ ಸಹಕಾರದಿಂದ ಬೆಂಗಳೂರಿನಲ್ಲಿರುವ ಆರ್‍ಟಿಸ್ಟ್ ಸಂಸ್ಥೆಯಲ್ಲಿ ಒಂದು ಲಸಿಕೆಗೆ ರು. ೫೦೦ರಂತೆ ಕೊಂಡು ಲಸಿಕೆ ನೀಡಲಾಗುತ್ತಿದೆ.
ಹುಟ್ಟಿದ ಮಕ್ಕಳಿಗೆ ನೀಡುವ ಲಸಿಕೆಯೊಂದಿಗೆ ಗರ್ಭಕೊರಳ ಕ್ಯಾನ್ಸರ್ ತಡೆಗಟ್ಟುವ ಲಸಿಕೆಯನ್ನು ಸಹ ನೀಡಲು ವೈದ್ಯಕೀಯ ರಂಗದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಸಾಕಾರವಾಗುವ ನಿರೀಕ್ಷೆಯಿದೆ ಎಂದರು. ಔಷಧಿ ಅಂಗಡಿಗಳಲ್ಲೂ ಲಸಿಕೆ ಲಭ್ಯವಿದ್ದು ೨೦೦೦. ರು. ಹಣ ಪಾವತಿಸಿ ಲಸಿಕೆ ಪಡೆಯಬಹುದು. ಕೇಂದ್ರ ಸರ್ಕಾರ ಲಸಿಕೆಯನ್ನು ಉಚಿತವಾಗಿ ಕೊಡಲು ಮುಂದಾಗಬೇಕು. ದಾನಿಗಳು ಮುಂದೆ ಬಂದು ಲಸಿಕೆ ಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಮಹಿಳಾ ವೈದ್ಯರ ಸಂಘsದ ಜಿಲ್ಲಾ ಕಾರ್ಯದರ್ಶಿ ಡಾ. ಸಿ. ಎನ್. ದಿವ್ಯಶ್ರೀ ರವರು ಮಾತನಾಡಿ, ಜ. ೨೨ರಿಂದ ಜ. ೨೯ ರವರೆಗೆ ಜಾಗೃತಿ ಶಿಬಿರ ನಡೆಸಲಾಗುತ್ತಿದೆ. ವೈದ್ಯರು, ಸಂಘಸಂಸ್ಥೆ ಪ್ರತಿನಿಧಿಗಳು ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಆಸ್ಪತ್ರೆ ಸ್ತ್ರೀರೋಗ ತಜ್ಞ ವೈದ್ಯೆ ಡಾ. ಆಲಿಯಾರವರು ಮಾತನಾಡಿ, ದೇಶದಲ್ಲಿ ಶೇ. ೪೫ ರಷ್ಟು ಹೆಣ್ಣುಮಕ್ಕಳಿದ್ದಾರೆ. ಹಿಂದೆ ಲಕ್ಷಕ್ಕೊಬ್ಬರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದರು. ಇತ್ತೀಚೆಗೆ ಕ್ಯಾನ್ಸರ್ ಸಾಮಾನ್ಯ ಕಾಯಿಲೆಯಾಗಿದೆ. ಪ್ರತಿಯೊಬ್ಬ ಮಹಿಳೆ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ನಂತರ ಇತರೆ ಚಟುವಟಿಕೆಗೆ ಗಮನ ಕೊಡಬೇಕು ಎಂದರು.ಶಿಬಿರದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಮಹಿಳಾ ವೈದ್ಯರ ಸಂಘದ ಜಿಲ್ಲಾಧ್ಯಕ್ಷೆ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ನಿಸಾರ್ ಫಾತಿಮರವರು ಮಾತನಾಡಿ, ನಮ್ಮ ಆರೋಗ್ಯ ನಮ್ಮ ಹಕ್ಕು ಎಂಬಂತೆ, ಮಹಿಳೆಯರು ಆರೋಗ್ಯದ ಬಗ್ಗೆ ಜಾಗೃತರಾಗಬೇಕು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಮೆಗಾಕ್ಯಾಂಪ್ ನಡೆಸಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವ ಉದ್ದೇಶ ಹೊಂದಲಾಗಿದೆ ಎಂದರು. ಶಿಬಿರದಲ್ಲಿ ೨೫ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಯಿತು. ಲಸಿಕೆ ಕೊಳ್ಳಲು ಸಹಕರಿಸಿದ ಮಾತೃಶ್ರೀ ಮೆಡಿಕಲ್ಸ್ ಆನಂದ್, ವಾಯುಪುತ್ತ ಮೆಡಿಕಲ್ಸ್ ತೀರ್ಥಕುಮಾರ್ ಮತ್ತು ಲಯನ್ ಸಂಸ್ಥೆ ಮಾಜಿ ಅಧ್ಯಕ್ಷ ಆನಂದ್ ರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆ ಖಜಾಂಚಿ ಡಾ. ಟಿ. ಎಸ್. ದಿವ್ಯ, ಆರೋಗ್ಯ ಸಿಬ್ಬಂದಿಯಾದ ಸತೀಶ್, ದಾಕ್ಷಾಯಿಣಿ, ಮಂಜು, ಮುರಳಿ, ಅಬೂಬಕರ್, ಶ್ವೇತ, ಪಲ್ಲವಿ ಉಪಸ್ಥಿತರಿದ್ದರು.