ಸಾರಾಂಶ
ಕನ್ನಡಪ್ರಭವಾರ್ತೆ ಹೊಸದುರ್ಗ
ಮಾದಿಗ ಸಮುದಾಯ ಅನಿಷ್ಠ ಪದ್ದತಿಗಳಿಂದ ದೂರ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಕೊಡಿಸಬೇಕು ಎಂದು ಕರ್ನಾಟಕ ರಾಜ್ಯ ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್ ಹೇಳಿದರು.ಪಟ್ಟಣದ ರಾಧಾಕೃಷ್ಣ ಕಲ್ಯಾಣ ಮಂದಿರದಲ್ಲಿ ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 12ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಂಸದ ಗೋವಿಂದ ಎಂ ಕಾರಜೋಳರವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಹುದ್ದೆ ಪಡೆಯುವುದು ಅಷ್ಟು ಸುಲಭವಲ್ಲ. ಪ್ರಯತ್ನ ಪಡದೇ ಹೊರತು ಯಾವುದೇ ಅವಕಾಶ ಸಿಗುವುದಿಲ್ಲ. ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಬೇಕು. ಶೇ. 90% ರಷ್ಟು ಮಾದಿಗ ಸಮುದಾಯದ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಂತದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಮೀಸಲಾತಿಯಿಂದ ಅವಕಾಶ ಪಡೆದುಕೊಂಡ ನೌಕರರು ಮತ್ತು ರಾಜಕಾರಣಿಗಳು ಸಮುದಾಯಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ಅರಿತುಕೊಳ್ಳಬೇಕಿದೆ. ರಾಜಕೀಯ ಬೇರ್ಪಡಿಸಿ ಸಮುದಾಯ ಎಂದಾಗ ಎಲ್ಲರೂ ಒಗ್ಗಟ್ಟಾಗಬೇಕು. ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿ ನೇರ ಸಾಲ ಕೊಡುವ ಅವಕಾಶವಿದ್ದು, ಈ ಭಾಗದ ಜಮೀನಿಲ್ಲದ ರೈತರಿಗೆ ಜಮೀನು, ಎರಡು ಲಕ್ಷ ನೇರ ಸಾಲ ಕೊಡಿಸುವುದು, ಕೊಳವೆಬಾವಿ ಮಂಜೂರು ಮಾಡುವ ಕೆಲಸ ಮಾಡುತ್ತೇನೆ ಎಂದರು.ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ದೇವಿರಾಜ್ ಮಾತನಾಡಿ, ಯುವ ಪ್ರತಿಭೆಗಳಿಗೆ ಪುರಸ್ಕಾರ ಕಾರ್ಯಕ್ರಮ ಮಾಡುವುದು ಅತ್ಯಂತ ಶ್ಲಾಘನೀಯ. ನಾವು ಇಲ್ಲಿ ಇಲ್ಲದಿರಬಹುದು. ಆದರೆ ನಮ್ಮ ಸಾಧನೆಗಳ ಬಗ್ಗೆ ಮುಂದಿನ ಪೀಳಿಗೆ ಮಾತನಾಡುತ್ತಾರೆ. ಎಲ್ಲಾ ಸಮುದಾಯಗಳು ನಾಗಾಲೋಟದಲ್ಲಿ ಸ್ಪರ್ಧೆ ಮಾಡುತ್ತಿವೆ. ಈ ಜವಾಬ್ದಾರಿಯನ್ನು ಅರಿತು ನಮ್ಮ ಮಕ್ಕಳ ಅಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಚಿತ್ರದುರ್ಗ ಕೌಶಲ್ಯ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಿ. ಉಮೇಶ್ ಮಾತನಾಡಿ, ಛಲವಿದ್ದರೆ ಸಾಧನೆಗೆ ಯಾವುದೂ ಅಡ್ಡಿ ಆಗುವುದಿಲ್ಲ. ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಅಧ್ಯಯನ ಮಾಡಬೇಕು. ಪ್ರಸ್ತುತ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದು ನಮ್ಮ ಜವಾಬ್ದಾರಿ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ, ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್ ಕೆ.ವಿ. ಜಗದೀಶ್, ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮೂರ್ತಪ್ಪ, ಉಪಾನಂದನಾಧಿಕಾರಿ ಮಾರುತಿ ಪ್ರಸಾದ್, ಸಮಾಜದ ಮುಖಂಡ ಗೂಳಿಹಟ್ಟಿ ಕೃಷ್ಣಮೂರ್ತಿ, ನಾಕಿಕೆರೆ ತಿಪ್ಪಯ್ಯ, ರಾಘವೇಂದ್ರ, ತುಂಬಿನಕೆರೆ ಬಸವರಾಜ್, ಕೆ. ಹನುಮಂತಪ್ಪ, ಡಿ. ಗೋದಪ್ಪ, ಎಚ್. ಹೊರಕೇರಪ್ಪ, ಜಿ.ಆರ್. ಶೇಖರಪ್ಪ, ಎಚ್. ರಂಗಸ್ವಾಮಿ, ಎನ್. ಬಸವರಾಜು, ಪಿ.ಎಚ್. ಚನ್ನರಾಯಪ್ಪ, ವೈ. ಕುಮಾರಸ್ವಾಮಿ, ಸಿ. ಪರಮೇಶ್ವರಪ್ಪ, ಎಚ್. ರಂಗಸ್ವಾಮಿ, ಆರ್. ಪ್ರಕಾಶ್, ಮಂಜುಳಾ, ಮಲ್ಲಿಕಾರ್ಜುನ್, ಮಂಜುನಾಥ ಹಾಗೂ ಸಮಾಜದ ಮುಖಂಡರು ಕಲಾವಿದರು ಮತ್ತಿತರಿದ್ದರು.