ರೈಲು ಮಾರ್ಗ ಲೋಕಾರ್ಪಣೆಯ ಕ್ರೆಡಿಟ್ ಪಡೆಯಲು ಮುಸುಕಿನ ಗುದ್ದಾಟ

| Published : Mar 13 2024, 02:12 AM IST

ರೈಲು ಮಾರ್ಗ ಲೋಕಾರ್ಪಣೆಯ ಕ್ರೆಡಿಟ್ ಪಡೆಯಲು ಮುಸುಕಿನ ಗುದ್ದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಘಾಟನೆಗೊಂಡ ತಳಕಲ್-ಲಿಂಗನಬಂಡಿ ನೂತನ ರೈಲು ಮಾರ್ಗಕ್ಕೆ ಯಲಬುರ್ಗಾ-ಕುಕನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಬ್ಯಾನರ್ ಅಳವಡಿಸುವ ಮೂಲಕ ಶುಭಾಶಯ ಕೋರಿದೆ.

ಬ್ಯಾನರ್ ಅಳವಡಿಸುವ ಮೂಲಕ ಶುಭಾಶಯ ಕೋರಿದ ಕಾಂಗ್ರೆಸ್

ಕನ್ನಡಪ್ರಭ ವಾರ್ತೆ ಕುಕನೂರು

ಬಹು ನಿರೀಕ್ಷಿತ ತಳಕಲ್ - ಲಿಂಗನಬಂಡಿ ನೂತನ ರೈಲು ಮಾರ್ಗ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಂಡಿದೆ.

ಉದ್ಘಾಟನೆಗೊಂಡ ತಳಕಲ್-ಲಿಂಗನಬಂಡಿ ನೂತನ ರೈಲು ಮಾರ್ಗಕ್ಕೆ ಯಲಬುರ್ಗಾ-ಕುಕನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಬ್ಯಾನರ್ ಅಳವಡಿಸುವ ಮೂಲಕ ಶುಭಾಶಯ ಕೋರಿದೆ. ಆದರೆ ಸಂಸದ ಸಂಗಣ್ಣ ಕರಡಿ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಲಿಂಗನಬಂಡಿಗೆ ತೆರಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯವರೇ ಭಾಗಿಯಾಗಿರುವುದು ಕಾಂಗ್ರೆಸ್ ಕಾರ್ಯಕರ್ತರು ಕಾಣದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಆಹ್ವಾನ ಇದ್ದರೂ ಸಹ ಕೆಲಸದ ಕಾರಣ ಅವರು ಹಾಜರಾಗಿಲ್ಲ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೊಪ್ಪಳ ಸಂಸದ ಸಂಗಣ್ಣ ಕರಡಿಯವರ ಅವಿರತ ಶ್ರಮ, ಮುತುವರ್ಜಿಯಿಂದ ಕೊನೆಗೂ ರೈಲ್ವೆ ಯೋಜನೆ ಪೂರ್ಣಗೊಂಡು ಜನಸಾಮಾನ್ಯರ ಕನಸು ನನಸಾಗುವಂತಾಗಿದೆ. ಕುಷ್ಟಗಿ ವರೆಗಿನ ಕೊನೆಯ ಹಂತದ ಕಾಮಗಾರಿ ಮಾತ್ರ ಬಾಕಿ ಇದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ರೈಲ್ವೆ ಯೋಜನೆ ಪ್ರಾರಂಭಗೊಳ್ಳುವಲ್ಲಿ ಬಸವರಾಜ್ ರಾಯರಡ್ಡಿ ಅವರು, ಕೇಂದ್ರದ ಬಿಜೆಪಿ ಸರ್ಕಾರದಿಂದ ವಿಶೇಷ ಅನುದಾನ ಕಲ್ಪಿಸಿಕೊಡುವ ಮೂಲಕ ಯೋಜನೆ ಪೂರ್ಣಗೊಳ್ಳುವಲ್ಲಿ ಸಂಸದ ಸಂಗಣ್ಣ ಕರಡಿಯವರ ಶ್ರಮ ಸೇರಿದಂತೆ ಇಬ್ಬರ ಪಾತ್ರವೂ ಕೂಡಾ ಇದರಲ್ಲಿ ಮಹತ್ವದ್ದಾಗಿದೆ. ಆದರೆ ಈ ಕ್ರೆಡಿಟ್ ಪಡೆಯುವಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಮುಸುಕಿನ ಗುದ್ದಾಟ ಸಹ ಇದೆ.

ಮೊದಲಿಗೆ ಬಸವರಾಜ್ ರಾಯರೆಡ್ಡಿ ಅವರು ಗದಗ-ವಾಡಿ ರೈಲ್ವೆ ಯೋಜನೆ ಕೈಗೆತ್ತಿಕೊಂಡಾಗ ಬ್ಯಾನರುಗಳಲ್ಲಿ ಹಾಕಿದ ಪೋಸ್ಟರ್‌ನ್ನು ನೋಡಿದ ಬಿಜೆಪಿ ಕಾರ್ಯಕರ್ತರು, ಮುಖಂಡರು, ರಾಯರೆಡ್ಡಿಯವರು ಕೇವಲ ಪೋಸ್ಟರ್‌ಗಳಲ್ಲಿ ರೈಲು ಓಡಿಸುತ್ತಾರೆ. ನಿಜವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಇವರು ಬಿಡುತ್ತಿರುವುದು ರೈಲು ಅಲ್ಲ, ರೀಲು ಎಂದು ಕುಚೇಷ್ಟೆಯಿಂದ ಮಾತನಾಡುತ್ತಿದ್ದರು. ಈಗ ಈ ಕಾಮಗಾರಿಯ ವಿಮರ್ಶೆಯನ್ನ ಹೇಗೆ ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ. ಗದಗ-ವಾಡಿ ರೈಲ್ವೆ ಯೋಜನೆ ಈಗ ಯಶಸ್ವಿ ಯೋಜನೆಯಾಗಿ ಲೋಕಾರ್ಪಣೆಗೊಳ್ಳುತ್ತಿರುವುದು ಹೆಮ್ಮೆ ಸಂಗತಿ ಎಂದು ಕುಕನೂರಿನ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದ್ದಾರೆ.